ತೆಲಂಗಾಣ ಪಾಲಿಟಿಕ್ಸ್; ಕೆಸಿಆರ್ ಆಡಳಿತ ನಿಜಕ್ಕೂ ಜನವಿರೋಧಿಯಾ..?
ಹೈದರಾಬಾದ್; ನಾಯಕ ಹುಟ್ಟುತ್ತಾನೆ, ಸಾಯುತ್ತಾನೆ. ಇದರ ಮಧ್ಯೆ ಒಂದು ಇತಿಹಾಸ ಸೃಷ್ಟಿಸಿ ಹೋಗುತ್ತಾನೆ. ಇದು ರಾಜಕೀಯದ ಒಂದು ಸಿದ್ಧಾಂತ. ಎಷ್ಟೋ ಮಹಾನ್ ನಾಯಕರು ತಾವು ಹಾಕಿದ ತಪ್ಪು ಹೆಜ್ಜೆಗಳಿಂದ ಮಣ್ಣುಮುಕ್ಕಿದ ಉದಾಹರಣೆಗಳು ನಮ್ಮ ಮುಂದೆ ಸಾಕಷ್ಟಿವೆ. ಮಾಡಿದ ತಪ್ಪಿನ ಕಾರಣದಿಂದಾಗಿ, ಇಟ್ಟ ತಪ್ಪು ಹೆಜ್ಜೆಯ ಕಾರಣದಿಂದಾಗಿ ಎಷ್ಟೋ ನಾಯಕರು ಇತಿಹಾಸ ಪುಟ ಸೇರಿಬಿಟ್ಟಿದ್ದಾರೆ. ನಮ್ಮ ದೇಶದಲ್ಲಿ ಕೆಲ ಅಪರೂಪದ ನಾಯಕರು ಕೂಡಾ ಕೆಲವು ವ್ಯಾಮೋಹಗಳಿಂದಾಗಿ ಜನರಿಂದ ದೂರವಾಗಿಬಿಟ್ಟಿದ್ದಾರೆ. ಹೀಗಾಗಿಯೇ ರಾಜರು ಕೂಡಾ ತಮ್ಮ ಆಡಳಿತ ವ್ಯವಸ್ಥೆ ಪ್ರಜೆಗಳ ಪರವಾಗಿ ಇರುವಂತೆ ನೋಡಿಕೊಳ್ಳುತ್ತಿದ್ದರು. ಈ ಕಾರಣದಿಂದಾಗಿ ನಮ್ಮ ಆಡಳಿತ ಬಗ್ಗೆ ಪ್ರಜೆಗಳಿರುವ ಅಭಿಪ್ರಾಯವನ್ನು ತಿಳಿದುಕೊಳ್ಳಲು ಕೆಲ ರಾಜರು ಮಾರುವೇಷದಲ್ಲಿ ಜನರ ಬಳಿ ಹೋಗುತ್ತಿದ್ದರು. ಹೀಗಾಗಿಯೇ ಜನ ಕೂಡಾ ರಾಜರನ್ನು ಪೂಜಿಸುತ್ತಿದ್ದರು. ಅದೇ ರೀತಿ ಅಖಂಡ ಆಂಧ್ರಪ್ರದೇಶದ ಮುಖ್ಯಮಂತ್ರಿಯಾಗಿದ್ದ ವೈ.ಎಸ್.ರಾಜಶೇಖರರೆಡ್ಡಿಯನ್ನು ಫ್ಯಾಕ್ಷನಿಸ್ಟ್ ಎಂದೂ, ಕಡು ಭ್ರಷ್ಟ ಎಂದೂ ಕರೆಯುತ್ತಿದ್ದರೂ ಕೂಡಾ, ಅವರು ಜನಪರವಾಗಿದ್ದರು. ಬೆಳಗ್ಗೆ ನಾಲ್ಕು ಗಂಟೆಯೇ ಅವರ ಮನೆಯ ಮುಂದೆ ಜನರು ಕ್ಯೂ ನಿಲ್ಲುತ್ತಿದ್ದರು. ವೈ.ಎಸ್.ರಾಜಶೇಖರರೆಡ್ಡಿ ಅವರೆಲ್ಲರನ್ನೂ ಪ್ರೀತಿಯಿಂದ ಮಾತನಾಡಿಸಿ, ಅವರ ಸಮಸ್ಯೆಗಳನ್ನು ಆಲಿಸುತ್ತಿದ್ದರು. ಹೀಗಾಗಿ ರಾಜಶೇಖರರೆಡ್ಡಿ ವಿರುದ್ಧ ಎಷ್ಟು ಆರೋಪಗಳಿದ್ದರೂ, ಅವರ ಆಡಳಿತದ ಬಗ್ಗೆ ಎಷ್ಟೇ ಅನುಮಾನಗಳಿದ್ದರೂ ಜನರು ರಾಜಶೇಖರರೆಡ್ಡಿಯವರನ್ನು ತಮ್ಮ ಮನೆ ಮಗನಂತೆ ನೋಡುತ್ತಿದ್ದರು. ಅವರನ್ನು ಪ್ರೀತಿಸುತ್ತಿದ್ದರು.
ಆದ್ರೆ ಪ್ರತ್ಯೇಕ ತೆಲಂಗಾಣಕ್ಕಾಗಿ ದೊಡ್ಡ ಹೋರಾಟ ನಡೆಸಿದವರು ಕೆ.ಚಂದ್ರಶೇಖರರಾವ್… ವೈ.ಎಸ್.ರಾಜಶೇಖರರೆಡ್ಡಿಗೆ ಹೋಲಿಸಿಕೊಂಡರೆ ಇವರ ಹೋರಾಟ ತುಂಬಾ ದೊಡ್ಡದು… ಕೆ.ಚಂದ್ರಶೇಖರರಾವ್ ಹೋರಾಟದಿಂದಾಗಿಯೇ ಪ್ರತ್ಯೇಕ ತೆಲಂಗಾಣ ರಾಜ್ಯವಾಗಲು ಕಾರಣವಾಯಿತು. ತೆಲಂಗಾಣ ರಾಷ್ಟ್ರ ಸಮಿತಿ ಪಾರ್ಟಿ ಕಟ್ಟಿ ಅದರ ಮೂಲಕ ಕೆ.ಚಂದ್ರಶೇಖರ ರಾವ್ ದಶಕಗಳ ಕಾಲ ಹೋರಾಟ ನಡೆಸಿದ್ದರು. ಅದರ ಪ್ರತಿಫಲವಾಗಿ ತೆಲಂಗಾಣ ರಾಜ್ಯವಾದ ಮೇಲೆ ಅಲ್ಲಿನ ಜನ ಕೆ.ಚಂದ್ರಶೇಖರರಾವ್‌ರನ್ನು ಎರಡು ಬಾರಿ ಮುಖ್ಯಮಂತ್ರಿ ಮಾಡಿದರು. ತೆಲಂಗಾಣ ಮುಖ್ಯಮಂತ್ರಿ ಕೆ.ಚಂದ್ರಶೇಖರರಾವ್ ತೆಲಂಗಾಣಕ್ಕಾಗಿ ಇಷ್ಟೆಲ್ಲಾ ಹೋರಾಟ ಮಾಡಿದ್ದರೂ ಕೂಡಾ, ತೆಲಂಗಾಣ ಜನರ ಮನೆ ಮಗನಾಗೋದಕ್ಕೆ ಆಗಲಿಲ್ಲ. ಯಾಕಂದ್ರೆ ಅಂದಿನ ಮಹಾರಾಜರಲ್ಲಿದ್ದ ಮಾನವೀಯತೆ ಕೆಸಿಆರ್‌ರಲ್ಲಿ ಇಲ್ಲ ಅನ್ನೋದು. ಅಂದಿನ ವೈಎಸ್‌ಆರ್‌ರಲ್ಲಿ ಕಾಣಿಸಿದ ಜನರೊಂದಿಗೆ ಕನೆಕ್ಟಿವಿಟಿ ಈಗ ಕೆಸಿಆರ್‌ರಲ್ಲಿ ಕಾಣಸದೇ ಇರೋದು..
ತಮ್ಮ ನಾಯಕ ತಮಗೆ ಏನು ಕೊಟ್ಟರೂ, ಕೊಡದಿದ್ದರೂ ನಮ್ಮ ಮನಸ್ಸಿಗೆ ಹತ್ತಿರದಲ್ಲಿರಬೇಕೆಂದು ಜನ ಬಯಸುತ್ತಾರೆ. ಆದ್ರೆ ಕೆಸಿಆರ್ ಎಂದಿಗೂ ಜನರಿಗೆ ಹತ್ತಿರವಾಗೋದಕ್ಕೆ ಬಯಸಿಲ್ಲ. ಎರಡು ಅವಧಿಯ ಆಡಳಿತದಲ್ಲೂ ಅವರು ಜನರಿಂದ ದೂರವೇ ಉಳಿದರು. ಕೆಸಿಆರ್ ತಮ್ಮ ಆಡಳಿತದ ಅವಧಿಯಲ್ಲಿ ಒಂದಷ್ಟು ಒಳ್ಳೆಯ ಕೆಲಸಗಳನ್ನು ಮಾಡಿದ್ದಾರಾದರೂ, ಜನರನ್ನು ಹತ್ತಿರಕ್ಕೆ ಸೇರಿಸಿಕೊಳ್ಳಲಿಲ್ಲ. ಆಡಳಿತದಲ್ಲಿ ಕುಟುಂಬದ ಹಸ್ತಕ್ಷೇಪ ಹೆಚ್ಚಾಯಿತು. ಕೆಸಿಆರ್ ಅವರ ಪುತ್ರ ಕೆಟಿಆರ್ ಇಡೀ ಸರ್ಕಾರವನ್ನು ನಡೆಸುತ್ತಾರೆ ಎಂಬ ಆರೋಪವಿದೆ. ಕೆಸಿಆರ್ ಪುತ್ರ ಕವಿತಾ ಕೂಡಾ ಸರ್ಕಾರದಲ್ಲಿ ಹಸ್ತಕ್ಷೇಪ ಮಾಡುತ್ತಾರೆ. ಈ ಕಾರಣಕ್ಕಾಗಿ ಕೆಸಿಆರ್ ಈ ಬಾರಿಯ ಚುನಾವಣೆಯಲ್ಲಿ ಸೋಲನುಭವಿಸುವ ಎಲ್ಲಾ ಲಕ್ಷಣ ಕಾಣಿಸುತ್ತಿದೆ.
ಕೆಸಿಆರ್ ಅವರು ತೆಲಂಗಾಣ ರಾಷ್ಟ್ರ ಸಮಿತಿಯನ್ನು ಭಾರತ್ ರಾಷ್ಟ್ರ ಸಮಿತಿ ಎಂದು ಬದಲಾಯಿಸಿದ್ದಾರೆ. ಬಿಜೆಪಿ ವಿರುದ್ಧ ಒಂದು ಒಕ್ಕೂಟ ರಚನೆ ಮಾಡಬೇಕು. ಅದಕ್ಕೆ ನಾನೇ ನಾಯಕತ್ವ ವಹಿಸಬೇಕು ಅನ್ನೋ ಕಾರಣಕ್ಕಾಗಿ ಕೆಸಿಎಆರ್ ಅವರು ಟಿಆರ್‌ಎಸ್ ಅನ್ನು ಬಿಆರ್‌ಎಸ್ ಎಂದಾಗಿ ಬದಲಾಯಿಸಿದ್ದರು. ಆದ್ರೆ ಅವರ ಆಸೆಯನ್ನು ಬಿಜೆಪಿ ವಿರೋಧಿ ಪಕ್ಷಗಳು ಈಡೇರಿಸಲಿಲ್ಲ. ಬದಲಾಗಿ ಅವರೆಲ್ಲಾ ಸೇರಿ ಇಂಡಿಯಾ ಎಂಬ ಒಕ್ಕೂಟವನ್ನು ರಚನೆ ಮಾಡಿಕೊಂಡಿದ್ದಾರೆ. ಇತ್ತ ಕೆಸಿಆರ್ ಅವರು, ಬಿಜೆಪಿ ಹಾಗೂ ಮೋದಿಯೊಂದಿಗೆ ಭಾರಿ ಮನಸ್ತಾಪವನ್ನೇ ಮಾಡಿಕೊಂಡಿದ್ದಾರೆ. ಇದರ ನಡುವೆ ಕೆಸಿಆರ್ ಪುತ್ರಿ ಕವಿತಾ ದೆಕಲಿ ಲಿಕ್ಕರ್ ಸ್ಕ್ಯಾಮ್‌ನಲ್ಲಿ ಸಿಕ್ಕಿ ಹಾಕಿಕೊಂಡಿದ್ದಾರೆ. ಇನ್ನೊಂದೆಡೆ ಕೆಸಿಆರ್ ಜನರಿಂದ ದೂರ ಉಳಿಯುವುದಕ್ಕಾಗಿಯೇ ದೂರದಲ್ಲಿ ಪ್ಯಾಲೇಸ್ ರೀತಿಯ ಮನೆಯನ್ನು ಕಟ್ಟಿಕೊಂಡಿದ್ದಾರೆ. ಅಲ್ಲಿಗೆ ಯಾರನ್ನೂ ಬಿಡುವುದಿಲ್ಲ ಅನ್ನೋದು ಆರೋಪಗಳಿವೆ. ಇನ್ನೊಂದೆಡೆ ಕೆಸಿಆರ್ ಮಾಧ್ಯಮಗಳ ಮೇಲೂ ಉರಿದುಬೀಳುವುದರಿಂದ ಮಾಧ್ಯಮಗಳು ಕೂಡಾ ಕೆಸಿಆರ್‌ರಿಂದ ದೂರವೇ ಉಳಿದುಬಿಟ್ಟಿವೆ. ಇವೆಲ್ಲಾ ಕಾರಣಗಳಿಂದ ಕೆಸಿಆರ್‌ಗೆ ಈ ಬಾರಿ ಹಿನ್ನೆಡೆ ಆಗಲಿದೆ ಎಂದು ಹೇಳಲಾಗುತ್ತಿದೆ.
ಅಂದಹಾಗೆ ಕಳೆದ ಎರಡು ಚುನಾವಣೆಗಳಲ್ಲಿ ತೆಲಂಗಾಣದಲ್ಲಿ ಟಿಆರ್‌ಎಸ್ ಬಿಟ್ಟರೆ ಬೇರೆ ಪಕ್ಷಗಳು ಬಲವಾಗಿರಲಿಲ್ಲ. ಕಾಂಗ್ರೆಸ್ ಸಂಪೂರ್ಣ ನೆಲಕಚ್ಚಿತ್ತು. ಅದಕ್ಕೆ ಹೇಳಿಕೊಳ್ಳಲು ಒಬ್ಬ ನಾಯಕನೂ ಇರಲಿಲ್ಲ. ಇತ್ತು ಬಿಜೆಪಿಗೆ ಕೂಡಾ ಬಲ ಇರಲಿಲ್ಲ. ಹೀಗಾಗಿ ಟಿಆರ್‌ಎಸ್ ಆರಾಮಾಗಿ ಗೆಲ್ಲಲು ಕಾರಣವಾಯಿತು. ಆದ್ರೆ ಈ ಬಾರಿ ತೆಲಂಗಾಣದಲ್ಲಿ ಬಿಜೆಪಿ ಸಾಕಷ್ಟು ಬಲಗೊಂಡಿದೆ. ಇನ್ನು ರೇವಂತ್ ರೆಡ್ಡಿ ನೇತೃತ್ವದಲ್ಲಿ ಕಾಂಗ್ರೆಸ್ ಕೂಡಾ ಸಾಕಷ್ಟು ಬಲಗೊಂಡಿದೆ. ಜೊತೆಗೆ ರಾಹುಲ್ ಗಾಂಧಿ ಈಗಾಗಲೇ ಅಲ್ಲಿ ಸಭೆಗಳನ್ನು ನಡೆಸಿ, ಹಲವು ಹಿರಿಯರನ್ನು ಪಕ್ಷಕ್ಕೆ ಸೆಳೆದಿದ್ದಾರೆ. ವೈಎಸ್ ರಾಜಶೇಖರರೆಡ್ಡಿ ಪುತ್ರಿ ಶರ್ಮಿಳಾ ಅವರು ಕೂಡಾ ಕಾಂಗ್ರೆಸ್ ಸೇರೋ ಸಾಧ್ಯತೆ ಇದೆ. ಜೊತೆಗೆ ಕರ್ನಾಟಕದಂತೆ ತೆಲಂಗಾಣದಲ್ಲೂ ಕಾಂಗ್ರೆಸ್ ಆರಕ್ಕೂ ಹೆಚ್ಚು ಉಚಿತ ಯೋಜನೆಗಳನ್ನು ಘೋಷಣೆ ಮಾಡಿದೆ. ಮಹಿಳೆಯರನ್ನೇ ಗುರಿಯಾಗಿಸಿಕೊಂಡು ಅವರಿಗೆ ಹಲವು ಉಚಿತ ಯೋಜನೆಗಳನ್ನು ನೀಡೋದಾಗಿ ಭರವಸೆ ನೀಡಲಾಗಿದೆ. ಹೀಗಾಗಿ, ಈ ಬಾರಿ ಕಾಂಗ್ರೆಸ್‌ಗೆ ತೆಲಂಗಾಣದಲ್ಲಿ ಉತ್ತಮ ವಾತಾವರಣ ಇದೆ. ಈ ನಡುವೆ ಬಿಜೆಪಿ ಕೂಡಾ ಸಾಕಷ್ಟು ಫಯಟ್ ಕೊಡಲು ಮುಂದಾಗಿದೆ. ಕೇಂದ್ರದ ಬಿಜೆಪಿ ನಾಯಕರು ಹೇಗಾದರೂ ಮಾಡಿ ತೆಲಂಗಾಣದಲ್ಲಿ ಗೆಲ್ಲಬೇಕು ಎಂದು ಪಣ ತೊಟ್ಟಿದ್ದಾರೆ. ಹೀಗಾಗಿ ತೆಲಂಗಾಣದಲ್ಲಿ ಈ ಬಾರಿ ಮೂರು ಪಕ್ಷಗಳ ನಡುವೆ ಸ್ಪರ್ಧೆ ಇದೆ. ಇದರ ನಡುವೆ ಕೆಸಿಆರ್ ಅವರ ಬಿಆರ್‌ಎಸ್ ಪಕ್ಷ ಸೋಲುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ. ಸ್ವತಃ ಕೆಸಿಆರ್ ಅವರಿಗೇ ಸೋಲುವ ಭಿತಿ ಇದ್ದು, ಎರಡು ಕ್ಷೇತ್ರಗಳಲ್ಲಿ ಅವರು ಸ್ಪರ್ಧೆ ಮಾಡುತ್ತಾರೆ ಎಂದು ಹೇಳಲಾಗುತ್ತಿದೆ.
ಅಂದಹಾಗೆ ಇನ್ನು ಎರಡು ಮೂರು ತಿಂಗಳಲ್ಲಿ ತೆಲಂಗಾಣ ಚುನಾವಣೆ ನಡೆಯಲಿದೆ. ಪಂಚರಾಜ್ಯಗಳ ಚುನಾವಣೆಯಲ್ಲಿ ತೆಲಂಗಾಣದಲ್ಲೂ ಚುನಾವಣೆ ನಡೆಯಲಿದೆ.