ಹುಲಿ ಉಗುರಿನ ಲಾಕೆಟ್; ಧನಂಜಯ್ ಗುರೂಜಿಗೂ ಸಂಕಷ್ಟ!
ತುಮಕೂರು; ಹುಲಿ ಉಗುರಿನ ಲಾಕೆಟ್ ಧರಿಸಿದ್ದಕ್ಕಾಗಿ ಹಲವರಿಗೆ ಸಂಕಷ್ಟ ಎದುರಾಗಿದೆ. ತುಮಕೂರು ಜಿಲ್ಲೆಯ ಕುಣಿಗಲ್ ತಾಲ್ಲೂಕಿನ ಬಿದನಗೆರೆಯ ಶನಿಮಹಾತ್ಮ ದೇವಾಲಯದ ಅರ್ಚಕ ಧನಂಜಯ ಗುರೂಜಿಗೂ ಕಾನೂನು ಸಂಕಷ್ಟ ಎದುರಾಗಿದೆ. ಧನಂಜಯ ಗುರೂಜಿ ಕೂಡಾ ಹುಲಿ ಉಗುರಿನ ಲಾಕೆಟ್ ಧರಿಸಿರುವ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿವೆ. ಈ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆ ಅಧಿಕಾರಿ, ಬಿದನಗೆರೆ ದೇವಾಲಯಕ್ಕೆ ತರೆಳಿ ಹುಲಿ ಉಗುರಿನ ಬಗ್ಗೆ ತನಿಖೆ ನಡೆಸಿದ್ದಾರೆ. ಕುಣಿಗಲ್ ವಲಯ ಅರಣ್ಯಾಧಿಕಾರಿ ಜಗದೀಶ್ ಅವರು ಧನಂಜಯ ಗುರೂಜಿಯವರ ಬಳಿ ಇದ್ದ ಚಿನ್ನದ ಸರಗಳನ್ನು ಪರಿಶೀಲನೆ ಮಾಡಿದ್ದಾರೆ.
ಈ ವೇಳೆ ಧನಂಜಯ್ ಗುರೂಜಿಯವರು, ನಾನು ಆರ್ಟಿಫಿಶಿಯಲ್ ಹುಲಿ ಉಗುರು ಧರಿಸಿದ್ದೆ. ಅದು ಕಪ್ಪು ಬಣ್ಣಕ್ಕೆ ತಿರುಗಿದ್ದರಿಂದಾಗಿ ಯಾವಾಗಲೋ ನಾನು ಅದನ್ನು ಎಸೆದಿದ್ದೇನೆ ಎಂದು ಹೇಳಿಕೆ ಕೊಟ್ಟಿದ್ದಾರೆ. ಆದ್ರೆ ಈ ಬಗ್ಗೆ ಅಧಿಕಾರಿಗಳು ಅನುಮಾನ ವ್ಯಕ್ತಪಡಿಸಿದ್ದಾರೆ.
ಎಸೆದಿರುವ ಆರ್ಟಿಫಿಶಿಯಲ್ ಉಗುರು ಒದಗಿಸುವಂತೆ ಸೂಚನೆ ಕೊಟ್ಟಿದ್ದಾರೆ. ಅರ್ಟಿಫಿಶಿಯಲ್ ಉಗುರನ್ನ ಅವರಿಂದ ಪಡೆದು ಎಫ್ಎಸ್ಎಲ್ ಪರೀಕ್ಷೆಗೆ ಕಳಿಸಲಾಗುವುದು. ಒಂದು ವೇಳೆ ಇಂದು ಉಗುರು ಸಿಗದಿದ್ದರೆ, ಸರ್ಚ್ ವಾರಂಟ್ ಪಡೆದು ಹುಡುಕಬೇಕಾಗುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.