BengaluruPolitics

ಲೋಕಸಭೆಯಲ್ಲಿ ಬಿಜೆಪಿಯ ಒಕ್ಕಲಿಗ-ಲಿಂಗಾಯತ ಲೆಕ್ಕಾಚಾರ ವರ್ಕೌಟ್‌ ಆಗುತ್ತಾ..?

ಬೆಂಗಳೂರು; ಕರ್ನಾಟಕದಲ್ಲಿ ಬಿಜೆಪಿ ಲೋಕಸಭಾ ಚುನಾವಣೆಗೆ ಭರ್ಜರಿ ಸಿದ್ಧತೆ ನಡೆಸುತ್ತಿದೆ. ಮೊದಲ ಬಾರಿ ಶಾಸಕರಾಗಿ ಆಯ್ಕೆಯಾಗಿರುವ ವಿಜಯೇಂದ್ರ ಅವರನ್ನು ಬಿಜೆಪಿ ರಾಜ್ಯಾಧ್ಯಕ್ಷರಾಗಿ ನೇಮಕ ಮಾಡಿರುವ ಬಿಜೆಪಿ ಹೈಕಮಾಂಡ್‌ ಲೋಕಸಭಾ ಚುನಾವಣೆ ದೃಷ್ಟಿಯಿಂದ ಹಲವು ಮಹತ್ವದ ಹೆಜ್ಜೆಗಳನ್ನಿರಿಸಿದೆ. ಕರ್ನಾಟಕದ ಎರಡು ಪ್ರಮುಖ ಸಮುದಾಯಗಳಾದ ಲಿಂಗಾಯತ ಹಾಗೂ ಒಕ್ಕಲಿಗ ಸಮುದಾಯದ ಮತಗಳನ್ನು ಬಿಜೆಪಿ ಈ ಬಾರಿ ಭಾರಿ ತಂತ್ರಗಾರಿಕೆ ನಡೆಸಿದೆ. ಲೋಕಸಭಾ ಚುನಾವಣೆ ಇನ್ನೂ ಆರೇಳು ತಿಂಗಳಿರುವಾಗಲೇ ಪಕ್ಷ ಸಂಘಟನೆಗಾಗಿ ತೆಗೆದುಕೊಂಡಿರುವ ಹಲವು ನಿರ್ಧಾರಗಳು ಬಿಜೆಪಿಗೆ ಚುನಾವಣೆಯಲ್ಲಿ ಸಾಕಷ್ಟು ಲಾಭವಾಗಲಿದೆ ಎಂದು ಹೇಳಲಾಗುತ್ತಿದೆ.

ಲಿಂಗಾಯತರ ಮತ ಸೆಳೆಯಲು ವಿಜಯೇಂದ್ರಗೆ ಪಟ್ಟ!
ಕರ್ನಾಟಕದಲ್ಲಿ ಮೊದಲಿನಿಂದಲೂ ಲಿಂಗಾಯತರು ಬಿಜೆಪಿಯ ಪರವಾಗಿದ್ದರು. ಆದ್ರೆ ಯಡಿಯೂರಪ್ಪರನ್ನು ಸಿಎಂ ಸ್ಥಾನದಿಂದ ಕೆಳಗಿಳಿಸಿದರು ಅನ್ನೋ ಕಾರಣಕ್ಕೆ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಲಿಂಗಾಯತ ಮತಗಳು ಚದುರಿಹೋಗಿದ್ದವು. ಇದರಿಂದಾಗಿ ಯಡಿಯೂರಪ್ಪ ಅವರಿಲ್ಲದೆ ಕರ್ನಾಟಕದಲ್ಲಿ ರಾಜಕಾರಣ ಮಾಡೋದಕ್ಕೆ ಆಗೋದಿಲ್ಲ ಅನ್ನೋದು ಬಿಜೆಪಿ ಹೈಕಮಾಂಡ್‌ಗೆ ಅರ್ಥವಾಗಿದೆ. ಈ ಕಾರಣಕ್ಕಾಗಿ ಬಿಜೆಪಿ ಹೈಕಮಾಂಡ್‌ ಯಡಿಯೂರಪ್ಪ ಅವರ ಪುತ್ರ ಹಾಗೂ ಶಿಕಾರಿಪುರ ಕ್ಷೇತ್ರದ ಶಾಸಕ ವಿಜಯೇಂದ್ರ ಅವರಿಗೆ ಬಿಜೆಪಿ ರಾಜ್ಯಾಧ್ಯಕ್ಷ ಪಟ್ಟ ಕಟ್ಟಿದೆ. ಯಡಿಯೂರಪ್ಪ ಪುತ್ರ ಅನ್ನೋ ಏಕೈಕ ಕಾರಣದಿಂದ ವಿಜಯೇಂದ್ರಗೆ ಈ ಪಟ್ಟ ಸಿಕ್ಕಿಲ್ಲ. ವಿಜಯೇಂದ್ರ ಅವರು ಯುವ ನಾಯಕರು. ಬಿಜೆಪಿಗೆ ನೆಲೆಯೇ ಇಲ್ಲದ ಕ್ಷೇತ್ರಗಳಲ್ಲಿ ನಡೆದ ಉಪಚುನಾವಣೆಯಲ್ಲಿ ವಿಜಯೇಂದ್ರ ಅವರು ಮುಂದೆ ನಿಂತು ಬಿಜೆಪಿ ಅಭ್ಯರ್ಥಿಗಳನ್ನು ಗೆಲ್ಲಿಸಿದ್ದಾರೆ. ಅಷ್ಟೇ ಏಕೆ, ರಾಜ್ಯ ಬಿಜೆಪಿ ಉಪಾಧ್ಯಕ್ಷರಾಗಿ ವಿಜಯೇಂದ್ರ ಅವರು ರಾಜ್ಯಾಧ್ಯಕ್ಷ ಸುತ್ತಾಡಿದ್ದಾರೆ.
2018ರಲ್ಲಿ ವರುಣಾದಲ್ಲಿ ಸಿದ್ದರಾಮಯ್ಯ ಮಗ ಯತೀಂದ್ರ ವಿರುದ್ಧ ಸ್ಪರ್ಧೆ ಮಾಡೋದಕ್ಕೆ ವಿಜಯೇಂದ್ರ ಸಿದ್ಧತೆ ಮಾಡಿಕೊಂಡಿದ್ದರು. ಅಲ್ಲಿ ಅವರು ಪಕ್ಷ ಸಂಘಟಿಸಿದ ರೀತಿಯನ್ನು ನೋಡಿ ರಾಜ್ಯ ಯುವ ಸಮುದಾಯ ಅವರತ್ತ ಆಕರ್ಷಿತರಾಗಿತ್ತು. ಸಾಕಷ್ಟು ಕ್ರಿಯಾಶೀಲರಾಗಿರುವ ವಿಜಯೇಂದ್ರಗೆ ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನ ಸಿಕ್ಕಿದೆ. ಅಧಿಕಾರ ವಹಿಸಿಕೊಂಡ ಕೂಡಲೇ ಹಿರಿಯ ನಾಯಕರನ್ನು ವಿಶ್ವಾಸಕ್ಕೆ ತೆಗೆದುಕೊಂಡು ವಿಜಯೇಂದ್ರ ಪಕ್ಷ ಕಟ್ಟೋ ಕೆಲಸದಲ್ಲಿ ತೊಡಗಿಸಿಕೊಂಡಿದ್ದಾರೆ. ಇತ್ತ ಯಡಿಯೂರಪ್ಪ ಅವರು ಕೂಡಾ ಈಗ ಸಕ್ರಿಯರಾಗಿದ್ದಾರೆ. ಈ ಕಾರಣದಿಂದಾಗಿ ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಲಿಂಗಾಯತ ಸಮುದಾಯದ ಹೆಚ್ಚಿನ ಮತಗಳನ್ನು ಬಿಜೆಪಿ ಪಡೆಯಲಿದೆ ಎಂಬ ಮಾತುಗಳು ಕೇಳಿಬರುತ್ತಿವೆ.

ಒಕ್ಕಲಿಗ ಸಮುದಾಯದ ಆರ್‌.ಅಶೋಕ್‌ಗೆ ವಿಪಕ್ಷ ನಾಯಕ
ಇನ್ನು ರಾಜ್ಯದ ಮತ್ತೊಂದು ಪ್ರಮುಖ ಸಮುದಾಯವಾದ ಒಕ್ಕಲಿಗರ ಸಮುದಾಯಕ್ಕೆ ಸೇರಿದ ಆರ್‌.ಅಶೋಕ್‌ ಅವರನ್ನು ವಿಧಾನಸಭೆ ವಿಪಕ್ಷ ನಾಯಕರಾಗಿ ಆಯ್ಕೆ ಮಾಡಲಾಗಿದೆ. ವಿಪಕ್ಷ ನಾಯಕನ ಆಯ್ಕೆಗೂ ಬಿಜೆಪಿ ಹೈಕಮಾಂಡ್‌ ಕಾದು ನೋಡುವ ತಂತ್ರ ಅನುಸರಿಸಿತ್ತು. ಆರು ತಿಂಗಳ ನಂತರ ಅಳೆದೂತೂಗಿ ಆರ್‌.ಅಶೋಕ್‌ ಅವರನ್ನು ವಿಪಕ್ಷ ನಾಯಕರಾಗಿ ಆಯ್ಕೆ ಮಾಡಲಾಗಿದೆ. ಆರ್‌.ಅಶೋಕ್‌ ಅವರನ್ನು ಆಯ್ಕೆ ಮಾಡಿದ್ದರಲ್ಲಿ ಹಲವು ತಂತ್ರಗಳಿವೆ. ಅಶೋಕ್‌ ಅವರು ಒಕ್ಕಲಿಗರಾಗಿರುವುದರಿಂದ ಒಕ್ಕಲಿಗ ಮತಗಳನ್ನು ಸೆಳೆಯಬಹುದು. ಜೊತೆಗೆ ಉಪಮುಖ್ಯಮಂತ್ರಿ, ಗೃಹ ಇಲಾಖೆ, ಸಾರಿಗೆ ಹೀಗೆ ಹಲವಾರು ಖಾತೆಗಳನ್ನು ನಿಭಾಯಿಸಿದ್ದಾರೆ. ಜೊತೆಗೆ ಸಂಘ ಪರಿವಾರದಿಂದ ಬಂದಂತಹ ನಾಯಕರು. ಹೀಗಾಗಿ ಆರ್‌.ಅಶೋಕ್‌ ವಿಪಕ್ಷ ನಾಯಕರಾದರೆ, ಲೋಕಸಭಾ ಚುನಾವಣೆಯಲ್ಲಿ ಅನುಕೂಲವಾಗುತ್ತೆ ಅನ್ನೋ ಲೆಕ್ಕಾಚಾರ ಬಿಜೆಪಿ ಹೈಕಮಾಂಡ್‌ದು. ಇನ್ನು ರಾಜ್ಯದಲ್ಲಿ ಲೋಕಸಭಾ ಚುನಾವಣೆಗಾಗಿ ಜೆಡಿಎಸ್‌ ಜೊತೆ ಬಿಜೆಪಿ ಹೊಂದಾಣಿಕೆ ಮಾಡಿಕೊಂಡಿದೆ. ಆರ್‌.ಅಶೋಕ್‌ ಅವರು ಜೆಡಿಎಸ್‌ ನಾಯಕರ ಜೊತೆ ಒಳ್ಳೆ ಬಾಂಧವ್ಯ ಹೊಂದಿದ್ದಾರೆ. ಹೀಗಾಗಿ, ಚುನಾವಣೆಯಲ್ಲಿ ಜೆಡಿಎಸ್‌ ನಾಯಕರ ಜೊತೆ ಒಕ್ಕಲಿಗ ಮತಗಳನ್ನು ಸೆಳೆಯಲು ಸಹಾಯಕವಾಗಬಹುದು.

ಜೆಡಿಎಸ್‌ ಜೊತೆಗಿನ ಹೊಂದಾಣಿಕೆಯಿಂದ ಬಿಜೆಪಿಗೆ ಲಾಭ
ರಾಜ್ಯದಲ್ಲಿ ಲಿಂಗಾಯತ ಮತ ಬ್ಯಾಂಕ್‌ ಬಿಜೆಪಿ ಪರವಾಗಿದೆ. ಒಕ್ಕಲಿಗ ಮತಗಳನ್ನೂ ಬುಟ್ಟಿಗೆ ಹಾಕಿಕೊಂಡರೆ ಕರ್ನಾಟಕದಲ್ಲಿ ಬಿಜೆಪಿ ಭದ್ರವಾಗಿ ನೆಲೆಯೂರಬಹುದು ಅನ್ನೋದು ಬಿಜೆಪಿ ಹೈಕಮಾಂಡ್‌ಗೆ ಗೊತ್ತಿದೆ. ಈ ಕಾರಣಕ್ಕಾಗಿಯೇ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಒಕ್ಕಲಿಗ ಮತಗಳನ್ನು ಬುಟ್ಟಿಗೆ ಹಾಕಿಕೊಳ್ಳಲು ಬಿಜೆಪಿ ನಾಯಕರು ನಾನಾ ಕಸರತ್ತು ನಡೆಸಿದರು. ಬಿಜೆಪಿಯಲ್ಲಿರುವ ಹಲವು ಒಕ್ಕಲಿಗರ ನಾಯಕರನ್ನು ಮುಂಚೂಣಿಗೆ ತಂದು ಮಂಡ್ಯ, ಮೈಸೂರು ಭಾಗದಲ್ಲಿರುವ ಒಕ್ಕಲಿಗರ ಮತ ಸೆಳೆಯೋ ಪ್ರಯತ್ನ ನಡೆಯಿತು. ಆದ್ರೆ ಇದು ಸಾಧ್ಯವಾಗಲಿಲ್ಲ. ಯಾಕಂದ್ರೆ, ಯಡಿಯೂರಪ್ಪ ಇಲ್ಲದೆ ಲಿಂಗಾಯತರು ಹೇಗೆ ಮತ ಹಾಕೋದಿಲ್ಲವೋ, ಒಕ್ಕಲಿಗರಲ್ಲಿ ಬಹುತೇಕ ಮತಗಳು ಈಗಲೂ ದೇವೇಗೌಡರ ಕುಟುಂಬ ಬಿಟ್ಟು ಬೇರೆಯವರಿಗೆ ಹಾಕೋದಿಲ್ಲ. ಇದನ್ನು ಅರಿತ ಬಿಜೆಪಿ ಹೈಕಮಾಂಡ್‌, ಜೆಡಿಎಸ್‌ ಪಕ್ಷದೊಂದಿಗೆ ಹೊಂದಾಣಿಕೆ ಮಾಡಿಕೊಂಡು ಆ ಮೂಲಕ ಬಿಜೆಪಿಗೆ ಒಕ್ಕಲಿಗ ಮತಗಳನ್ನು ಸೆಳೆಯುವ ಪ್ರಯತ್ನಕ್ಕೆ ಮುಂದಾಗಿದೆ.

ಕೆಲವರ ಅಸಮಾಧಾನವಿದ್ದರೂ ಬಿಜೆಪಿಗೆ ನಷ್ಟವಿಲ್ಲ
ವಿ.ಸೋಮಣ್ಣ, ಬಸನಗೌಡ ಪಾಟೀಲ್‌ ಯತ್ನಾಳ್‌, ಅರವಿಂದ ಬೆಲ್ಲದ್‌ ಸೇರಿದಂತೆ ಕೆಲ ಮುಖಂಡರು ಪಕ್ಷದ ತೀರ್ಮಾನಿಗಳಿಂದಾಗಿ ಮುನಿಸಿಕೊಂಡಿದ್ದಾರೆ. ಆದರೂ ಅವರ ಮನವೊಲಿಸುವ ಪ್ರಯತ್ನಗಳು ನಡೆಯುತ್ತಿವೆ. ಒಂದಿಬ್ಬರು ಪಕ್ಷ ಬಿಟ್ಟು ಹೋದರೂ ಬಿಜೆಪಿಗೆ ಯಾವುದೇ ನಷ್ಟವಾಗೋದಿಲ್ಲ ಎಂದು ಹೇಳಲಾಗುತ್ತಿದೆ. ಇನ್ನು ವಿಧಾನಪರಿಷತ್‌ ವಿಪಕ್ಷ ನಾಯಕನಾಗಿ ಹಿಂದುಳಿದ ವರ್ಗದವರನ್ನು ಮಾಡೋ ಚಿಂತನೆಯಲ್ಲೂ ಇದೆ. ಮೂಲಗಳ ಪ್ರಕಾರ ಕೋಟಾ ಶ್ರೀನಿವಾಸ ಪೂಜಾರಿಯವರನ್ನು ಪರಿಷತ್‌ ವಿಪಕ್ಷ ನಾಯಕನಾಗಿ ಆಯ್ಕೆ ಮಾಡಿದರೆ, ಕರಾವಳಿ ಹಾಗೂ ಶಿವಮೊಗ್ಗ ಭಾಗದಲ್ಲಿ ಪ್ರಾಬಲ್ಯವಿರುವ ಈಡಿಗ-ಬಿಲ್ಲವ ಮತಗಳು ಸೇರಿದಂತೆ ಹಿಂದುಳಿದ ವರ್ಗಗಳ ಮತಗಳನ್ನೂ ಸೆಳೆಯಬಹುದೆಂಬ ಲೆಕ್ಕಾಚಾರವಿದೆ.

ವಿಜಯೇಂದ್ರ ಹಾಗೂ ಆರ್‌.ಅಶೋಕ್‌ ಅಧಿಕಾರ ಸ್ವೀಕರಿಸಿದ ಮೇಲೆ ರಾಜ್ಯ ಬಿಜೆಪಿಯಲ್ಲಿ ಚೈತನ್ಯ ಮೂಡಿದೆ. ಬಿ.ಎಲ್‌.ಸಂತೋಷ್‌ ಅವರ ಕೈಯಲ್ಲಿದ್ದ ರಾಜ್ಯ ಬಿಜೆಪಿ ಈಗ ಮತ್ತೆ ಯಡಿಯೂರಪ್ಪ ಅವರ ಕೈಗೆ ಬಂದಿದೆ. ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ಅವರ ಮಗ ವಿಜಯೇಂದ್ರ ಆದರೆ, ವಿಪಕ್ಷ ನಾಯಕ ಆರ್‌.ಅಶೋಕ್‌ ಕೂಡಾ ಯಡಿಯೂರಪ್ಪ ಅವರ ಗರಡಿಯಲ್ಲೇ ಬೆಳೆದವರು. ಹೀಗಾಗಿ, ಲೋಕಸಭಾ ಚುನಾವಣೆ ಸಂಪೂರ್ಣವಾಗಿ ರಾಜ್ಯದಲ್ಲಿ ಯಡಿಯೂರಪ್ಪ ಮುಂದಾಳತ್ವದಲ್ಲೇ ನಡೆಯೋದು ಪಕ್ಕಾ ಆಗಿದೆ. ಈ ಬಾರಿ 28 ಕ್ಷೇತ್ರಗಳಲ್ಲಿ 28 ಕ್ಷೇತ್ರಗಳನ್ನೂ ಗೆಲ್ಲುವ ಉತ್ಸಾಹದಲ್ಲಿ ಬಿಜೆಪಿ ನಾಯಕರು ಸಜ್ಜಾಗುತ್ತಿದ್ದಾರೆ.

 

Share Post