ರಾಮನ ಪೂಜೆ ಮಾಡಿದ್ದಕ್ಕೆ ಜೈಲಿನಲ್ಲಿ ಕೈದಿ ಮೇಲೆ ನಡೀತು ಹಲ್ಲೆ!
ವಿಜಯಪುರ; ಅಯೋಧ್ಯೆಯಲ್ಲಿ ಜನವರಿ 22 ಬಾಲರಾಮನ ಪ್ರಾಣಪ್ರತಿಷ್ಠಾಪನೆಯಾಯಿತು. ಅಂದ್ರೆ ದೇಶಾದ್ಯಂತ ರಾಮನಿಗೆ ಪೂಜೆ ಪುನಸ್ಕಾರಗಳು ನಡೆದಿವೆ. ಅದೇ ರೀತಿ ವಿಜಯಪುರದ ಕೇಂದ್ರ ಕಾರಾಗೃಹದಲ್ಲೂ ರಾಮನ ಪೂಜೆ ಮಾಡಿ ಪ್ರಸಾದ ಹಂಚಲಾಗಿದೆ. ಈ ಕಾರಣಕ್ಕಾಗಿಯೇ ಜೈಲಿನಲ್ಲಿದ್ದ ವಿಚಾರಣಾಧೀನ ಕೈದಿಯೊಬ್ಬನ ಮೇಲೆ ಹಲ್ಲೆ ನಡೆಸಲಾಗಿದೆಯಂತೆ. ಹಾಗಂತ ಸಂತ್ರಸ್ತನೇ ವಿಡಿಯೋ ಹೇಳಿಕೆ ಬಿಡುಗಡೆ ಮಾಡಿದ್ದಾನೆ.
ಮಹಾರಾಷ್ಟ್ರ ಮೂಲದ ಪರಮೇಶ್ವರ ಎಂಬ ವಿಚಾರಣಾಧೀನ ಕೈದಿ ವಿಜಯಪುರ ಜೈಲಿನಲ್ಲಿ ರಾಮನ ಪೂಜೆ ಮಾಡಿ, ಜೈ ಶ್ರೀರಾಮ್ ಎಂದು ಘೋಷಣೆಗಳನ್ನು ಕೂಗಿದ್ದಾನೆ. ಪ್ರಸಾದ ಹಂಚಿ ಸಂಭ್ರಮಿಸಿದ್ದಾನೆ. ಜನವರಿ 22ರಂದು ರಾಮನ ಪೂಜೆ ಮಾಡಲು ಜೈಲು ಅಧಿಕಾರಿಯ ಅನುಮತಿ ಕೇಳಿದ್ದರಂತೆ. ಆದ್ರೆ ಅಧಿಕಾರಿ ಅನುಮತಿ ಕೊಟ್ಟಿರಲಿಲ್ಲ. ಆದರೂ ಪರಮೇಶ್ವರ್ ಅವರು ಪೂಜೆ ಮಾಡಿ, ಪ್ರಸಾದ್ ಹಂಚಿದ್ದರು. ಈ ವಿಷಯ ತಿಳಿದು ಜನವರಿ 23 ರಂದು ಸಹಾಯಕ ಜೈಲು ಅಧೀಕ್ಷಕ ಚೌಧರಿ ಅವರು ಪೂಜೆ ಮಾಡಿದ ಪರಮೇಶ್ವರ್ ಹಾಗೂ ಇನ್ನೂ ಇಬ್ಬರನ್ನು ತಮ್ಮ ಚೇಂಬರ್‌ಗೆ ಕರೆಸಿ ವಿಚಾರಣೆ ಮಾಡಿದ್ದಾರೆ.
ಈ ವೇಳೆ ಅನ್ಯಕೋಮಿಗೆ ಕೈದಿ ಶೇಖ್ ಮೋದಿ ಹಾಗೂ ಇತರರರು ನಮ್ಮ ಮೂವರ ಮೇಲೆ ಹಲ್ಲೆ ಮಾಡಿದ್ದಾರೆ. ಅವರು ಹಲ್ಲೆ ಮಾಡುತ್ತಿದ್ದರೂ ಜೈಲು ಅಧಿಕಾರಿಗಳು ನಮ್ಮನ್ನು ರಕ್ಷಣೆ ಮಾಡಲು ಬರಲಿಲ್ಲ ಎಂದು ವಿಚಾರಣಾಧೀನ ಕೈದಿ ಪರಮೇಶ್ವರ್ ವಿಡಿಯೋ ಹೇಳಿಕೆ ಬಿಡುಗಡೆ ಮಾಡಿದ್ದಾನೆ. ಜೊತೆಗೆ ನಮ್ಮನ್ನು ಜೈಲು ಆವರಣದಲ್ಲಿಡದೇ ಸೆಲ್‌ನಲ್ಲಿಟ್ಟಿದ್ದಾರೆ ಎಂದೂ ಆರೋಪ ಮಾಡಿದ್ದಾನೆ.
ಈ ವಿಷಯವಾಗಿ ಪ್ರಧಾನಿ ಮೋದಿ ಮತ್ತು ಗೃಹ ಸಚಿವ ಅಮಿತ್ ಶಾ ಅವರು ನಮಗೆ ಸಹಾಯ ಮಾಡಬೇಕು ಎಂದು ಆರೋಪಿ ಪರಮೇಶ್ವರ ಮನವಿ ಮಾಡಿದ್ದಾನೆ. ಆದರೆ ರಾಮನ ವಿಚಾರ ಇಟ್ಟುಕೊಂಡು ಆರೋಪಿ ಸುಳ್ಳು ಹೇಳುತ್ತಿದ್ದಾನೆಂದು ಕೇಂದ್ರ ಕಾರಾಗೃಹದ ಅಧೀಕ್ಷಕ ಐ ಜಿ ಮ್ಯಾಗೇರಿ ಪ್ರತಿಕ್ರಿಯಿಸಿದ್ದಾರೆ. ಆರೋಪಿ ಮಹಾರಾಷ್ಟ್ರ ಜೈಲಿನಲ್ಲಿ ಗಲಾಟೆ ಮಾಡಿದ್ದಕ್ಕಾಗಿ ಇಲ್ಲಿಗೆ ಕಳುಹಿಸಲಾಗಿತ್ತು. ಆತ ರಾಮಮಂದಿರ ವಿಚಾರ ಮುಂದಿಟ್ಟುಕೊಂಡು ಸುಳ್ಳು ಹೇಳುತ್ತಿದ್ದಾನೆ ಎಂದು ಹೇಳಿದ್ದಾರೆ.