ಸಿಬಿಐ ದಾಳಿಯಾದ ಬೆನ್ನಲ್ಲೇ ಸಾವು; ಕಂಟೋನ್ಮೆಂಟ್ ಬೋರ್ಡ್ ಸಿಇಒ ಸಾವಿನ ಹಿಂದೆ ಅನುಮಾನ!
ಬೆಳಗಾವಿ; ನೇಮಕಾತಿ ಪರೀಕ್ಷೆಯಲ್ಲಿ ಅಕ್ರಮ ನಡೆದಿದೆ ಎಂಬ ಆರೋಪವಿತ್ತು. ಈ ಹಿನ್ನೆಲೆಯಲ್ಲಿ ಕೆಲ ದಿನಗಳ ಹಿಂದಷ್ಟೇ ಸಿಬಿಐ ಅಧಿಕಾರಿಗಳು ದಾಳಿ ನಡೆಸಿದ್ದರು. ಹೀಗಿರುವಾಗಲೇ ಆ ಅಧಿಕಾರಿ ಅನುಮಾನಾಸ್ಪದ ರೀತಿಯಲ್ಲಿ ಸಾವನ್ನಪ್ಪಿದ್ದಾರೆ. ಈ ಬಗ್ಗೆ ಹಲವು ಅನುಮಾನಗಳು ಹುಟ್ಟು ಹಾಕಿವೆ.
ಬೆಳಗಾವಿ ದಂಡು ಮಂಡಳಿಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕೆ.ಆನಂದ್ ಅನುಮಾನಾಸ್ಪದವಾಗಿ ಸಾವನ್ನಪ್ಪಿದವರು. ದಂಡು ಮಂಡಳಿಯ ಕ್ಯಾಂಪಸ್ನಲ್ಲಿರುವ ಅಧಿಕೃತ ಕ್ವಾರ್ಟರ್ಸ್ನಲ್ಲಿ ಆನಂದ್ ಅವರ ಮೃತದೇಹ ಪತ್ತೆಯಾಗಿದೆ. ಒಂಟಿಯಾಗಿ ವಾಸವಿದ್ದ ಚೆನ್ನೈ ಮೂಲದ ಐಡಿಇಎಸ್ ಶ್ರೇಣಿಯ ಅಧಿಕಾರಿ ಆನಂದ್ (40) ಆತ್ಮಹತ್ಯೆ ಮಾಡಿಕೊಂಡರೇ ಅಥವಾ ಯಾರಾದರೂ ಕೊಲೆಗೈದರೇ ಎಂಬ ಬಗ್ಗೆ ಅನುಮಾನಗಳೆದ್ದಿವೆ.
ಒಂದೂವರೆ ವರ್ಷದ ಹಿಂದೆ ಆನಂದ್ ಅವರು ಇಲ್ಲಿಗೆ ನೇಮಕವಾಗಿದ್ದರು. ದಂಡು ಮಂಡಳಿಯ ವಿರುದ್ಧ, ಕ್ಲರ್ಕ್ ಹಾಗೂ ಸ್ಟೇನೋಗ್ರಾಫರ್ ಪರೀಕ್ಷೆಯಲ್ಲಿ ಅಕ್ರಮ ನಡೆದಿರುವ ಬಗ್ಗೆ ಆರೋಪ ಕೇಳಿಬಂದಿತ್ತು. ಈ ಪ್ರಕರಣ ಗಂಭೀರ ಸ್ವರೂಪ ಪಡೆದುಕೊಂಡು, ಪ್ರಕರಣದ ವಿಚಾರಣೆ ಸಿಬಿಐಗೆ ವಹಿಸಲಾಗಿತ್ತು. ಇತ್ತೀಚೆಗೆ ಸ್ಥಳೀಯ ಮಟ್ಟದ ಅಧಿಕಾರಿಗಳನ್ನೂ ವಿಚಾರಣೆಗೊಳಪಡಿಸಿದ್ದರು. ಈ ಬೆನ್ನಲ್ಲೇ ಆನಂದ್ ಅನುಮಾನಾಸ್ಪದವಾಗಿ ಸಾವನ್ನಪ್ಪಿದ್ದಾರೆ.