ಮತ್ತೊಮ್ಮೆ ಮೊಳಗಿದ ʻಭಾರತ ಬಿಟ್ಟು ತೊಲಗಿʼ ಘೋಷಣೆ
ನವದೆಹಲಿ: ”ಭಾರತ ಉಸಿರುಗಟ್ಟಿಸುವಂತಿದ್ದರೆ ದೇಶ ಬಿಟ್ಟು ತೊಲಗಿ” ಎಂದು ನ್ಯಾಷನಲ್ ಕಾನ್ಫರೆನ್ಸ್ ಅಧ್ಯಕ್ಷ ಫಾರೂಖ್ ಅಬ್ದುಲ್ಲಾಗೆ ಆರ್‌ಎಸ್‌ಎಸ್ ಹಿರಿಯ ನಾಯಕ ಇಂದ್ರೇಶ್ ಕುಮಾರ್ ಹೇಳಿದ್ದಾರೆ. ಈ ಹಿಂದೆ, ಜಮ್ಮು ಮತ್ತು ಕಾಶ್ಮೀರದ ಜನರು ತಮ್ಮ ಹಕ್ಕುಗಳನ್ನು ಮರಳಿ ಪಡೆಯಲು ರೈತರಂತೆ ಪ್ರತಿಭಟನೆ ನಡೆಸಬೇಕು, ತ್ಯಾಗ ಮಾಡಬೇಕು ಎಂಬ ಫಾರೂಖ್ ಹೇಳಿಕೆಗೆ ಆರ್‌ಎಸ್‌ಎಸ್ ಅಸಮಾಧಾನ ವ್ಯಕ್ತಪಡಿಸಿದೆ. ಅಕ್ಟೋಬರ್ 7 ರಂದು ಗುರುದ್ವಾರದಲ್ಲಿ ಉಗ್ರರ ಗುಂಡಿನ ದಾಳಿ ಬಳಿಕ, ಏನೇ ಬಂದರು ನಾವು ನಿಮ್ಮ ಜೊತೆಗಿರುತ್ತೇವೆ ಎಂದು ವಿಶ್ವಾಸ ಮಾತುಗಳನ್ನಾಡಿದ್ರು ಫಾರೂಕ್. ಇದಾದ ಕೆಲವೇ ದಿನಗಳಲ್ಲಿ ಭಾರತದಲ್ಲಿ ಉಸಿರುಗಟ್ಟಿಸುವಂತಹ ವಾತಾವರವಿದೆ ಎಂದು ಹೇಳಿಕೆ ನೀಡಿದ್ದು, ಈ ಹೇಳಿಕೆ ವಿರುದ್ಧ ಆರ್‌ಎಸ್‌ಎಸ್ ತೀವ್ರ ವಿರೋಧ ವ್ಯಕ್ತಪಡಿಸಿದೆ. ಫಾರೂಖ್ ಅಬ್ದುಲ್ಲಾ ಹಿಂಸೆಯನ್ನು ಪ್ರೀತಿಸುತ್ತಾರೆ, ಶಾಂತಿಯನ್ನಲ್ಲ ಎಂಬುದು ಅವರ ಹೇಳಿಕೆಯಿಂದ ಗೊತ್ತಾಗುತ್ತದೆ. ಅವರಿಗೆ ”ಭಾರತದಲ್ಲಿ ಉಸಿರುಗಟ್ಟಿಸುವಂತಹ ವಾತಾವರಣ ಇದೆ ಎಂದು ಭಾವಿಸಿದರೆ ಪ್ರಪಂಚದ ಯಾವುದೇ ಭಾಗದಲ್ಲಿ ಅವರು ವಾಸಿಸಬಹುದು. ದೇಶ ತೊರೆದು ಬೇರೆ ದೇಶದಲ್ಲಿ ವಾಸ ಮಾಡಬಹುದು” ಎಂದು ಇಂದ್ರೇಶ್ ಕುಮಾರ್ ವ್ಯಂಗ್ಯವಾಡಿದ್ದಾರೆ.