BengaluruPolitics

Congress Protest: ದೆಹಲಿಯಲ್ಲಿ ನಾಳೆ ಕಾಂಗ್ರೆಸ್‌ ಪ್ರತಿಭಟನೆ; ಜೆಡಿಎಸ್‌, ಬಿಜೆಪಿ ನಾಯಕರಿಗೂ ಆಹ್ವಾನ!

ಬೆಂಗಳೂರು; ನಾಳೆ ದೆಹಲಿಯ ಜಂತರ್‌ ಮಂತರ್‌ನಲ್ಲಿ (janthar manthar) ರಾಜ್ಯದ ಕಾಂಗ್ರೆಸ್‌ ನಾಯಕರೇ ತುಂಬಿರುತ್ತಾರೆ. ಕೇಂದ್ರ ಸರ್ಕಾರ ರಾಜ್ಯಕ್ಕೆ ಅನುದಾನ ನೀಡುವಲ್ಲಿ ನಿರ್ಲಕ್ಷ್ಯ ವಹಿಸುತ್ತಿದೆ ಎಂದು ಆರೋಪಿಸಿ ರಾಜ್ಯದ ಕಾಂಗ್ರೆಸ್‌ ನಾಯಕರು, ಕಾಂಗ್ರೆಸ್‌ ಜನಪ್ರತಿನಿಧಿಗಳು (Congress Protest) ನಾಳೆ ಬೆಳಗ್ಗೆ 11 ಗಂಟೆ ದೆಹಲಿಯ ಜಂತರ್‌ ಮಂತರ್‌ನಲ್ಲಿ ಪ್ರತಿಭಟನೆ ಆರಂಭಿಸಲಿದ್ದಾರೆ. ಇದಕ್ಕಾಗಿ ಈಗಾಗಲೇ ಸಿದ್ಧತೆಗಳು ನಡೆದಿವೆ. ವಿಶೇಷ ಅಂದ್ರೆ ಕಾಂಗ್ರೆಸ್‌ನ ಈ ಪ್ರತಿಭಟನೆಗೆ ಬಿಜೆಪಿ ಹಾಗೂ ಜೆಡಿಎಸ್‌ ನಾಯಕರನ್ನೂ (BJP and JDS Leaders) ಆಹ್ವಾನಿಸಲಾಗಿದೆ.

ಕಾಂಗ್ರೆಸ್‌ನಿಂದ ಯಾಕೆ ಪ್ರತಿಭಟನೆ..?

ರಾಜ್ಯದಲ್ಲಿ ಸರಿಯಾಗಿ ಮಳೆಯಾಗದೆ ಸುಮಾರು 222 ತಾಲ್ಲೂಕುಗಳು ಬರಪೀಡಿತವಾಗಿವೆ. ಆದ್ರೆ ಕೇಂದ್ರ ಸರ್ಕಾರ ಬರ ಪರಿಹಾರ ನೀಡಿಲ್ಲ. ಕುಡಿಯುವ ನೀರಿನ ಯೋಜನೆಗಳಿಗೆ ಹಣ ಕೇಳಿದರೂ ಕೊಟ್ಟಿಲ್ಲ. ದೇಶದಲ್ಲೇ ಅತಿಹೆಚ್ಚು ತೆರಿಗೆ ಬರುವ ರಾಜ್ಯಗಳಲ್ಲಿ ಕರ್ನಾಟಕ ಎರಡನೇ ಸ್ಥಾನದಲ್ಲಿದೆ. ಕೇಂದ್ರಕ್ಕೆ ರಾಜ್ಯದಿಂದ ಅತಿಹೆಚ್ಚು ತೆರಿಗೆ ಹಣ ಹೋಗುತ್ತಿದ್ದರೂ, ರಾಜ್ಯದ ಪಾಲನ್ನು ಸರಿಯಾಗಿ ಕೊಡುತ್ತಿಲ್ಲ ಎಂದು ಕಾಂಗ್ರೆಸ್‌ ಆರೋಪ ಮಾಡುತ್ತಿದೆ. ಇತ್ತೀಚೆಗೆ ನಿರ್ಮಲಾ ಸೀತಾರಾಮನ್‌ ಅವರು ಮಂಡಿಸಿದ ಬಜೆಟ್‌ನಲ್ಲಿ ರಾಜ್ಯಕ್ಕೆ ಅನ್ಯಾಯ ಮಾಡಲಾಗಿದೆ ಎಂದು ಆರೋಪಿಸಲಾಗಿದೆ. ಹೀಗಾಗಿ ಕೇಂದ್ರ ಸರ್ಕಾರದ ಗಮನ ಸೆಳೆಯೋ ಸಲುವಾಗಿ ನಾಳೆ ದೆಹಲಿಯಲ್ಲಿ ಕಾಂಗ್ರೆಸ್‌ ಈ ಪ್ರತಿಭಟನೆ ಹಮ್ಮಿಕೊಂಡಿದೆ.
ಈ ಪ್ರತಿಭಟನೆಯಲ್ಲಿ ರಾಜ್ಯದ ಎಲ್ಲಾ ಕಾಂಗ್ರೆಸ್‌ ಶಾಸಕರು, ವಿಧಾನಪರಿಷತ್‌ ಸದಸ್ಯರು, ಸಂಸದರು, ರಾಜ್ಯಸಭಾ ಸದಸ್ಯರು ಸೇರಿದಂತೆ ಪ್ರಮುಖ ಕಾಂಗ್ರೆಸ್‌ ಮುಖಂಡರೆಲ್ಲಾ ಪಾಲ್ಗೊಳ್ಳಲಿದ್ದಾರೆ. ಇಂದು ಸಂಜೆಯೇ ಎಲ್ಲರೂ ದೆಹಲಿಗೆ ತೆರಳಲಿದ್ದಾರೆ. ಇಂದು ರಾತ್ರಿ ದೆಹಲಿಯಲ್ಲೇ ಉಳಿದುಕೊಂಡು ನಾಳೆ ಬೆಳಗ್ಗೆ ನಡೆಯುವ ಪ್ರತಿಭಟನೆಯಲ್ಲಿ ಪಾಲ್ಗೊಳ್ಳಲಿದ್ದಾರೆ.

ರಾತ್ರೋರಾತ್ರಿ ಸ್ಥಳ ಪರಿಶೀಲಿಸಿದ ಡಿಸಿಎಂ ಡಿ.ಕೆ.ಶಿವಕುಮಾರ್‌

ಡಿಸಿಎಂ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಅವರು ರಾತ್ರೋರಾತ್ರಿ ದೆಹಲಿಯ ಜಂತರ್‌ ಮಂತರ್‌ಗೆ ಭೇಟಿ ಕೊಟ್ಟಿದ್ದರು. ಅಲ್ಲಿನ ಸಿದ್ಧತೆಗಳನ್ನು ವೀಕ್ಷಣೆ ಮಾಡಿದರು. ವೇದಿಕೆ ನಿರ್ಮಾಣದ ಬಗ್ಗೆ ಅಲ್ಲಿ ಕೆಲಸ ಮಾಡುತ್ತಿರುವವವರಿಗೆ ಸಲಹೆ ಸೂಚನೆಗಳನ್ನು ಕೂಡಾ ಕೊಟ್ಟಿದ್ದಾರೆ. ಇದೇ ವೇಳೆ ಯುವ ಕಾಂಗ್ರೆಸ್‌ ಅಧ್ಯಕ್ಷ ಮಹಮದ್‌ ನಲಪಾಡ್‌, ಸಂಸದ ಡಿ.ಕೆ.ಸುರೇಶ್‌ ಕೂಡಾ ಇದ್ದರು. ಸಿದ್ಧತೆಗಳ ಬಗ್ಗೆ ಡಿ.ಕೆ.ಶಿವಕುಮಾರ್‌ ಅವರಿಗೆ ಮಾಹಿತಿ ನೀಡಿದರು.

ಬಿಜೆಪಿ-ಜೆಡಿಎಸ್‌ ನಾಯಕರಿಗೆ ಆಹ್ವಾನ

ಕಾಂಗ್ರೆಸ್‌ ಈಗ ಪ್ರತಿಭಟನೆ ಮಾಡುತ್ತಿರುವುದು ಎನ್‌ಡಿಎ ಸರ್ಕಾರದ ವಿರುದ್ಧ. ಆದ್ರೆ ಇದರ ಭಾಗವಾಗಿರುವ ಬಿಜೆಪಿ ಹಾಗೂ ಜೆಡಿಎಸ್‌ ನಾಯಕರಿಗೂ ಕಾಂಗ್ರೆಸ್‌ ನಾಯಕರು ಆಹ್ವಾನ ಕೊಟ್ಟಿದ್ದಾರೆ. ರಾಜ್ಯದ ಹಿತದೃಷ್ಟಿಯಿಂದ ಹೋರಾಟದಲ್ಲಿ ಪಾಲ್ಗೊಳ್ಳುವಂತೆ ಸಿಎಂ ಸಿದ್ದರಾಮಯ್ಯ ಕರೆ ಕೊಟ್ಟಿದ್ದಾರೆ. ರಾಜ್ಯದ ಎಲ್ಲಾ 25 ಬಿಜೆಪಿ ಸಂಸದರು, ರಾಜ್ಯಸಭಾ ಸದಸ್ಯರು ಹಾಗೂ ಜೆಡಿಎಸ್‌ನ ಸದಸ್ಯರೂ ಪಾಲ್ಗೊಳ್ಳುವಂತೆ ಮನವಿ ಮಾಡಿಕೊಂಡಿದ್ದಾರೆ.

Share Post