ಜೂನಿಯರ್ ಎನ್ಟಿಆರ್ ಫ್ಲೆಕ್ಸ್ ನೋಡಿ ಮೊದಲು ಅವನ್ನು ತೊಲಗಿಸಿ ಎಂದ ಬಾಲಕೃಷ್ಣ
ಎನ್ಟಿಆರ್ ಅವರ ಪುಣ್ಯತಿಥಿಯಂದು ಅವರ ಕುಟುಂಬ ಸದಸ್ಯರ ನಡುವಿನ ಭಿನ್ನಾಭಿಪ್ರಾಯ ಮತ್ತೊಮ್ಮೆ ಬಹಿರಂಗವಾಗಿದೆ. ಎನ್ಟಿಆರ್ ಪುಣ್ಯತಿಥಿ ಹಿನ್ನೆಲೆಯಲ್ಲಿ ಹೈದರಾಬಾದ್ನ ಹುಸೇನ್ಸಾಗರ್ ತೀರದಲ್ಲಿರುವ ಎನ್ಟಿಆರ್ ಅವರ ಸಮಾಧಿ ಬಳಿ ಕುಟುಂಬ ಸದಸ್ಯರು ನಮನ ಸಲ್ಲಿಸಿದರು. ಮುಂಜಾನೆಯೇ ಜೂನಿಯರ್ ಎನ್ಟಿಆರ್ ಅವರ ಸಮಾಧಿಗೆ ನಮನ ಸಲ್ಲಿಸಿದರು. ನಂತರ ನಟ ಬಾಲಕೃಷ್ಣ ಮತ್ತು ಭುವನೇಶ್ವರಿ ಪ್ರತ್ಯೇಕವಾಗಿ ಬಂದರು.
ಆದರೆ, ಬಾಲಕೃಷ್ಣ ಎನ್ ಟಿಆರ್ ಘಾಟ್ ಗೆ ಬಂದು ‘ಈಗಲೇ ತೆಗೆದುಬಿಡಿʼ ಎಂದು ಬಹಳ ಜೋರಾಗಿ ಕೂಗಾಡುತ್ತಿರುವ ವಿಡಿಯೋ ವೈರಲ್ ಆಗುತ್ತಿವೆ. ಬಾಲಕೃಷ್ಣ ಕೋಪಗೊಂಡ ಕೂಡಲೇ ಅವರ ಹಿಂಬಾಲಕರು ಅಲ್ಲಿದ್ದ ಜೂನಿಯರ್ ಎನ್ ಟಿಆರ್ ಫ್ಲೆಕ್ಸ್ ಗಳನ್ನು ತೆಗೆದು ಪಕ್ಕಕ್ಕೆ ಹಾಕಿದರು.
ಇಂದು ಬೆಳಗ್ಗೆ ಜ್ಯೂನಿಯರ್ ಎನ್ ಟಿಆರ್ ಅವರು ಎನ್ಟಿಆರ್ ಸಮಾಧಿಗೆ ನಮನ ಸಲ್ಲಿಸಿ ತೆರಳಿದರು. ಬಾಲಕೃಷ್ಣ ಬರುವ ವೇಳೆಗೆ ಜೂನಿಯರ್ ಎನ್ ಟಿಆರ್ ಅಭಿಮಾನಿಗಳು ಇರಲಿಲ್ಲವಾದ್ದರಿಂದ ಟೆನ್ಷನ್ ಇರಲಿಲ್ಲ.
ಎನ್ಟಿಆರ್ ಆರೋಗ್ಯ ವಿಶ್ವವಿದ್ಯಾಲಯಕ್ಕೆ ಮರುನಾಮಕರಣ ಮಾಡುವಾಗ ಮಧ್ಯದಲ್ಲಿ ಹೇಳಿಕೆ ನೀಡಿದ್ದ ಜೂನಿಯರ್ ಎನ್ಟಿಆರ್, ಕೌಶಲ್ಯಾಭಿವೃದ್ಧಿ ನಿಗಮದ ಹಗರಣ ಪ್ರಕರಣದಲ್ಲಿ ಮಾಜಿ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಬಂಧನದ ಸಂದರ್ಭದಲ್ಲಿ ಮೌನವಾಗಿದ್ದರು. ಈ ಕುರಿತು ಕೆಲ ಸುದ್ದಿಗಾರರು ಬಾಲಕೃಷ್ಣ ಅವರನ್ನು ಪ್ರಶ್ನಿಸಿದಾಗ, ‘ಐ ಡೋಂಟ್ ಕೇರ್ ಬ್ರದರ್’ ಎಂದು ಬಾಲಕೃಷ್ಣ ಉತ್ತರಿಸಿದರು.
ಇತ್ತೀಚಿನ ಘಟನೆಗೆ ಜೂನಿಯರ್ ಎನ್ ಟಿಆರ್ ಆಪ್ತ ಹಾಗೂ ವೈಸಿಪಿ ಗುಡಿವಾಡ ಶಾಸಕ ಕೊಡಾಲಿ ನಾನಿ ಖಾರವಾಗಿ ಪ್ರತಿಕ್ರಿಯಿಸಿದ್ದಾರೆ. ಬಾಲಕೃಷ್ಣ, ಅಳಿಯ ನಾರಾ ಲೋಕೇಶ್ಗಾಗಿ ಜೂನಿಯರ್ ಎನ್ಟಿಆರ್ ಫ್ಲೆಕ್ಸ್ ತೆಗೆಸಿದ್ದರು. ಫ್ಲೆಕ್ಸ್ ತೆಗೆದರೂ ಜೂನಿಯರ್ ಎನ್ ಟಿಆರ್ ಗೆ ನಷ್ಟವಿಲ್ಲ. ಕುಟುಂಬಸ್ಥರು ಎನ್ಟಿಆರ್ ಹೆಸರನ್ನು ಜಪಿಸುತ್ತಾ ಚಂದ್ರಬಾಬುಗಾಗಿ ಹಿರಿಯ ಎನ್ಟಿಆರ್ರನ್ನು ಬಲಿಕೊಟ್ಟರು. ಇದೀಗ ಲೋಕೇಶ್ ಗಾಗಿ ಜೂನಿಯರ್ ಎನ್ ಟಿಆರ್ ನಾಶವಾಗುತ್ತಿದ್ದಾರೆ. ಬಾಲಕೃಷ್ಣ, ಚಂದ್ರಬಾಬು ಅವರಂತಹ ಸಾವಿರ ಮಂದಿ ಬಂದರೂ ಜೂನಿಯರ್ ಎನ್ ಟಿಆರ್ ಅವರನ್ನು ಏನೂ ಮಾಡಲು ಸಾಧ್ಯವಿಲ್ಲ,’’ ಎಂದು ಹೇಳಿದ್ದಾರೆ.