ಹುಲಿ ಉಗುರಿನ ಪೆಂಡೆಂಟ್; ವರ್ತೂರ್ ಸಂತೋಷ್‌ಗೆ 7 ವರ್ಷ ಶಿಕ್ಷೆಯಾಗುತ್ತಾ..?
ಬೆಂಗಳೂರು; ಬಿಗ್ ಬಾಸ್ ಮನೆಯಲ್ಲಿದ್ದ ಹಳ್ಳಿಕಾರ್ ಒಡೆಯ ವರ್ತೂರ್ ಸಂತೋಷ್ ಅವರನ್ನು ಅರಣ್ಯಾಧಿಕಾರಿಗಳು ಬಂಧಿಸಿದ್ದಾರೆ. ಹುಲಿ ಉಗುರಿನ ಪೆಂಡೆಂಟ್ ಧರಿಸಿದ್ದಕ್ಕಾಗಿ ಅವರನ್ನು ಬಂಧಿಸಲಾಗಿದೆ. ಇದು ನಾನ್ ಬೇಲಬಲ್ ಕೇಸ್ ಆಗಿದ್ದು, ಆರೋಪ ಸಾಬೀತಾದರೆ, ವರ್ತೂರ್ ಸಂತೋಷ್‌ಗೆ ಏಳು ವರ್ಷ ಶಿಕ್ಷೆಯಾಗುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.
ದೂರುದಾರ ಶರತ್ ಈ ಬಗ್ಗೆ ಮಾಹಿತಿ ನೀಡಿದ್ದಾರೆ. ಹುಲಿ ರಾಷ್ಟ್ರಪ್ರಾಣಿಯಾಗಿದೆ. ಅದನ್ನು ಸಾಯಿಸೋದು ಅಪರಾಧ. ಹೀಗಾಗಿ ಹುಲಿ ಉಗುರನ್ನು ವರ್ತೂರ್ ಸಂತೋಷ್‌ಗೆ ಯಾರು ಕೊಟ್ಟರು, ಹುಲಿಯ ಮೂಳೆ ಅವರು ಧರಿಸಿದ ಉಗುರಿಗೆ ಮ್ಯಾಚ್ ಆಗುತ್ತದಾ, ಅದು ನಿಜವಾದ ಹುಲಿ ಉಗುರಾ ಎಂಬುದರ ಬಗ್ಗೆ ತನಿಖೆ ನಡೆಯುತ್ತದೆ.
ಹುಲಿ ಬೇಟೆಯಾಡಿ ಅದರ ಉಗುರು ಸಂಗ್ರಹ ಮಾಡಲಾಗಿದೆಯೇ, ಅಥವಾ ಸತ್ತ ಹುಲಿಯ ಉಗುರು ಸಂಗ್ರಹ ಮಾಡಲಾಗಿದೆಯೇ, ಬೇರೆ ಯಾರಾದರೂ ಇದನ್ನು ಸಂತೋಷ್‌ಗೆ ಮಾರಿದ್ದಾರೆಯೇ ಎಂಬುದರ ಬಗ್ಗೆ ತನಿಖೆ ನಡೆಯುತ್ತದೆ. ಅನಂತರ ಶಿಕ್ಷೆ ನಿರ್ಧಾರವಾಗುತ್ತದೆ ಎಂದು ತಿಳಿದುಬಂದಿದೆ. ಹುಲಿ ಇರುವ ಪ್ರದೇಶಗಳಲ್ಲಿ ಮಾರಕಾಸ್ತ್ರ ಹಿಡಿದುಕೊಂಡು ಓಡಾಡಿದರೆ ಅಥವಾ ಆ ಪ್ರದೇಶಕ್ಕೆ ಕಾಲಿಟ್ಟರೆ 7 ವರ್ಷ ಜೈಲು ಶಿಕ್ಷೆ ಆಗುತ್ತದೆ. 5 ಲಕ್ಷದಿಂದ 50 ಲಕ್ಷ ರೂಪಾಯಿವರೆಗೆ ದಂಡ ವಿಧಿಸಲಾಗುತ್ತದೆ. ಹೀಗಾಗಿ ಇದು ಗಂಭೀರ ಪ್ರಕರಣ ಎಂದು ತಿಳಿದುಬಂದಿದೆ.