ಎಲ್ಲಾ 28 ಲೋಕಸಭಾ ಕ್ಷೇತ್ರ ಗೆಲ್ಲೋದು ನಮ್ಮ ಗುರಿ; ಬಿ.ವೈ.ವಿಜಯೇಂದ್ರ
ಬೆಂಗಳೂರು; ಯಡಿಯೂರಪ್ಪ ಪುತ್ರ ಬಿ.ವೈ.ವಿಜಯೇಂದ್ರ ಅವರು ಬಿಜೆಪಿ ರಾಜ್ಯಾಧ್ಯಕ್ಷರಾಗಿ ಇಂದು ಅಧಿಕೃತವಾಗಿ ಪದಗ್ರಹಣ ಮಾಡಿದ್ದಾರೆ. ಅಧಿಕಾರ ಸ್ವೀಕರಿಸಿ ಮಾತನಾಡಿದ ಅವರು, ರಾಜ್ಯದಲ್ಲಿ ಎಲ್ಲಾ 28 ಲೋಕಸಭಾ ಕ್ಷೇತ್ರಗಳನ್ನೂ ಗೆಲ್ಲೋದು ನಮ್ಮ ಗುರಿ ಎಂದು ಹೇಳಿದರು.
ಎಲ್ಲಾ ಹಿರಿಯರು ಒಟ್ಟಾಗಬೇಕು. ನಾನು ಎಲ್ಲಾ ಹಿರಿಯರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಮುನ್ನಡೆಯುತ್ತೇನೆ. ಲೋಕಸಭಾ ಚುನಾವಣೆಯಲ್ಲಿ ರಾಜ್ಯದಲ್ಲಿ 28 ಕ್ಷೇತ್ರಗಳನ್ನೂ ಬಿಜೆಪಿ ಗೆಲ್ಲಬೇಕು. ಇದು ನಮ್ಮ ಸ್ವಾರ್ಥ ಅಲ್ಲ, ದೇಶದ ಭವಿಷ್ಯ ರೂಪಿಸುವ ನಿಟ್ಟಿನಲ್ಲಿ ಕೆಲಸ ಮಾಡುತ್ತಿರುವ ಮೋದಿಯ ಕೈಬಲಪಡಿಸಬೇಕು ಎಂದು ವಿಜಯೇಂದ್ರ ಹೇಳಿದರು.
ಎಲ್ಲಾ ಕ್ಷೇತ್ರ ಗೆಲ್ಲೋದು ನಮ್ಮ ಗುರಿ. ಈ ಹಿಂದೆ ಯಡಿಯೂರಪ್ಪ ೨೦ಕ್ಕೂ ಹೆಚ್ಚು ಗೆಲ್ತೀವಿ ಎಂದು ಹೇಳಿದಾಗ ಹಾಸ್ಯ ಮಾಡುತ್ತಿದ್ದರು. ಆದ್ರೆ, ಹಿಂದಿನ ಚುನಾವಣೆಯಲ್ಲಿ ೨೫ ಸಂಸದರನ್ನು ಗೆಲ್ಲಿಸಿ ಕಳುಹಿಸಿರುವುದನ್ನು ಯಾರೂ ಮರೆಯಬಾರದು. ವಿಧಾನಸಭೆಯಲ್ಲಿ ಹಿನ್ನಡೆಯಾಗಿರುವುದು ನಿಜ. ಆದ್ರೆ ಈ ದೇಶದ ಭವಿಷ್ಯ ರೂಪಿಸುವ ಲೋಕಸಭಾ ಚುನಾವಣೆಯಲ್ಲಿ ನಾವು ಗೆಲ್ಲಲೇಬೇಕು. ಕೇಂದ್ರದ ವರಿಷ್ಠರು ವಿಶ್ವಾಸ ಇಟ್ಟು ಅವಕಾಶ ಕೊಟ್ಟಿದ್ದಾರೆ. ಸ್ಥಾನದ ಮಹತ್ವ ಹಾಗೂ ಗೌರವ ನನಗೆ ಗೊತ್ತಿದೆ ಎಂದೂ ವಿಜಯೇಂದ್ರ ಹೇಳಿದರು.
ಯಡಿಯೂರಪ್ಪ ರೈತರ, ಬಡವರ ಹಾಗೂ ದೀನ ದಲಿತರ ಪರವಾಗಿ ಹೋರಾಟ ಮಾಡಿದ್ದಾರೆ. ಸಣ್ಣ ಕಾರ್ಯಕರ್ತನಿಗೂ ಅವರು ಗೌರವ ಕೊಟ್ಟಿದ್ದಾರೆ. ಅದನ್ನು ನಾನು ನೋಡುತ್ತಾ ಬೆಳೆದಿದ್ದೇವೆ. ನಾನೂ ಅದೇ ಹಾದಿಯಲ್ಲಿ ನಡೆಯುತ್ತೇನೆ. ಯಾವುದೇ ಗೊಂದಲಕ್ಕೆ ಅವಕಾಶ ನಾನು ಕೊಡುವುದಿಲ್ಲ. ಯಾರ ಗೌರವಕ್ಕೂ ಚ್ಯುತಿ ತರುವುದಿಲ್ಲ ಎಂದು ಭರವಸೆ ನೀಡಿದರು.