Politics

ಸಿದ್ದರಾಮಯ್ಯನವರಿಗೆ ಜೆಡಿಎಸ್‌ ಫೋಬಿಯಾ ಕಾಡಿದೆ: ಸರಣಿ ಟ್ವೀಟ್‌ನಲ್ಲಿ ಹೆಚ್‌ಡಿಕೆ ವಾಗ್ದಾಳಿ

ಬೆಂಗಳೂರು: ಸರಣಿ ಟ್ವೀಟ್‌ಗಳ ಮೂಲಕ ವಿಪಕ್ಷ ನಾಯಕ ಸಿದ್ದರಾಮಯ್ಯ ಬಗೆ ಮಾಜಿ ಸಿಎಂ ಹೆಚ್‌ಡಿಕೆ ವ್ಯಂಗ್ಯವಾಡಿದ್ದಾರೆ, ಸುಳ್ಳು ಸ್ಲೋಗನ್‌ಗಳ ಸೃಷ್ಟಿಕರ್ತ, ಟರ್ಮಿನೇಟರ್‌, ಸಿದ್ದಕಲೆಯ ನಿಪುಣಾಗ್ರೇಸರಿಗೆ ಈಗ ʻಜೆಡಿಎಫ್‌ʼ ಎಂಬ ಹೊಸ ಜಪ ಮಾಡಿಕೊಂಡು ತಮ್ಮ ಜಾತ್ಯಾತೀತ ತತ್ವಾದರ್ಶಗಳಿಗೆ ಮಂಡ್ಯದಲ್ಲಿ ಎಳ್ಳುನೀರು ಬಿಟ್ಟಿದ್ದಾರೆ. ಸಹಕಾರ ಸಚಿವರ ಸಹಾಯಕನನ್ನು ಗೆಲ್ಲಿಸಿಕೊಳ್ಳಲು ʻಜಾತಿ ಸಹಕಾರಕ್ಕೆ ಮೊರೆ ಹೋಗಿದ್ದಾರೆ!! ಅಯ್ಯೋ, ಎಂಥಾ ದುರ್ವಿಧಿ. ಮತ ಫಸಲಿಗಾಗಿ ಜಾತಿ ರಾಜಕೀಯ ಮಾಡುತ್ತಿರುವ ನಕಲಿ ಜಾತ್ಯಾತೀತ ಶೂರನ ಅಸಲಿ ರೂಪ ಕಳಚಿದೆ. ಸಮುದಾಯದ ಅಧ್ಯಕ್ಷರೊಬ್ಬರು ನೀವು ಮತ ಹಾಕುವುದು ಕಾಂಗ್ರಸ್‌ ಪಕ್ಷಕ್ಕಲ್ಲ, ನಮ್ಮ ಸಮುದಾಯದ ಸಿದ್ಧಕಲಾಕೋವಿದನಿಗೆ ಎಂದು ಮನೆಮನೆಗೂ ಹೋಗಿ ಪ್ರಚಾರ ಮಾಡುತ್ತಿರುವುದು ಮಂಡ್ಯದಲ್ಲಿ ಮಜಭೂತಾಗಿ ನಡೆಯುತ್ತಿದೆ. ಹೇಳುವುದು ಒಂದು ಮಾಡುವುದು ಇನ್ನೊಂದು. ಸಿದ್ದರಾಮಯ್ಯನವರಿಗೆ ಜೆಡಿಎಸ್‌ ಫೋಬಿಯಾ ಕಾಡುತ್ತಿದೆ, ಚುನಾವಣೆ ಬಂದ್ರೆ ಜೆಡಿಎಸ್‌ ಚಳಿ-ಜ್ವರ ಹತ್ತುತ್ತದೆ, ಈ ಜ್ವರ ಬಿಡಿಸಿಕೊಳ್ಳಲು ಸಿದ್ದಸೂತ್ರದಾರ ಬಳಸುವ ಔಷಧವೇ ʻಜೆಡಿಎಫ್‌ʼ ಅವರನ್ನು ಉಳಿಸುವ ಟಾನಿಕ್‌ ಹೆಸರೇ ಜೆಡಿಎಸ್‌ ಕುಟುಂಬ ರಾಜಕಾರಣ. ಹಾಗಾದ್ರೆ ಅವರದ್ದು #ಎಸ್‌ಸಿಎಫ್(ಸಿದ್ದಸೂತ್ರದಾರ ಕಾಂಗ್ರಸ್‌ ಫ್ಯಾಮಿಲಿ) ಅಲ್ಲವೇ..?

ಜೆಡಿಎಸ್‌, ಬಿಜೆಪಿ ʻಬಿʼ ಟೀಂ ಎಂದು ಭಜನೆ ಮಾಡುವವರು, ಸಹಕಾರ ಸಚಿವರ ಸಹಾಯಕನನ್ನು ಅಭ್ಯರ್ಥಿ ಮಾಡಿದ್ದು ಯಾರಿಗೆ ಸಹಕಾರ ನೀಡಲು? ಜಾತ್ಯಾತೀತತೆ ಮುಖವಾಡ ಹಾಕೊಂಡು ಬೈಯುವವರು ಅದೇ ಪಕ್ಷದ ಸಚಿವರ ಪಿಎಗೆ ಟಿಕೆಟ್‌ ಕೊಟ್ಟಿದ್ದರ ಮರ್ಮ ಏನು?ಯಾರ ಲೆಕ್ಕ ಚುಕ್ತಾ ಮಾಡಲಿಕ್ಕೆ ಮಾಡಿಕೊಂಡ ಒಳ ಒಪ್ಪಂದ? ಎಂದು ಕಿಡಿಕಾರಿದ್ದಾರೆ.  ಜಾತ್ಯಾತೀತತೆಯ ಜಗಜಟ್ಟಿ ಮೈಸೂರಿನಲ್ಲಿ ಮಾಡಿದ ಜಾತಿ ರಾಜಕಾರಣ ಗೊತ್ತಿದೆ. ಸಂದೇಶ ಸನ್ನಿಧಿಯಲ್ಲಿ  ಕೂತು ಕಾಂಗ್ರೆಸ್‌ ಮತದಾರರ 2ನೇ ಪ್ರಾಶಸ್ತ್ಯದ ಮತಗಳು ಬಿಜೆಪಿಗೇ ಹೋಗಬೇಕು ಜೆಡಿಎಸ್‌ಗಲ್ಲ ಎಂದು ಫರ್ಮಾನು  ಹೊರಡಿಸಿದ ʻಚಾಮುಂಡೇಶ್ವರಿ ಕ್ಷೇತ್ರ ತಿರಸ್ಕೃತ, ಸುಳ್ಳು ಸ್ಲೋಗನ್‌ಗಳ ಸೃಷ್ಟಿಕರ್ತನ ನಾಟಕದ ಪರದೆ ಜಾರಿಬಿದ್ದಿದೆ, ರಾಜಕೀಯ ಆರಂಭಿಸಿದ ಮಾತೃಪಕ್ಷವನ್ನೇ ಮುಳುಗಿಸಲು ಹೊರಟ ಆ ನಾಯಕರು, ಕೈ ಹಿಡಿದ ಸ್ವಪಕ್ಷವನ್ನೂ ಸ್ವಾಹಾ ಮಾಡ್ತಿದ್ದಾರೆ. ವಿನಾಶಕಾಲೇ ವಿಪರೀತ ಸುಳ್ಳು?, ಅವೇ ಅವರನ್ನು ಸುಡುತ್ತವೆ. ಆಟ ಈಗ ಶುರುವಾಗಿದೆ ಎಂದು ಸರಣಿ ಟ್ವೀಟ್‌ ಮೂಲಕ ಆಕ್ರೋಶ ವ್ಯಕ್ತಪಡಿಸಿದ್ದಾರೆ.

 

Share Post