ಮೆಟ್ರೋದಲ್ಲಿ ಯುವತಿಗೆ ಲೈಂಗಿಕ ಕಿರುಕುಳ; ತಪ್ಪಿಸಿಕೊಳ್ಳಲು ಹೋದ ಕಿಡಿಗೇಡಿ ಲಾಕ್
ಬೆಂಗಳೂರು; ಜನನಿಬಿಡ ಪ್ರದೇಶದಲ್ಲಿ ಯುವತಿಯರ ಜೊತೆ ಅನುಚಿತ ವರ್ತನೆ ಮಾಡುವವರ ಸಂಖ್ಯೆ ಬೆಂಗಳೂರಿನಲ್ಲಿ ಹೆಚ್ಚಾಗುತ್ತಿದೆ. ಇತ್ತೀಚೆಗೆ ಮಾಲ್ ಒಂದರಲ್ಲಿ ನಿವೃತ್ತ ಪ್ರಾಂಶುಪಾಲನೊಬ್ಬ ಇಂತಹ ಅನಾಚಾರ ನಡೆಸಿ ಸಿಕ್ಕಿಬಿದ್ದಿದ್ದ. ಇದೀಗ ಮೆಟ್ರೋದಲ್ಲಿ ಯುವತಿಯೊಬ್ಬಳಿಗೆ ಕಿಡಿಗೇಡಿಯೊಬ್ಬ ಲೈಂಗಿಕ ಕಿರುಕುಳ ನೀಡಿದ್ದಾನೆ. ಇದರಿಂದಾಗಿ ಯುವತಿ ಕಿರುಚಿಕೊಂಡಿದ್ದಾಳೆ. ಈ ವೇಳೆ ಆತ ಎಸ್ಕಲೇಟರ್ ಬಳಸಿ ಪರಾರಿಯಾಗಲು ಹೋಗಿದ್ದಾನೆ. ಆದ್ರೆ ಮೆಟ್ರೋ ಸಿಬ್ಬಂದಿ ಆತನನ್ನು ಹಿಡಿದಿದ್ದಾರೆ.
ನಿನ್ನೆ ಬೆಳಗ್ಗೆ 9.40 ಗಂಟೆ ಸುಮಾರಿಗೆ ರಾಜಾಜಿನಗರದಲ್ಲಿ ಐಟಿ ಉದ್ಯೋಗಿ ಮಹಿಳೆಯೊಬ್ಬರು ಮೆಟ್ರೋ ಹತ್ತಿದ್ದಾರೆ. ಈ ವೇಳೆ ಆಕೆಯನ್ನು ಹಿಂಬಾಳಿಸಿಕೊಂಡು ಬಂದಿದ್ದ ವ್ಯಕ್ತಿಯೊಬ್ಬ, ಜನರ ಮಧ್ಯೆ ನಿಂತು ಆಕೆಯ ಮೈಕೈ ಮುಟ್ಟಿದ್ದಾನೆ. ಈ ವೇಳೆ ಮಹಿಳೆ ಜೋರಾಗಿ ಕಿರುಚಿಕೊಂಡಿದ್ದಾಳೆ. ಅಷ್ಟರಲ್ಲಿ ಮುಂದಿನ ನಿಲ್ದಾಣ ಬಂದಿದ್ದು, ಆತ ಅಲ್ಲಿಂದ ಎಸ್ಕೇಪ್ ಆಗಲು ಯತ್ನಿಸಿದ್ದಾನೆ. ಎಸ್ಕಲೇಟರ್ ಬಳಸಿ ಇಳಿಯಲು ಹೋಗಿದ್ದಾನೆ. ಈ ವೇಳೆ ಮೆಟ್ರೋ ಭದ್ರತಾ ಅಧಿಕಾರಿ ಪುಟ್ಟಮಾದಯ್ಯ ಮತ್ತು ಸಹಾಯಕ ಭದ್ರತಾ ಅಧಿಕಾರಿ ದಿವಾಕರ್ ಆರೋಪಿಯನ್ನು ಅಡ್ಡಹಾಕಿ ಹಿಡಿದಿದ್ದಾರೆ.
ಲೊಕೇಶ್ (30) ಎಂಬಾತನೇ ಸಿಕ್ಕಿಬಿದ್ದಾತ. ಕೂಡಲೇ ಆರೋಪಿಯನ್ನು ಉಪ್ಪಾರ ಪೇಟೆ ಪೊಲೀಸ್ ಠಾಣೆಗೆ ಒಪ್ಪಿಸಲಾಗಿದೆ. ಆರೋಪಿ ಈ ಹಿಂದೆ ಬಿಎಂಟಿಸಿ ಬಸ್‌ನಲ್ಲಿ ಯುವತಿಯೊಬ್ಬಳಿಂದ ಮೊಬೈಲ್ ಕಳ್ಳತನ ಮಾಡಲು ಹೋಗಿ ಸಿಕ್ಕಿಬಿದ್ದಿದ್ದ ಎಂದು ತಿಳಿದುಬಂದಿದೆ. ಆರೋಪಿಯಿಂದ 20 ಮೊಬೈಲ್ ಗಳು, ಒಂದು ದ್ವಿಚಕ್ರ ವಾಹನ ವಶಪಡಿಸಿಕೊಂಡಿದ್ದಾರೆ.