BengaluruDistrictsPolitics

Exclusive; ಚಿಕ್ಕಬಳ್ಳಾಪುರದಲ್ಲಿ ಸುಧಾಕರ್‌ಗೆ ಬಿಜೆಪಿ ಟಿಕೆಟ್‌ ಫಿಕ್ಸಾ..?; ಕ್ಷೇತ್ರ ಜೆಡಿಎಸ್‌ ಪಾಲಾದರೆ ಕತೆ ಏನು..?

ನವದೆಹಲಿ; ಅತಿ ಕಡಿಮೆ ಸಮಯದಲ್ಲಿ ರಾಜ್ಯ ರಾಜಕೀಯದಲ್ಲಿ ಪ್ರಭಾವಿ ನಾಯಕನಾಗಿ ಬೆಳೆದ, ನೇರವಾಗಿ ಸಿಎಂ ಹುದ್ದೆ ಮೇಲೇ ಕಣ್ಣಿಟ್ಟಿದ್ದ ಮಾಜಿ ಸಚಿವ ಡಾ.ಕೆ.ಸುಧಾಕರ್‌, ಸಾಮಾನ್ಯ ಹುಡುಗ ಪ್ರದೀಪ್‌ ಈಶ್ವರ್‌ ವಿರುದ್ಧ ಸೋತುಸುಣ್ಣವಾಗಿದ್ದು ಗೊತ್ತೇ ಇದೆ. ಹಾಗೇ ನೋಡಿದರೆ ಚಿಕ್ಕಬಳ್ಳಾಪುರದಲ್ಲಿ ಅತಿಹೆಚ್ಚು ಅಭಿವೃದ್ಧಿ ಕೆಲಸಗಳನ್ನು ಮಾಡಿದವರು ಸುಧಾಕರ್‌. ಆದ್ರೆ ಅವರು ಸಚಿವರಾದ ಮೇಲೆ ಕ್ಷೇತ್ರದ ಜನರನ್ನು ಹತ್ತಿರಕ್ಕೆ ಬಿಟ್ಟುಕೊಳ್ಳುತ್ತಿರಲಿಲ್ಲ. ಸಾಮಾನ್ಯ ಜನರನ್ನು ಮಾತೇ ಆಡುತ್ತಿರಲಿಲ್ಲ ಎಂಬ ಆರೋಪವಿತ್ತು. ಇಂತಹ ಒಂದು ಸಣ್ಣ ಕಾರಣಕ್ಕೆ ಚಿಕ್ಕಬಳ್ಳಾಪುರದ ಜನ ಚಿಕ್ಕಬಳ್ಳಾಪುರದ ಸುಧಾರಕ ಎಂದೇ ಖ್ಯಾತರಾಗಿದ್ದ ಡಾ.ಕೆ.ಸುಧಾಕರ್‌ರನ್ನು ಸೋಲಿಸಿದ್ದರು. ಇದೀಗ ಸುಧಾಕರ್‌ ಸಾಕಷ್ಟು ಬದಲಾಗಿದ್ದಾರೆ. ಬದಲಾದ ಸುಧಾಕರ್‌, ಲೋಕಸಭಾ ಅಖಾಡಕ್ಕಿಳಿಯಲು ಸಿದ್ಧರಾಗುತ್ತಿದ್ದಾರೆ. ಬಾಗೇಪಲ್ಲಿಯಿಂದ ತಮ್ಮ ಸಂಘಟನೆ ಶುರು ಮಾಡಿದ್ದಾರೆ. ಕ್ಷೇತ್ರ ಸಂಚಾರದಲ್ಲಿ ತೊಡಗಿದ್ದಾರೆ. ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದಾದ್ಯಂತ ಓಡಾಡುತ್ತಿದ್ದಾರೆ. ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ಲೋಕಸಭಾ ಅಖಾಡಕ್ಕೆ ಇಳಿಯುತ್ತೇನೆ ಎಂದು ಹತ್ತಿರದವರಿಗೆ ಹೇಳಿಕೊಂಡಿರುವುದೂ ಇದೆ. ಇದೀಗ ಅವರು, ದೆಹಲಿಗೆ ತೆರಳಿ ಬಿಜೆಪಿ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್‌.ಸಂತೋಷ್‌ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ. ಲೋಕಸಭಾ ಟಿಕೆಟ್‌ಗಾಗಿ ಲಾಬಿ ನಡೆಸಿದ್ದಾರೆ ಎಂದೇ ಹೇಳಲಾಗುತ್ತಿದೆ.

ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದಲ್ಲಿ ಒಕ್ಕಲಿಗ ಹಾಗೂ ಬಲಿಜ ಮತಗಳು ಹೆಚ್ಚಿವೆ. ಆದ್ರೆ, ಇಲ್ಲಿನ ಜನ ಜಾತಿ ನೋಡಿ ಮತ ಹಾಕಿದ್ದು ಕಡಿಮೆ. ಹಾಗೇನಾದರೂ ಜಾತಿ ನೋಡಿ ಮತ ಹಾಕಿದ್ದರೆ, ಆರ್‌.ಎಲ್‌.ಜಾಲಪ್ಪ ಅವರಾಗಲೀ, ವೀರಪ್ಪ ಮೊಯ್ಲಿಯವರಾಗಲೀ ಗೆಲ್ಲುತ್ತಲೇ ಇರಲಿಲ್ಲ. ಚಿಕ್ಕಬಳ್ಳಾಪುರದ ಜನ ಜಾತಿ, ಹಣಕ್ಕಿಂತ ಹೆಚ್ಚಾಗಿ ಸ್ವಾಭಿಮಾನಿಗಳು. ಯಾರು ಅವರನ್ನು ಪ್ರೀತಿಯಿಂದ ಕಾಣುತ್ತಾರೋ ಅವರಿಗೆ ಮತ ಹಾಕುತ್ತಾರೆ. ಅವರನ್ನು ದೇವರಂತೆ ಮರೆಸುತ್ತಾರೆ. ಈ ವಿಚಾರದಲ್ಲಿ ಎಡವಿದ್ದ ಡಾ.ಕೆ.ಸುಧಾಕರ್‌, ಎಷ್ಟೇ ಹಣ ಚೆಲ್ಲಿದರೂ ವಿಧಾನಸಭಾ ಚುನಾವಣೆಯಲ್ಲಿ ಗೆಲ್ಲಲಿಲ್ಲ. ಅವರ ನೂರಾರು ಕೋಟಿ ಅಭಿವೃದ್ಧಿ ಕೆಲಸಗಳೂ ಜನ ಸ್ವಾಭಿಮಾನದ ಮುಂದೆ ಕೆಲಸ ಮಾಡಲಿಲ್ಲ. ಆದ್ರೆ, ಸುಧಾಕರ್‌ ಈಗ ಬಿಂಕ, ಬಿಗುಮಾನ ಬಿಟ್ಟಿದ್ದಾರೆ. ಸಾಮಾನ್ಯ ಜನರ ಜೊತೆ ಮತ್ತೆ ಬೆರೆಯೋದಕ್ಕೆ ಶುರು ಮಾಡಿದ್ದಾರೆ. ಜೊತೆಗೆ ಚಿಕ್ಕಬಳ್ಳಾಪುರದ ಹಾಲಿ ಶಾಸಕ ಪ್ರದೀಪ್‌ ಈಶ್ವರ್‌ ಬರೀ ಮಾತಿನಲ್ಲೇ ಮನೆ ಕಟ್ಟುತ್ತಿರುವುದು ಕೂಡಾ ಸುಧಾಕರ್‌ ಪರವಾದ ಅಲೆ ಏಳುತ್ತಿದ್ದಂತೆ ಕಾಣುತ್ತಿದ್ದಂತೆ. ಇದನ್ನು ಬಳಸಿಕೊಂಡು ಸುಧಾಕರ್‌ ಲೋಕಸಭಾ ಚುನಾವಣಾ ರಣರಂಗಕ್ಕೆ ಇಳಿಯಲು ತಯಾರಿ ನಡೆಸಿದ್ದಾರೆ.

ಹಾಗೆ ನೋಡಿದರೆ ಬಿಜೆಪಿಯ ಚಿಕ್ಕಬಳ್ಳಾಪುರ ಕ್ಷೇತ್ರಕ್ಕೆ ಸುಧಾಕರ್‌ಗಿಂತ ಪ್ರಬಲ ಅಭ್ಯರ್ಥಿ ಸಿಗೋದಿಲ್ಲ. ಆದ್ರೆ, ಎನ್‌ಡಿಎ ಜೊತೆ ಹೊಂದಾಣಿಕೆ ಮಾಡಿಕೊಂಡಿರುವ ಜೆಡಿಎಸ್‌, ಚಿಕ್ಕಬಳ್ಳಾಪುರ ಕ್ಷೇತ್ರವನ್ನು ಕೇಳುತ್ತಿದೆ. ಒಂದು ವೇಳೆ ಬಿಜೆಪಿ ಹೈಕಮಾಂಡ್‌ ಚಿಕ್ಕಬಳ್ಳಾಪುರ ಕ್ಷೇತ್ರವನ್ನು ಜೆಡಿಎಸ್‌ಗೆ ಬಿಟ್ಟುಕೊಟ್ಟರೆ ಏನು ಮಾಡುತ್ತಾರೆ ಅನ್ನೋದೇ ಪ್ರಶ್ನೆ. ಏನೇ ಆಗಲೀ ಸ್ಪರ್ಧೆ ಮಾಡಿ ತೀರಬೇಕು ಎಂಬ ರೀತಿಯಲ್ಲಿ ಸಜ್ಜಾಗುತ್ತಿರುವ ಡಾ.ಕೆ.ಸುಧಾಕರ್‌, ಕ್ಷೇತ್ರ ಜೆಡಿಎಸ್‌ ಪಾಲಾದರೂ ಜೆಡಿಎಸ್‌ ಟಿಕೆಟ್‌ ಪಡೆದು ಸ್ಪರ್ಧೆ ಮಾಡುತ್ತಾರಾ..? ಪಕ್ಷೇತರ ಅಭ್ಯರ್ಥಿಯಾಗುತ್ತಾರಾ ಎಂಬ ಪ್ರಶ್ನೆಗಳೂ ಎದ್ದಿವೆ. ಒಂದು ವೇಳೆ ಚಿಕ್ಕಬಳ್ಳಾಪುರ ಕ್ಷೇತ್ರ ಬಿಜೆಪಿ ತೆಕ್ಕೆಯಲ್ಲೇ ಉಳಿದುಕೊಂಡರೆ, ಸುಧಾಕರ್‌ಗೆ ಟಿಕೆಟ್‌ ಸಿಗುವುದು ಸುಲಭವಾಗಬಹುದು. ಜೊತೆಗೆ ಚಿಕ್ಕಬಳ್ಳಾಪುರ ಕ್ಷೇತ್ರದಲ್ಲಿ ಜೆಡಿಎಸ್‌ಗೆ ಹಲವು ಲಕ್ಷ ಮತಗಳಿವೆ. ಅವೂ ಬಿಜೆಪಿಗೆ ಬರುವುದರಿಂದ ಸುಧಾಕರ್‌ ಗೆಲುವಿಗೂ ವರದಾನವಾಗಬಹುದು.

ಇನ್ನು ಇಲ್ಲಿ ಕಾಂಗ್ರೆಸ್‌ನಿಂದ ವೀರಪ್ಪ ಮೊಯ್ಲಿ ಹಾಗೂ ರಕ್ಷಾ ರಾಮಯ್ಯ ಅವರು ಟಿಕೆಟ್‌ ಕೇಳುತ್ತಿದ್ದಾರೆ. ವೀರಪ್ಪ ಮೊಯ್ಲಿಗೆ ಟಿಕೆಟ್‌ ಸಿಕ್ಕರೆ ಸುಧಾಕರ್‌ ಗೆಲುವು ಸಾಕಷ್ಟು ಸುಲಭವಾಗಬಹುದು ಎಂದೇ ಹೇಳಲಾಗುತ್ತಿದೆ. ಒಂದು ವೇಳೆ ರಕ್ಷಾ ರಾಮಯ್ಯಗೆ ಕಾಂಗ್ರೆಸ್‌ ಟಿಕೆಟ್‌ ಸಿಕ್ಕರೆ ನೆಕ್‌ ಟು ನೆಕ್‌ ಫೈಟ್‌ ಗ್ಯಾರೆಂಟಿ.

ಸುಧಾಕರ್‌ ಅವರು ಮಾಜಿ ಸಿಎಂ ಬಸವರಾಜ ಬೊಮ್ಮಾಯಿಗೆ ಅತ್ಯಾಪ್ತರು. ಜೊತೆಗೆ ಆರ್‌ಎಸ್‌ಎಸ್‌ನ ಕೆಲ ಪ್ರಮುಖರ ಜೊತೆಗೂ ಸ್ನೇಹ ಹೊಂದಿದ್ದಾರೆ. ಆದ್ರೆ ಯಡಿಯೂರಪ್ಪ ಕುಟುಂಬದವರು ಅಷ್ಟಕ್ಕಷ್ಟೇ. ಹೀಗಿದ್ದರೂ, ಗೆಲ್ಲುವ ಕುದುರೆ ಅಂತ ಬಂದಾಗ ಸುಧಾಕರ್‌ ಅವರಿಗೇ ಬಿಜೆಪಿ ಮಣೆ ಹಾಕಬಹುದು ಎಂದು ಹೇಳಲಾಗುತ್ತಿದೆ.

Share Post