ಪಾಕಿಸ್ತಾನ ಮಾಜಿ ಪ್ರಧಾನಿ ಇಮ್ರಾನ್ ಖಾನ್ ದಂಪತಿಗೆ 14 ವರ್ಷ ಜೈಲು ಶಿಕ್ಷೆ!
ಪಾಕಿಸ್ತಾನ; ಪಾಕಿಸ್ತಾನದ ಮಾಜಿ ಪ್ರಧಾನಿ ಹಾಗೂ ಪಾಕಿಸ್ತಾನ್ ತೆಹ್ರಿಕ್ ಎ ಇನ್ಸಾಫ್ ಮುಖ್ಯಸ್ಥ ಇಮ್ರಾನ್ ಖಾನ್ ಹಾಗೂ ಅವರ ಪತ್ನಿಗೆ 14 ವರ್ಷ ಜೈಲು ಶಿಕ್ಷೆಯಾಗಿದೆ. ತೋಷಖಾನಾ ಪ್ರಕರಣದಲ್ಲಿ ರಾವಲ್ಪಿಂಡಿ ವಿಶೇಷ ನ್ಯಾಯಾಲಯದ ನ್ಯಾಯಾಧೀಶ ಅಬುಲ್ ಹಸ್ನತ್ ಜುಲ್ಕರ್ನೈನ್ ಈ ತೀರ್ಪು ನೀಡಿದ್ದಾರೆ.
ದಾಖಲೆ ಸೋರಿಕೆ ಪ್ರಕರಣದಲ್ಲಿ ಈಗಾಗಲೇ ಇಮ್ರಾನ್ ಖಾನ್ ಅವರಿಗೆ 10 ವರ್ಷ ಜೈಲು ಶಿಕ್ಷೆ ವಿಧಿಸಲಾಗಿತ್ತು. ಇದೀಗ ತೋಷಖಾನಾ ಪ್ರಕರಣದಲ್ಲಿ 14 ವರ್ಷ ಜೈಲು ಶಿಕ್ಷೆ ವಿಧಿಸಲಾಗಿದೆ. ಫೆಬ್ರವರಿ 8 ರ ಸಾರ್ವತ್ರಿಕ ಚುನಾವಣೆಗೆ ಕೇವಲ ಎಂಟು ದಿನಗಳ ಮೊದಲು ತೀರ್ಪು ಬಂದಿದ್ದು, ಇಮ್ರಾನ್ ಖಾನ್‌ಗೆ ಸಂಕಷ್ಟ ಎದುರಾಗಿದೆ.
ತೋಷಖಾನಾ ಎಂಬುದು ಪಾಕಿಸ್ತಾನ ಪಾರ್ಲಿಮೆಂಟ್‌ನ ಕ್ಯಾಬಿನೆಟ್ ವಿಭಾಗದ ಅಡಿಯಲ್ಲಿ ಬರುವ ಒಂದು ಇಲಾಖೆ. ಇದು ಆಡಳಿತಗಾರರು ಮತ್ತು ಸರ್ಕಾರಿ ಅಧಿಕಾರಿಗಳಿಗೆ ಇತರ ಸರ್ಕಾರಗಳ ಮುಖ್ಯಸ್ಥರು ಮತ್ತು ವಿದೇಶಿ ಗಣ್ಯರು ನೀಡಿದ ಉಡುಗೊರೆಗಳನ್ನು ಸಂಗ್ರಹಿಸುತ್ತದೆ. ಖಾನ್ ಅವರು ಬೆಲೆಬಾಳುವ ವಾಚ್ ಸೇರಿದಂತೆ ಕೆಲವು ಉಡುಗೊರೆಗಳನ್ನು ತೆಗೆದುಕೊಂಡು ಅವುಗಳನ್ನು ಲಾಭಕ್ಕಾಗಿ ಮಾರಾಟ ಮಾಡಿದ್ದರು ಎಂಬ ಆರೋಪ ಕೇಳಿಬಂದಿತ್ತು.