BengaluruTechTechnology

ರಾಜಕೀಯ ನಿವೃತ್ತಿ ಮಾತನ್ನಾಡಿದ ಸಿಎಂ ಸಿದ್ದರಾಮಯ್ಯ

ಬೆಂಗಳೂರು; ಸಿಎಂ ಸಿದ್ದರಾಮಯ್ಯ ರಾಜಕೀಯ‌‌ ನಿವೃತ್ತಿಯ ಮಾತನ್ನಾಡಿದ್ದಾರೆ. ಹಾಗಂತ ಅವರು ರಾಜಕೀಯದಿಂದ ನಿವೃತ್ತಿ ಘೊಷಿಸುತ್ತಿಲ್ಲ. ಅವರು ಮಾಡಿರುವ ಸವಾಲದು. ಗುತ್ತಿಗೆದಾರರಿಂದ ಐದು ಪೈಸೆ ಕಮೀಷನ್ ಪಡೆದಿದ್ದೇನೆ ಎಂದು ಸಾಬೀತು ಮಾಡಿದರೆ ರಾಜಕೀಯ ನಿವೃತ್ತಿ ಪಡೆಯುತ್ತೇನೆ ಎಂದು ಸಿಎಂ ಸಿದ್ದರಾಮಯ್ಯ ಸವಾಲು ಹಾಕಿದ್ದಾರೆ.

  ಬೆಂಗಳೂರಿನ ಅರಮನೆ ಮೈದಾನದಲ್ಲಿ ನಡೆದ ಗುತ್ತಿಗೆದಾರರ ಸಮಾವೇಶದಲ್ಲಿ ಅವರು ಮಾತನಾಡಿದರು. ನಾನು 2013ರಿಂದ 2018ರವರೆಗೆ ಮೊದಲ ಬಾರಿಗೆ ಮುಖ್ಯಮಂತ್ರಿ ಆಗಿದ್ದೆ. 2023ರ ಮೇ 20ರಿಂದ ಮತ್ತೆ ಮುಖ್ಯಮಂತ್ರಿ ಆಗಿದ್ದೇನೆ. ಈ ವೇಳೆ ನಾನು ಐದು ಪೈಸೆ ಕಮೀಷನ್ ಪಡೆದಿರುವುದು ಸಾಬೀತು ಮಾಡಿದರೂ ರಾಜಕೀಯ ನಿವೃತ್ತಿಯಾಗ್ತೀನಿ ಎಂದು ಸಿದ್ದರಾಮಯ್ಯ ಹೇಳಿದರು.

ನಾನು ಗುತ್ತಿಗೆದಾರರಿಂದ ಕಮೀಷನ್ ಪಡೆದಿಲ್ಲ. ಒಂದು ವೇಳೆ ಯಾರಾದರೂ ಕೊಟ್ಟಿದ್ದಾರೆಂದು ಸಾಬೀತು ಮಾಡಿದರೆ ನಾನು ರಾಜಕೀಯದಲ್ಲೇ ಇರೋದಿಲ್ಲ. ಗುತ್ತಿಗೆದಾರರು ಬಾಕಿ ಇರುವ ಬಿಲ್ ಹಣ ಪಾವತಿ ಮಾಡುವಂತೆ ಕೇಳುತ್ತಿದ್ದಾರೆ. ನಮ್ಮ ಸರ್ಕಾರ ಇದ್ದಾಗ ಯಾರ ಬಿಲ್ ಕೂಡಾ ಬಾಕಿ ಉಳಿಸಿಕೊಂಡಿರಲಿಲ್ಲ. ಬಿಜೆಪಿ ಕಾಲದಲ್ಲಿ ಸರಿಯಾಗಿ ಬಿಲ್ ಪಾವತಿ ಮಾಡಿಲ್ಲ. ಇದಕ್ಕಾಗಿ‌ ನಾವು ಹಲವು ಬಾರಿ ಮೀಟಿಂಗ್ ಮಾಡಿದ್ದೇವೆ. ಪಾವತಿ ಮಾಡುತ್ತೇವೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.

  ಬಿಜೆಪಿ ಸರ್ಕಾರದಲ್ಲಿ ಹಣ ಇಲ್ಲದಿದ್ದರೂ ಟೆಂಡರ್ ಕರೆಯಲಾಗಿತ್ತು. ಈಗ ಗುತ್ತಿಗೆದಾರರು ಒಂದೇ ಬಾರಿ ಬಿಲ್‌ರಿಲೀಸ್ ಮಾಡಬೇಕು ಅಂತ ಗುತ್ತಿಗೆದಾರರು ಆಗ್ರಹ ಮಾಡ್ತಿದ್ದಾರೆ. ಆದ್ರೆ ಅಷ್ಟು ಹಣ ಕೊಡೋದಕ್ಕೆ ನಾನು ಹಣ ಪ್ರಿಂಟ್ ಮಾಡೋದಕ್ಕೆ ಆಗುತ್ತಾ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.

  ನಾವು ಗುತ್ತಿಗೆದಾರರ‌ ಬಿಲ್ ಪಾವತಿ ಮಾಡುತ್ತೇವೆ. ಹಂತ ಹಂತವಾಗಿ ಬಿಲ್ ನೀಡುತ್ತೇವೆ. ಗುತ್ತಿಗೆದಾರರು ನನಗೆ ಮನವಿ ಮಾಡಿದ್ದಾರೆ. ನಾನು ಕೂಲಂಕಷವಾಗಿ ಪರಿಶೀಲನೆ ಮಾಡಿ ಸಮಸ್ಯೆ ಬಗೆ ಹರಿಸುತ್ತೇನೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.

Share Post