BengaluruPolitics

ಮೂವರು ಡಿಸಿಎಂಗಳ ನೇಮಕಕ್ಕೆ ಅಸ್ತು ಎನ್ನುತ್ತಾ ಕಾಂಗ್ರೆಸ್‌ ಹೈಕಮಾಂಡ್‌..?

ಬೆಂಗಳೂರು; ಲೋಕಸಭಾ ಚುನಾವಣೆ ಹತ್ತಿರವಾಗುತ್ತಿದ್ದಂತೆ ಕರ್ನಾಟಕದಲ್ಲಿ ಮೂವರು ಡಿಸಿಎಂಗಳ ನೇಮಕಕ್ಕಾಗಿ ಒತ್ತಡ ಹೆಚ್ಚಾಗುತ್ತಿದೆ. ಇತ್ತೀಚೆಗಷ್ಟೇ ಸಚಿವ ಸತೀಶ್‌ ಜಾರಕಿಹೊಳಿಯವರು ದೆಹಲಿಗೆ ತೆರಳಿ ಹೈಕಮಾಂಡ್‌ ನಾಯಕರನ್ನು ಭೇಟಿಯಾಗಿ ಬಂದಿದ್ದರು. ಇದೀಗ, ಸಚಿವ ಸತೀಶ್‌ ಜಾರಕಿಹೊಳಿಯವರ ಬೆಂಗಳೂರಿನ ನಿವಾಸದಲ್ಲಿ ಗುಪ್ತ ಮಾತುಕತೆ ನಡೆದಿದೆ. ದಲಿತ ಸಮುದಾಯಕ್ಕೆ ಸೇರಿದ ಕೆಲ ಸಚಿವರು ಸತೀಶ್‌ ಜಾರಕಿಹೊಳಿ ನಿವಾಸದಲ್ಲಿ ಗುರುವಾರ ರಾತ್ರಿ ಎರಡು ಗಂಟೆಗೂ ಹೆಚ್ಚು ಕಾಲ ಗುಪ್ತ ಮಾತುಕತೆ ನಡೆಸಿದ್ದಾರೆ.

ಸಚಿವರಾದ ಕೆ.ಎನ್‌.ರಾಜಣ್ಣ, ಹೆಚ್‌.ಸಿ.ಮಹಾದೇವಪ್ಪ ಹಾಗೂ ಗೃಹ ಸಚಿವ ಡಾ.ಜಿ.ಪರಮೇಶ್ವರ್‌ ಅವರು ಸತೀಶ್‌ ಜಾರಕಿಹೊಳಿ ನಿವಾಸದಲ್ಲಿ ನಡೆದ ಸಭೆಯಲ್ಲಿ ಪಾಲ್ಗೊಂಡಿದ್ದರು. ಸುಮಾರು ಎರಡು ಗಂಟೆಗೂ ಹೆಚ್ಚು ಕಾಲ ಈ ನಾಯಕರು ಚರ್ಚೆ ನಡೆಸಿದ್ದಾರೆ. ಆದ್ರೆ ನಿವಾಸದಿಂದ ಹೊರಬಂದ ನಾಯಕರು, ಸತೀಶ್‌ ಜಾರಕಿಹೊಳಿ ಊಟಕ್ಕೆ ಕರೆದಿದ್ದರು. ಹೀಗಾಗಿ ಹೋಗಿದ್ದೆವು. ಯಾವುದೇ ರಾಜಕೀಯ ಚರ್ಚೆ ನಡೆದಿಲ್ಲ ಎಂದು ಹೇಳಿದ್ದಾರೆ. ಆದ್ರೆ, ಮೂವರು ಡಿಸಿಎಂಗಳ ವಿಚಾರದ ಬಗ್ಗೆ ಚರ್ಚೆ ನಡೆದಿರುವುದು ಸ್ಪಷ್ಟ ಅನ್ನೋದು ಬಲ್ಲ ಮೂಲಗಳ ಮಾತು.

ಗುರುವಾರ ಬೆಳಗ್ಗೆಯಷ್ಟೇ ಸಚಿವರಾದ ಕೆ.ಎನ್‌.ರಾಜಣ್ಣ ಅವರು ತುಮಕೂರಿನಲ್ಲಿ ಮಾತನಾಡಿದ್ದರು. ಲೋಕಸಭಾ ಚುನಾವಣೆಯಲ್ಲಿ ರಾಜ್ಯದಲ್ಲಿ ಕಾಂಗ್ರೆಸ್‌ ಹೆಚ್ಚಿನ ಸ್ಥಾನ ಗಳಿಸಬೇಕು ಅಂದ್ರೆ ಮೂವರು ಡಿಸಿಎಂಗಳನ್ನು ಮಾಡಬೇಕು. ಮೂವರು ಡಿಸಿಎಂಗಳು ಮಾಡಿದರೆ ಯಾರಿಗೇನು ನಷ್ಟ ಆಗುತ್ತೆ ಎಂದು ಪ್ರಶ್ನೆ ಮಾಡಿದ್ದರು. ಈ ಬೆನ್ನಲ್ಲೇ ಗುರುವಾರ ರಾತ್ರಿ ಪ್ರಮುಖ ದಲಿತ ಸಚಿವರ ಮೀಟಿಂಗ್‌ ನಡೆದಿರುವುದು ರಾಜಕೀಯ ವಲಯದಲ್ಲಿ ದೊಡ್ಡ ಚರ್ಚೆಗೆ ಕಾರಣವಾಗಿದೆ. ಎಸ್‌ಟಿ ಸಮುದಾಯಕ್ಕೆ ಸೇರುವ ಸತೀಶ್‌ ಜಾರಕಿಹೊಳಿ ಡಿಸಿಎಂ ಸ್ಥಾನಕ್ಕಾಗಿ ಲಾಬಿ ಮಾಡುತ್ತಿದ್ದಾರೆ. ಇನ್ನು ಕೆ.ಎನ್‌.ರಾಜಣ್ಣ ಅವರು ಎಸ್‌ಸಿ ಸಮುದಾಯಕ್ಕೆ ಸೇರಿದ ಡಾ.ಜಿ.ಪರಮೇಶ್ವರ್‌ ಪರ ಬ್ಯಾಟಿಂಗ್‌ ಮಾಡುತ್ತಿದ್ದಾರೆ. ಇನ್ನು ಲಿಂಗಾಯತ ಸಮುದಾಯದ ಒಬ್ಬರಿಗೂ ಡಿಸಿಎಂ ಸ್ಥಾನ ಕೊಡಬೇಕೆಂಬುದು ಈ ಗುಂಪಿನ ಆಗ್ರಹ.

ಕೆಲ ದಿನಗಳ ಹಿಂದೆಯಷ್ಟೇ ಗೃಹ ಸಚಿವ ಡಾ.ಜಿ.ಪರಮೇಶ್ವರ್‌ ಅವರ ನಿವಾಸದಲ್ಲಿ ಇದೇ ದಲಿತ ನಾಯಕರು ಸಭೆ ಸೇರಿದ್ದರು. ಆವತ್ತೂ ಕೂಡಾ ಊಟಕ್ಕೆ ಬಂದಿದ್ದರು ಎಂದೇ ಸಬೂಬು ಹೇಳಿದ್ದರು. ಆದ್ರೆ ಮೂವರು ಡಿಸಿಎಂಗಳ ನೇಮಕಕ್ಕಾಗಿ ಕಸರತ್ತು ನಡೆಯುತ್ತಿರುವುದು ಎಲ್ಲರಿಗೂ ಗೊತ್ತಿರುವ ವಿಚಾರವೇ. ಇನ್ನು ದಸರಾ ಸಮಯದಲ್ಲಿ ಸಚಿವ ಸತೀಶ್‌ ಜಾರಕಿಹೊಳಿ ನೇತೃತ್ವದಲ್ಲಿ 20ಕ್ಕೂ ಹೆಚ್ಚು ಶಾಸಕರು ಟೂರ್‌ ಹೋಗಲು ಪ್ಲ್ಯಾನ್‌ ಮಾಡಿದ್ದರು. ಇದರ ಜೊತೆಗೆ ವಿದೇಶ ಪ್ರಯಾಣಕ್ಕೂ ಪ್ಲ್ಯಾನ್‌ ಆಗಿತ್ತು. ಇದೆಲ್ಲವೂ ಕೂಡಾ ಮೂವರು ಡಿಸಿಎಂಗಳ ನೇಮಕಕ್ಕಾಗಿಯೇ ಅನ್ನೋದು ಎಲ್ಲರಿಗೂ ಗೊತ್ತಿರುವ ವಿಚಾರ.

ಸದ್ಯ ಹಿಂದುಳಿದ ವರ್ಗಕ್ಕೆ ಸೇರಿದ ಸಿದ್ದರಾಮಯ್ಯ ಅವರು ಸಿಎಂ ಆಗಿದ್ದಾರೆ. ಒಕ್ಕಲಿಗ ಸಮುದಾಯದ ಡಿ.ಕೆ.ಶಿವಕುಮಾರ್‌ ಡಿಸಿಎಂ ಆಗಿದ್ದಾರೆ. ಇನ್ನು ಲಿಂಗಾಯತ, ಎಸ್‌ಸಿ ಹಾಗೂ ಎಸ್‌ಟಿ ಸಮುದಾಯಕ್ಕೆ ಸೇರಿದ ಒಬ್ಬೊಬ್ಬರಿಗೆ ಡಿಸಿಎಂ ಸ್ಥಾನ ನೀಡಿದರೆ ಎಲ್ಲಾ ಸಮುದಾಯಕ್ಕೂ ನ್ಯಾಯ ಒದಗಿಸಿದಂತಾಗುತ್ತದೆ. ಇದರಿಂದ ಲೋಕಸಭಾ ಚುನಾವಣೆಯಲ್ಲಿ ಪಕ್ಷಕ್ಕೆ ಅನುಕೂಲವಾಗುತ್ತದೆ ಅನ್ನೋದು ಸತೀಶ್‌ ಜಾರಕಿಹೊಳಿ ಗುಂಪಿನ ವಾದ. ಈ ಬಗ್ಗೆ ಕಾಂಗ್ರೆಸ್‌ ಹೈಕಮಾಂಡ್‌ ಯಾವ ರೀತಿಯ ನಿರ್ಧಾರ ಕೈಗೊಳ್ಳುತ್ತೋ ನೋಡಬೇಕು.

Share Post