BengaluruPolitics

Chikkaballapur; ಸುಧಾಕರ್‌ಗೆ ಟಿಕೆಟ್‌ ಕೊಟ್ರೆ ಎಸ್‌.ಆರ್‌.ವಿಶ್ವನಾಥ್‌, ಎಂಟಿಬಿ ಸುಮ್ನಿರ್ತಾರಾ..?

ಚಿಕ್ಕಬಳ್ಳಾಪುರ; ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರಕ್ಕೆ ನನಗೇ ಬಿಜೆಪಿ ಟಿಕೆಟ್‌ ಎಂದು ಮಾಜಿ ಸಚಿವ ಡಾ.ಕೆ.ಸುಧಾಕರ್‌ ಬೀಗುತ್ತಿದ್ದಾರೆ. ಈಗಾಗಲೇ ಅವರು ಪ್ರಚಾರ, ಸಂಘಟನೆ ಕಾರ್ಯ ಕೂಡಾ ಆರಂಭಿಸಿದ್ದಾರೆ. ಕ್ಷೇತ್ರದ ದೇವಮೂಲೆಯಿಂದ ಪ್ರಚಾರ ಶುರು ಮಾಡಿರುವ ಸುಧಾಕರ್‌ ಅವರು, ಬಿಜೆಪಿ ಹೈಕಮಾಂಡ್‌ ಹಾಗೂ ಜೆಡಿಎಸ್‌ ನಾಯಕರಿಬ್ಬರೂ ನನಗೆ ಆಶ್ವಾಸನೆ ಕೊಟ್ಟಿದ್ದಾರೆ ಎಂದು ಹೇಳಿಕೊಳ್ಳುತ್ತಿದ್ದಾರೆ. ಆದ್ರೆ, ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದಿಂದ ಸ್ಪರ್ಧೆ ಮಾಡೋದಕ್ಕೆ ಇನ್ನೂ ಇಬ್ಬರು ಪ್ರಬಲ ನಾಯಕರು ಆಕಾಂಕ್ಷಿಗಳಾಗಿದ್ದಾರೆ. ಅವರ ನಡೆ ಏನು..? ನಿಜವಾಗಿಯೂ ಡಾ.ಕೆ.ಸುಧಾಕರ್‌ ಅವರಿಗೆ ಬಿಜೆಪಿ ಹೈಕಮಾಂಡ್‌ ಟಿಕೆಟ್‌ ಖಾತ್ರಿ ಮಾಡಿದೆಯಾ..? ಸುಧಾಕರ್‌ ಅವರ ಸ್ಪರ್ಧೆಗೆ ಜೆಡಿಎಸ್‌ ಕೂಡಾ ಒಪ್ಪಿಗೆ ಸೂಚಿಸಿದೆಯಾ..? ಎಂಬ ಬಗ್ಗೆ ಪ್ರಶ್ನೆಗಳು ಎದ್ದಿವೆ.

ಪುತ್ರನನ್ನು ಕಣಕ್ಕಿಳಿಸಲು ಎಸ್‌.ಆರ್‌.ವಿಶ್ವನಾಥ್‌ ಕಸರತ್ತು!

ಡಾ.ಕೆ.ಸುಧಾಕರ್‌ ನಾನೇ ಅಭ್ಯರ್ಥಿ ಎಂದು ಹೇಳಿಕೊಳ್ಳುತ್ತಿದ್ದಾರೆ. ಅವರು ದೆಹಲಿ ನಾಯಕರನ್ನು ಭೇಟಿ ಮಾಡಿ ಬಂದಿದ್ದಾರೆ. ಜೆಡಿಎಸ್‌ ನಾಯಕರನ್ನೂ ಭೇಟಿಯಾಗಿದ್ದಾರೆ. ಅವರಿಗೆ ಯಾರು ಟಿಕೆಟ್‌ ಖಾತ್ರಿ ಮಾಡಿದರೋ ಗೊತ್ತಿಲ್ಲ. ಆದ್ರೆ ವಿಶ್ವಾಸದಿಂದ ಸುತ್ತಾಡುತ್ತಿರುವುದಂತೂ ನಿಜ. ಹಾಗೆ ನೋಡಿದರೆ ಚಿಕ್ಕಬಳ್ಳಾಪುರಕ್ಕೆ ಡಾ.ಕೆ.ಸುಧಾಕರ್‌ ಎಲ್ಲಾ ರೀತಿಯಿಂದಲೂ ಪ್ರಬಲ ಅಭ್ಯರ್ಥಿಯೇ. ಗೆಲ್ಲುವ ತಾಕತ್ತು ಕೂಡಾ ಅವರಿಗಿದೆ. ಆದ್ರೆ ಇದೇ ಕ್ಷೇತ್ರದಿಂದ ತಮ್ಮ ಪುತ್ರನನ್ನು ಕಣಕ್ಕಿಳಿಸೋದಕ್ಕೆ ಹೆಬ್ಬಾಳ ಶಾಸಕ ಎಸ್‌.ಆರ್‌.ವಿಶ್ವನಾಥ್‌ ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ. ಬಿಜೆಪಿಯಿಂದ ಮೂರು ಬಾರಿ ಶಾಸಕರಾಗಿರುವ ಎಸ್‌.ಆರ್‌.ವಿಶ್ವನಾಥ್‌ ಬಿಜೆಪಿಯಲ್ಲಿ ಪ್ರಭಾವಿ ನಾಯಕ. ಅವರು ತಮ್ಮ ಪುತ್ರ ಅಲೋಕ್‌ ಗಾಗಿ ಚಿಕ್ಕಬಳ್ಳಾಪುರ ಟಿಕೆಟ್‌ ಕೇಳುತ್ತಿದ್ದಾರೆ. ಅವರೂ ಕೂಡಾ ತಮ್ಮ ಪುತ್ರನಿಗೆ ಟಿಕೆಟ್‌ ಸಿಗುತ್ತೆ ಎಂಬ ವಿಶ್ವಾಸದಲ್ಲಿದ್ದಾರೆ.

ಈಗಾಗಲೇ ಎಸ್‌.ಆರ್‌.ವಿಶ್ವನಾಥ್‌ ಕೂಡಾ ಚಿಕ್ಕಬಳ್ಳಾಪುರ ಕ್ಷೇತ್ರದಲ್ಲಿ ಪ್ರಚಾರ ಶುರು ಮಾಡಿದ್ದಾರೆ. ಇತ್ತೀಚೆಗೆ ದೊಡ್ಡಬಳ್ಳಾಪುರದ ಚಿಕ್ಕರಾಯಪ್ಪನಹಳ್ಳಿಯಲ್ಲಿ ಬಿಜೆಪಿ-ಜೆಡಿಎಸ್‌ ಕಾರ್ಯಕರ್ತರ ಭೋಜನಕೂಟ ಕೂಡಾ ಏರ್ಪಾಟು ಮಾಡಿದ್ದರು. ಜೊತೆಗೆ ಫೋನ್‌ ಮೂಲಕವೂ ಚಿಕ್ಕಬಳ್ಳಾಪುರ ಕ್ಷೇತ್ರ ವ್ಯಾಪ್ತಿಯಲ್ಲಿ ಬರುವ ಎಲ್ಲಾ ವಿಧಾನಸಭಾ ಕ್ಷೇತ್ರಗಳ ಮುಖಂಡರನ್ನೂ ಸಂಪರ್ಕಿಸುತ್ತಾ ಎಲ್ಲರ ವಿಶ್ವಾಸ ಗಳಿಸುವ ಪ್ರಯತ್ನ ಮಾಡುತ್ತಿದ್ದಾರೆ. ವಿಶ್ವನಾಥ್‌ ಅವರಿಗೂ ಸಾಕಷ್ಟು ಜನಬಲ ಇದೆ. ಅವರ ಪುತ್ರನಿಗೆ ಟಿಕೆಟ್‌ ಕೊಟ್ಟರೂ ದೊಡ್ಡ ಮಟ್ಟದ ಫೈಟ್‌ ನೀಡಬಹುದು. ಜೊತೆಗೆ ಗೆಲ್ಲೋದಕ್ಕೆ ಅವಕಾಶಗಳಿವೆ ಎಂದು ಹೇಳಲಾಗುತ್ತಿದೆ.

ಎಂಟಿಬಿ ನಾಗರಾಜ್‌ ಕೂಡಾ ಬಿಜೆಪಿ ಟಿಕೆಟ್‌ಗಾಗಿ ಫೈಟ್‌!

ಆಪರೇಷನ್‌ ಕಮಲದ ವೇಳೆ ಕಾಂಗ್ರೆಸ್‌ ತೊರೆದು ಬಿಜೆಪಿಗೆ ಬಂದವರಲ್ಲಿ ಎಂಟಿಬಿ ನಾಗರಾಜ್‌ ಕೂಡಾ ಪ್ರಮುಖರು. ಅವರು ಅತ್ಯಂತ ಶ್ರೀಮಂತ ಹಾಗೂ ಪ್ರಬಲ ನಾಯಕರು. ಆದ್ರೆ ಬಿಜೆಪಿಗೆ ಬಂದ ಮೇಲೆ ಎರಡು ಬಾರಿಯೂ ಸೋಲನುಭವಿಸಿದ್ದಾರೆ. ಈಗಾಗಲೇ ಎಂಟಿಬಿಯವರಿಗೆ ವಯಸ್ಸಾಗಿದೆ. ಇದು ಕೊನೇ ಎಲೆಕ್ಷನ್‌ ನೋಡೇ ಬಿಡೋಣ ಎಂದು ಎಂಟಿಬಿ ತಯಾರಿ ನಡೆಸಿದ್ದಾರೆ. ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರ ವ್ಯಾಪ್ತಿಯಲ್ಲೇ ಹೊಸಕೋಟೆ ಬರುತ್ತದೆ. ಹೊಸಕೋಟೆ ಸುತ್ತಮುತ್ತ ಎಂಟಿಬಿ ನಾಗರಾಜ್‌ ಪ್ರಭಾವ ಇದೆ. ಬಿಜೆಪಿ ಗೆಲ್ಲಬೇಕಾದರೆ ಹೊಸಕೋಟೆ ಕ್ಷೇತ್ರದ ಮತಗಳು ನಿರ್ಣಾಯಕವಾಗುತ್ತವೆ. ಈ ಕಾರಣಕ್ಕಾಗಿ ಕಳೆದ ಬಾರಿ ಬಚ್ಚೇಗೌಡ ಅವರು ಸುಲಭವಾಗಿ ಚಿಕ್ಕಬಳ್ಳಾಪುರ ಕ್ಷೇತ್ರದಲ್ಲಿ ಗೆಲುವು ಸಾಧಿಸಿದ್ದರು.

 ಜಾತಿ ಲೆಕ್ಕಾಚಾರದಲ್ಲಿ ಟಿಕೆಟ್‌ ಕೊಡುವ ಸಾಧ್ಯತೆ

ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರ ಒಂದು ರೀತಿಯಲ್ಲಿ ವಿಭಿನ್ನ ಕ್ಷೇತ್ರ.. ಈ ಕ್ಷೇತ್ರದಲ್ಲಿ ಜಾತಿ ಯಾವತ್ತೂ ಕೆಲಸ ಮಾಡಿಲ್ಲ. ಈ ಹಿಂದೆ ಈಡಿಗ ಸಮುದಾಯಕ್ಕೆ ಸೇರಿದ ಆರ್‌.ಎಲ್‌.ಜಾಲಪ್ಪ ಮೂರು ಬಾರಿ ಸಂಸದರಾಗಿದ್ದರು. ಆದ್ರೆ ಈ ಕ್ಷೇತ್ರದಲ್ಲಿ ಈಡಿಗ ಸಮುದಾಯದ ಮತಗಳು 10 ಸಾವಿರ ಕೂಡಾ ದಾಟೋದಿಲ್ಲ. ಅದಕ್ಕೂ ಮುಂಚೆ ಬ್ರಾಹ್ಮಣ ಸಮುದಾಯಕ್ಕೆ ಸೇರಿದ ವಿ.ಕೃಷ್ಣರಾವ್‌ ಅವರು ಕೂಡಾ ಮೂರು ಬಾರಿ ಸಂಸದರಾಗಿದ್ದರು. ಈ ಕ್ಷೇತ್ರದಲ್ಲಿ ಬ್ರಾಹ್ಮಣ ಮತಗಳು ಕೂಡಾ 10 ಸಾವಿರ ದಾಟೋದಿಲ್ಲ. ಇನ್ನು ವೀರಪ್ಪ ಮೊಯ್ಲಿಯವರು ಸವಿತಾ ಸಮಾಜದವರು. ಈ ಸಮುದಾಯದ ಮತಗಳು ಕೂಡಾ ಅತ್ಯಂತ ಕಡಿಮೆ ಇದೆ. ಆದರೂ ಕೂಡಾ ವೀರಪ್ಪ ಮೊಯ್ಲಿಯವರು ಎರಡು ಬಾರಿ ಸಂಸದರಾಗಿ ಆಯ್ಕೆಯಾಗಿದ್ದರು. ಇದೆಲ್ಲಾ ನೋಡಿದರೆ ಚಿಕ್ಕಬಳ್ಳಾಪುರದ ಜನ ಜಾತಿಗಿಂತ ವ್ಯಕ್ತಿಗೆ ಮಣೆ ಹಾಕುತ್ತಾರೆ ಎಂದೇ ಹೇಳಬಹುದು.

ಆದರೂ ಕಳೆದ ಲೋಕಸಭಾ ಚುನಾವಣೆಯಲ್ಲಿ ಜಾತಿ ಹೆಚ್ಚು ಕೆಲಸ ಮಾಡಿತ್ತು. ಈ ಕಾರಣಕ್ಕಾಗಿಯೇ ಬಚ್ಚೇಗೌಡ ಗೆದ್ದಿದ್ದರು.  ಸದ್ಯ ಬಿಜೆಪಿಯಲ್ಲಿ ಮೂವರು ಆಕಾಂಕ್ಷಿಗಳಿದ್ದಾರೆ. ಇದರಲ್ಲಿ ಎಸ್‌.ಆರ್‌.ವಿಶ್ವನಾಥ್‌ ಅವರ ಪುತ್ರ ಅಲೋಕ್‌ ಹಾಗೂ ಡಾ.ಕೆ.ಸುಧಾಕರ್‌ ಒಕ್ಕಲಿಗ ಸಮುದಾಯಕ್ಕೆ ಸೇರಿದವರು. ಎಂಟಿಬಿ ನಾಗರಾಜ್‌ ಕುರುಬ ಸಮುದಾಯದವರು. ಇಲ್ಲಿ ಕುರುಬ ಸಮುದಾಯದ ಮತಗಳು ಹೆಚ್ಚೇನೂ ಇಲ್ಲ. ಒಕ್ಕಲಿಗ, ಬಲಜಿಗ ಹಾಗೂ ದಲಿತ ಮತಗಳು ಈ ಭಾಗದಲ್ಲಿ ಹೆಚ್ಚಿವೆ. ಹೀಗಾಗಿ, ಈ ಬಾರಿ ಎಲ್ಲಾ ಪಕ್ಷದವರು ವ್ಯಕ್ತಿ ಹಾಗೂ ಜಾತಿ ನೋಡಿ ಟಿಕೆಟ್‌ ಕೊಡುವ ಸಾಧ್ಯತೆ ಇದೆ.

 

Share Post