ಪ್ರಜ್ಞೆ ತಪ್ಪಿದ್ದ ಪತ್ನಿಗೆ ನೇಣು ಬಿಗಿದ ಪತಿ; ಸಿಂಧನೂರಿನಲ್ಲಿ ದಾರುಣ
ರಾಯಚೂರು; ಕೌಟುಂಬಿಕ ಜಗಳದ ವೇಳೆ ಪ್ರಜ್ಞೆ ತಪ್ಪಿಬಿದ್ದ ಪತ್ನಿಗೆ ನೇಣು ಬಿಗಿದು ಸಾಯಿಸಿರುವ ದಾರುಣ ಘಟನೆ ರಾಯಚೂರು ಜಿಲ್ಲೆಯಲ್ಲಿ ನಡೆದಿದೆ. ಸಿಂಧನೂರು ನಗರದ ಪಟೇಲವಾಡಿ ಎಂಬಲ್ಲಿ ಈ ಕೃತ್ಯ ಎಸಗಲಾಗಿದ್ದು, ಮೂವತ್ತೊಂದು ವರ್ಷದ ಭುವನೇಶ್ವರಿ ಸಾವನ್ನಪ್ಪಿರುವ ದುರ್ದೈವಿ. ಆರೋಪಿ ಪತಿ ನಾಗರಾಜನನ್ನು ಪೊಲೀಸರು ವಶಕ್ಕೆ ತೆಗೆದುಕೊಂಡು ವಿಚಾರಣೆ ನಡೆಸುತ್ತಿದ್ದಾರೆ.
ಆರೋಪಿ ನಾಗರಾಜ್ 14 ವರ್ಷಗಳ ಹಿಂದೆ ಭುವನೇಶ್ವರಿಯನ್ನು ಪ್ರೀತಿಸಿ ಮದುವೆಯಾಗಿದ್ದ. ದಂಪತಿ ಆರಂಭದಲ್ಲಿ ಅನ್ಯೋನ್ಯವಾಗಿಯೇ ಇದ್ದರು. ಆದ್ರೆ ನಾಗರಾಜ್ ಮದ್ಯ ಸೇವನೆ ಕಲಿತಿದ್ದು, ಪ್ರತಿದಿನ ಕುಡಿದು ಬಂದು ಜಗಳ ಮಾಡುತ್ತಿದ್ದ ಎನ್ನಲಾಗಿದೆ. ನಿನ್ನೆ ಕೂಡಾ ಗಲಾಟೆ ನಡೆದಿದ್ದು, ಈ ವೇಳೆ ಪತ್ನಿ ಪ್ರಜ್ಞೆ ತಪ್ಪಿ ಬಿದ್ದಿದ್ದಾಳೆ. ಈ ವೇಳೆ ಆರೋಪಿ ಪತಿ, ಭುವನೇಶ್ವರಿ ಕೊರಳಿಗೆ ನೇಣು ಬಿಗಿದು ಕೊಲೆ ಮಾಡಿದ್ಧಾನೆ.