ಕಾರು ಆಕ್ಸಿಡೆಂಟ್ ಮಾಡಿದ್ದ ಆರೋಪಿ ಡ್ರೈವರ್ ಕಿರಣ್; ಇದೇ ಕೊಲೆಗೆ ಕಾರಣವಾಯ್ತು!
ಬೆಂಗಳೂರು; ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿ ಪ್ರತಿಮಾ ಕೊಲೆ ಪ್ರಕರಣದಲ್ಲಿ ಅವರ ಮಾಜಿ ಕಾರು ಡ್ರೈವರ್ ಕಿರಣ್ ನನ್ನು ಅರೆಸ್ಟ್ ಮಾಡಲಾಗಿದೆ. ಕಿರಣ್ ನನ್ನು ಹತ್ತು ದಿನಗಳ ಹಿಂದೆ ಪ್ರತಿಮಾ ಅವರು ಕೆಲಸದಿಂದ ತೆಗೆದಿದ್ದರು. ಇದರಿಂದಾಗಿ ಮತ್ತೆ ಕೆಲಸಕ್ಕೆ ಸೇರಿಸಿಕೊಳ್ಳುವಂತೆ ಆತ ದುಂಬಾಲು ಬಿದ್ದಿದ್ದ. ಮೊನ್ನೆ ಸಂಜೆಯೂ ಕೂಡಾ ಪ್ರತಿಮಾ ಮನೆಗೆ ಬಂದು, ಇನ್ನೊಮ್ಮೆ ತಪ್ಪು ಮಾಡೋದಿಲ್ಲ ಎಂದು ಕಾಲಿಗೆ ಕೂಡಾ ಬಿದ್ದಿದ್ದನಂತೆ. ಆದ್ರೆ ಪ್ರತಿಮಾ ಆತನನ್ನು ಕೆಲಸಕ್ಕೆ ವಾಪಸ್ ತೆಗೆದುಕೊಳ್ಳಲು ನಿರಾಕರಿಸಿದ್ದಾರೆ. ಇದರಿಂದ ಆಕ್ರೋಶಗೊಂಡ ಕಿರಣ್, ಅಲ್ಲೇ ಇದ್ದ ಚಾಕುವನ್ನು ತೆಗೆದುಕೊಂಡು ಇರಿದು ಕೊಲೆ ಮಾಡಿದ್ದ ಅನ್ನೋದು ಗೊತ್ತಾಗಿದೆ.
ಕೊಲೆ ಮಾಡಿದ ನಂತರ ಕಿರಣ್, ಪ್ರತಿಮಾ ಪರ್ಸ್‌ನಲ್ಲಿದ್ದ ಹಣವನ್ನು ತೆಗೆದುಕೊಂಡು ಮಲೈ ಮಹದೇಶ್ವರ ಬೆಟ್ಟಕ್ಕೆ ಹೋಗಿದ್ದ. ಪೊಲೀಸರು ಅಲ್ಲಿಂದ ಆತನನ್ನು ಅರೆಸ್ಟ್ ಮಾಡಿಕೊಂಡು ಬಂದಿದ್ದಾರೆ. ಅಂದಹಾಗೆ ಪ್ರತಿಮಾ ಅವರಿಗೆ ಇಲಾಖೆಯಿಂದ ಎರಡು ತಿಂಗಳ ಹಿಂದಷ್ಟೇ ಕೊಸ ಕಾರು ಕೊಟ್ಟಿದ್ದರು. ಆ ಕಾರನ್ನು ಕಿರಣ್ ಆಕ್ಸಿಡೆಂಟ್ ಮಾಡಿಕೊಂಡು ಬಂದಿದ್ದನಂತೆ. ಇದರಿಂದ ಭಯಬಿದ್ದು ಆತ ಕಾರಿನ ಕೀಯನ್ನು ಕಚೇರಿಯ ವಾಚ್‌ಮನ್ ಕೈಗೆ ಕೊಟ್ಟು ಅಲ್ಲಿಂದ ಪರಾರಿಯಾಗಿದ್ದನಂತೆ. ಈ ಕಾರಣಕ್ಕಾಗಿ ಕೂಡಾ ಕಿರಣ್ ಹಾಗೂ ಪ್ರತಿಮಾ ನಡುವೆ ಜಗಳ ನಡೆದಿತ್ತು ಎನ್ನಲಾಗಿದೆ.