Krishna idol; ಕೃಷ್ಣಾ ನದಿಯಲ್ಲಿ ಪುರಾತನ ಶ್ರೀಕೃಷ್ಣನ ಮೂರ್ತಿ ಪತ್ತೆ
ರಾಯಚೂರು; ನದಿಗೆ ಅಡ್ಡಲಾಗಿ ಸೇತುವೆ ನಿರ್ಮಾಣ ಕಾರ್ಯದ ವೇಳೆ ಪುರಾತನ ಕಾಲದ ವಿಗ್ರಹಗಳು ಸಿಕ್ಕಿವೆ. ರಾಯಚೂರಿನ (Raichur) ಶಕ್ತಿನಗರದ ಬಳಿ ಕೃಷ್ಣಾ ನದಿಗೆ (Krishna river) ಸೇತುವೆ ನಿರ್ಮಿಸಲಾಗುತ್ತಿದೆ. ಈ ವೇಳೆ ನದಿಯಲ್ಲಿ ದಶಾವತಾರದಲ್ಲಿರುವ ಶ್ರೀಕೃಷ್ಣ ಹಾಗೂ ಶಿವಲಿಂಗ ಮೂರ್ತಿಗಳು (srikrishna and shivalinga idol) ಪತ್ತೆಯಾಗಿವೆ.
ದೇವಸ್ಥಾನಗಳ ಧ್ವಂಸದ ವೇಳೆ ಎಸೆದಿರುವ ಸಾಧ್ಯತೆ
ಅಲ್ಲಿ ಕೆಲಸ ಮಾಡುತ್ತಿದ್ದವರು ಎರಡೂ ವಿಗ್ರಹಗಳನ್ನು ಸುರಕ್ಷಿತವಾಗಿ ಮೇಲೆತ್ತಿದ್ದಾರೆ. ಅವುಗಳನ್ನು ಪುರಾತತ್ವ ಇಲಾಖೆ ಸುಪರ್ದಿಗೆ ನೀಡಲಾಗಿದೆ.
ಈ ಭಾಗದಲ್ಲಿ ಅನೇಕ ರಾಜಮನೆತನಗಳು ಆಳಿದ್ದವು. ರಾಯಚೂರು ಸುತ್ತಮುತ್ತ ಸುಮಾರು 163 ಯುದ್ಧಗಳು ನಡೆದಿವೆ ಎಂದು ಇತಿಹಾಸ ಹೇಳುತ್ತದೆ. ಈ ಯುದ್ಧಗಳ ವೇಳೆ ಹಲವು ದೇವಸ್ಥಾಗಳು ಧ್ವಂಸವಾಗಿದ್ದವು. ಹೀಗೆ ಧ್ವಂಸವಾದ ದೇಗುಲದ ಮೂರ್ತಿಗಳನ್ನು ನದಿಗೆ ಬಿಸಾಡಿರಬಹುದು ಎಂದು ಶಂಕಿಸಲಾಗಿದೆ.
ಹಸಿರು ಮಿಶ್ರಿತ ಶಿಲೆಯಲ್ಲಿ ಕೆತ್ತನೆ
ನದಿಯಲ್ಲಿ ಪತ್ತೆಯಾಗಿರುವ ಶಿಲ್ಪಗಳನ್ನು ಹಸಿರುಮಿಶ್ರಿತ ಶಿಲೆಯಿಂದ ಕೆತ್ತನೆ ಮಾಡಲಾಗಿದೆ. ಇಂತಹ ಮಾದರಿಯ ಶಿಲ್ಪಗಳನ್ನು ಕಲ್ಯಾಣಿ ಚಾಲುಕ್ಯರು ಬಳಸುತ್ತಿದ್ದರು ಎಂದು ಇತಿಹಾಸಕಾರರು ಹೇಳುತ್ತಿದ್ದಾರೆ. ಹೀಗಾಗಿ ಇವು ಕಲ್ಯಾಣಿ ಚಾಲುಕ್ಯರ ಕಾಲದ ಶಿಲ್ಪಗಳಾಗಿರಬಹುದು ಎಂದು ಹೇಳಲಾಗುತ್ತಿದೆ.