National

ಅಯೋಧ್ಯೆಗೆ ಸ್ವರ್ಗವೇ ಧರೆಗಿಳಿದುಬಂದಂತಿದೆ!

ಅಯೋಧ್ಯೆ;  ಇಂದು ಅಯೋಧ್ಯೆ ರಾಮಮಂದಿರದಲ್ಲಿ ಪ್ರಾಣ ಪ್ರತಿಷ್ಠಾ ಕಾರ್ಯಕ್ರಮ ನಡೆಯಲಿದೆ. ಅಯೋಧ್ಯೆಯ ಎಲ್ಲಾ ಬೀದಿಗಳು ವಿದ್ಯುತ್ ದೀಪಗಳು, ಕೇಸರಿ ಧ್ವಜಗಳು ಮತ್ತು ಕಮಾನುಗಳಿಂದ ಅತಿಥಿಗಳನ್ನು ಕೈಬೀಸಿ ಕರೆಯುತ್ತಿವೆ.

ಈ ಘಟನೆಯನ್ನು ಕಣ್ತುಂಬಿಕೊಳ್ಳಲು ಜನಸಾಗರವೇ ಹರಿದುಬರುವುದರಿಂದ ಅಯೋಧ್ಯೆ ಸಡಗರ ಮನೆ ಮಾಡಿದೆ. ವೇದ ಮಂತ್ರಗಳ ನಡುವೆ ರಾಮಲಲ್ಲಾಗೆ ಪ್ರಾಣ ಪ್ರತಿಷ್ಠೆ ನಡೆಯಲಿದೆ. ಮಧ್ಯಾಹ್ನ 12.20ಕ್ಕೆ ಕಾರ್ಯಕ್ರಮ ಆರಂಭವಾಗಲಿದ್ದು, ಒಂದು ಗಂಟೆಯವರೆಗೆ ನಡೆಯಲಿದೆ.

ಪ್ರಾಣಪ್ರತಿಷ್ಠಾ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ, ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್, ಸಂತರು ಮತ್ತು ಇತರ ಗಣ್ಯರು ಭಾಗವಹಿಸಲಿದ್ದಾರೆ.

ಈ ಕಾರ್ಯಕ್ರಮವನ್ನು ನೇರವಾಗಿ ಸಾವಿರಾರು ಜನ ಹಾಗೂ ಪರೋಕ್ಷವಾಗಿ ಕೋಟಿಗಟ್ಟಲೆ ಜನ ವೀಕ್ಷಿಸಲಿದ್ದಾರೆ. ಪ್ರಾಣ ಪ್ರತಿಷ್ಠೆಯ ನಂತರ ಬಲರಾಮನ ದರ್ಶನವಾಗುತ್ತದೆ.

ಅಯೋಧ್ಯೆಯಲ್ಲಿ ಭದ್ರತೆಗಾಗಿ 30 ಸಾವಿರ ಪೊಲೀಸರನ್ನು ಬಳಸಿಕೊಳ್ಳಲಾಗುತ್ತಿದೆ ಎಂದು ಪೊಲೀಸ್ ಅಧಿಕಾರಿಗಳು ಈಗಾಗಲೇ ಘೋಷಿಸಿದ್ದಾರೆ. 10 ಸಾವಿರ ಸಿಸಿ ಕ್ಯಾಮೆರಾಗಳನ್ನು ಅಳವಡಿಸಲಾಗಿದ್ದು, ಭದ್ರತೆಯ ಮೇಲೆ ನಿಗಾ ಇರಿಸಲಾಗಿದೆ.

ಅಯೋಧ್ಯೆಯಲ್ಲಿ ರಾಮ ಮಂದಿರಕ್ಕೆ ತೆರಳುವ ಪ್ರಮುಖ ರಸ್ತೆಗಳಲ್ಲಿ ಪಾಸ್ ಹೊಂದಿರುವ ವಾಹನಗಳಿಗೆ ಮಾತ್ರ ಅವಕಾಶ ನೀಡಲಾಗಿದೆ. ಫೈಜಾಬಾದ್‌ನಿಂದ ಅಯೋಧ್ಯೆಯ ಮುಖ್ಯ ರಸ್ತೆಯ ಪ್ರವೇಶ ದ್ವಾರದಲ್ಲಿ ಬ್ಯಾರಿಕೇಡ್‌ಗಳನ್ನು ಹಾಕಲಾಗಿದೆ.

Share Post