ನೈತಿಕ ಪೊಲೀಸ್ಗಿರಿ ಹೆಸರಲ್ಲಿ ನಡೀತಾ ಗ್ಯಾಂಗ್ ರೇಪ್; 7 ಮಂದಿ ರೇಪ್ ಮಾಡಿದ್ದಾರೆಂದು ದೂರು!
ಹಾವೇರಿ; ನಿನ್ನೆ ಹಾವೇರಿಯಲ್ಲಿ ನೈತಿಕ ಪೊಲೀಸ್ ಗಿರಿ ಪ್ರಕರಣ ಬೆಳಕಿಗೆ ಬಂದಿತ್ತು. ಮುಸ್ಲಿಂ ಸಮುದಾಯದ ವಿವಾಹಿತ ಮಹಿಳೆಯೊಬ್ಬರು, ಅನ್ಯಕೋಮಿನ ವಿವಾಹಿತ ವ್ಯಕ್ತಿ ಜೊತೆ ಲಾಡ್ಜ್ನಲ್ಲಿ ಇದ್ದದ್ದನ್ನು ತಿಳಿದ ಮುಸ್ಲಿಂ ಸಮುದಾಯದ ಏಳು ಯುವಕರು, ದಾಳಿ ಮಾಡಿದ್ದರು. ಇಬ್ಬರ ಮೇಲೂ ಹಲ್ಲೆ ಮಾಡಿದ್ದರು. ಇದರ ಎರಡು ವಿಡಿಯೋಗಳು ವೈರಲ್ ಆಗಿದ್ದವು. ಇದೀಗ ಈ ಪ್ರಕರಣಕ್ಕೆ ಟ್ವಿಸ್ಟ್ ಸಿಕ್ಕಿದೆ. ಸಂತ್ರಸ್ತ ಮಹಿಳೆ ಪೊಲೀಸರಿಗೆ ದೂರು ಕೊಟ್ಟಿದ್ದು, ನನ್ನ ಮೇಲೆ ಹಲ್ಲೆ ಮಾಡಿರುವ ಏಳು ಯುವಕರು, ನನ್ನ ಮೇಲೆ ಸಾಮೂಹಿಮ ಅತ್ಯಾಚಾರ ನಡೆಸಿದ್ದಾರೆ ಎಂದು ದೂರಿದ್ದಾಳೆ.
ಜ.08ರಂದು ಸೋಮವಾರ ಅನ್ಯಕೋಮಿನ ಇಬ್ಬರು ವಿವಾಹಿತರು ಹಾವೇರಿ ಜಿಲ್ಲೆ ಹಾನಗಲ್ ತಾಲೂಕಿನ ನಾಕ್ಲಕ್ರಾಸ್ ಬಳಿ ಇರುವ ಖಾಸಗಿ ಹೋಟೆಲ್ ನಲ್ಲಿ ತಂಗಿದ್ದರು. ಇದನ್ನು ತಿಳಿದ ಕೆಲ ಯುವಕರು ಏಕಾಏಕಿ ದಾಳಿ ನಡೆಸಿ, ಇಬ್ಬರ ಮೇಲೆ ಹಲ್ಲೆ ಮಾಡಿದ್ದರು. ಇದರ ವಿಡಿಯೋಗಳು ವೈರಲ್ ಆಗಿದ್ದವು. ಅನಂತರ ಆ ಯುವಕರು, ಮಹಿಳೆಯನ್ನು ಕಾರಿನಲ್ಲಿ ಅರಣ್ಯ ಪ್ರದೇಶಕ್ಕೆ ಕರೆದುಕೊಂಡು ಹೋಗಿ ಚಿತ್ರಹಿಂಸೆ ನೀಡಿದ್ದಾರಂತೆ. ಖಾಸಗಿ ಅಂಗವನ್ನು ಘಾಸಿಗೊಳಿಸಿದ್ದೇ ಅಲ್ಲದೆ, ಒಬ್ಬರಾದ ಮೇಲೆ ಒಬ್ಬರಂತೆ ಅತ್ಯಾಚಾರ ಎಸಗಿದ್ದಾರೆ ಎಂದು ಮಹಿಳೆ ಆರೋಪ ಮಾಡಿದ್ದಾಳೆ. ಈ ಸಂಬಂಧ ದೂರು ದಾಖಲಾಗಿದ್ದು, ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ. ಉಳಿದವರು ತಲೆಮರೆಸಿಕೊಂಡಿದ್ದು, ಅವರಿಗಾಗಿ ಹುಡುಕಾಟ ನಡೆಸಲಾಗುತ್ತಿದೆ.
ಮಹಿಳೆಯ ಪತಿ ಕೂಡಾ ಈ ಬಗ್ಗೆ ಪೊಲೀಸರಿಗೆ ದೂರು ಕೊಟ್ಟಿದ್ದಾರೆ. ಅರಣ್ಯದಲ್ಲಿ ನನ್ನ ಪತ್ನಿ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಲಾಗಿದ್ದು, ಅದರ ವಿಡಿಯೋ ನನ್ನ ಬಳಿ ಇದೆ ಎಂದು ಮಹಿಳೆಯ ಪತಿ ಹೇಳಿಕೊಂಡಿದ್ದಾರೆ.