BengaluruPolitics

ಎರಡೂವರೆ ವರ್ಷದ ನಂತರ ಸಂಪುಟದಲ್ಲಿ ಬದಲಾವಣೆ; ಅಶೋಕ್‌ ಪಟ್ಟಣ್‌

ಬೆಂಗಳೂರು; ಕಾಂಗ್ರೆಸ್‌ ಸರ್ಕಾರದಲ್ಲಿ ಅಪಸ್ವರಗಳು ಕೇಳಿಬರುತ್ತಲೇ ಇವೆ. ಮೊನ್ನೆಯಷ್ಟೇ ಸತೀಶ್‌ ಜಾರಕಿಹೊಳಿ 20 ಶಾಸಕರನ್ನು ಕರೆದುಕೊಂಡು ಮೈಸೂರಿಗೆ ಹೋಗಲು ಮುಂದಾಗಿದ್ದರು. ಹೀಗಿರುವಾಗಲೇ ಮತ್ತೊಬ್ಬ ಶಾಸಕರು, ರಾಜ್ಯ ಸಂಪುಟ ಎರಡೂವರ್ಷದಲ್ಲಿ ಬದಲಾವಣೆಯಾಗಲಿದೆ ಎಂದು ಹೇಳಿದ್ದಾರೆ. ಹೀಗಾಗಿ ರಾಜ್ಯ ರಾಜಕೀಯದಲ್ಲಿ ಕುತೂಹಲ ಶುರುವಾಗಿದೆ.

ಸರ್ಕಾರದ ಮುಖ್ಯ ಸಚೇತಕರಾಗಿರುವ ಅಶೋಕ್‌ ಪಟ್ಟಣ್‌ ಅವರು ವಿಧಾನಸೌಧದಲ್ಲಿ ಈ ಬಗ್ಗೆ ಮಾತನಾಡಿದ್ದಾರೆ. ಎಲ್ಲರಿಗೂ ಮೊದಲ ಹಂತದಲ್ಲೇ ಸಚಿವ ಸ್ಥಾನ ಕೊಡೋದಕ್ಕೆ ಆಗೋದಿಲ್ಲ. ಎರಡೂವರೆ ವರ್ಷದ ಬಳಿಕ ಕೊಡೋದಾಗಿ ಸುರ್ಜೇವಾಲಾ ಅವರು ಹೇಳಿದ್ದಾರೆ. ಹೀಗಾಗಿ ಎರಡೂವರೆ ವರ್ಷದ ನಂತರ ಸಂಪುಟ ಬದಲಾವಣೆಯಾಗುವ ಸಾಧ್ಯತೆ ಇದೆ ಎಂದು ಹೇಳಿದ್ದಾರೆ. ಈ ಮಾತು ಚರ್ಚೆಗೆ ಎಡೆ ಮಾಡಿಕೊಟ್ಟಿದೆ.

ನಾನು ಸೀನಿಯರ್‌ ಆಗಿದ್ದರಿಂದ ನನಗೂ ಕೂಡಾ ಮಂತ್ರಿ ಸ್ಥಾನ ಸಿಗಬೇಕಿತ್ತು. ಆದರೆ ಜಾತಿ ನೋಡಿ ಆಯ್ಕೆ ಮಾಡಿದ್ದರ ಕಾರಣ ನನಗೆ ಮೊದಲ ಬಾರಿ ಮಂತ್ರಿ ಸ್ಥಾನ ಸಿಕ್ಕಿಲ್ಲ. ಜಾತಿ ನೋಡಿ ಸ್ಥಾನ ಕೊಡಬೇಡಿ, ಅನುಭವ ನೋಡಿ ಕೊಡಿ ಎಂದು ನಮ್ಮ ನಾಯಕರಿಗೆ ಮನವಿ ಮಾಡಿದ್ದೇನೆ ಎಂದು ಅಶೋಕ್‌ ಪಟ್ಟಣ್‌ ಹೇಳಿದ್ದಾರೆ.

ಎರಡೂವರೆ ವರ್ಷವಾದ ಮೇಲೆ ನನಗೆ ಸಚಿವ ಸ್ಥಾನ ಕೊಡುತ್ತಾರೆಂಬ ನಂಬಿಕೆ ಇದೆ.  ಸಿದ್ದರಾಮಯ್ಯ, ಡಿಕೆ ಶಿವಕುಮಾರ್, ಸುರ್ಜೇವಾಲ, ವೇಣುಗೋಪಾಲ್ ಸೇರಿ ಎಲ್ಲಾ ನಾಯಕರಿಗೂ ನಮ್ಮ ಭಾವನೆ ಹೇಳಿದ್ದೇವೆ ಎಂದರು. ಸಂಪೂರ್ಣ ಸಂಪುಟ ಪುನರ್ ರಚನೆ ಮಾಡುತ್ತಾರೋ 4-5 ಸ್ಥಾನ ಬದಲಾವಣೆ ಮಾಡುತ್ತಾರೋ ಅನ್ನೋದು ನನಗೆ ಗೊತ್ತಿಲ್ಲ ಎಂದೂ ಅಶೋಕ್‌ ಪಟ್ಟಣ್‌ ಹೇಳಿದ್ದಾರೆ.

Share Post