ನಾನು ಕಾಂಗ್ರೆಸ್ ಸದಸ್ಯೆ ಅಲ್ಲ; ಅಚ್ಚರಿ ಹೇಳಿಕೆ ನೀಡಿದ ಪಕ್ಷೇತರ ಶಾಸಕಿ
ದಾವಣಗೆರೆ; ವಿಜಯನಗರ ಜಿಲ್ಲೆ ಹರಪನಹಳ್ಳಿ ವಿಧಾನಸಭಾ ಕ್ಷೇತ್ರದಿಂದ ಪಕ್ಷೇತರ ಅಭ್ಯರ್ಥಿಯಾಗಿ ಚುನಾಯಿತರಾಗಿರುವ ಶಾಸಕಿ ಎಂ.ಪಿ.ಲತಾ ಮಲ್ಲಿಕಾರ್ಜುನ ಅವರು, ಗೆದ್ದ ನಂತರ ಕಾಂಗ್ರೆಸ್ ಜೊತೆ ಕಾಣಿಸಿಕೊಂಡಿದ್ದರು. ಇತ್ತೀಚೆಗೆ ಸಿಎಂ ಸಿದ್ದರಾಮಯ್ಯ ಸಮ್ಮುಖದಲ್ಲಿ ಕಾಂಗ್ರೆಸ್ ಸೇರ್ಪಡೆಯಾಗಿದ್ದರು. ಅಷ್ಟೇ ಏಕೆ, ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆಯಲ್ಲೂ ಪಾಲ್ಗೊಂಡಿದ್ದರು. ಆದ್ರೆ ಇದೀಗ ಅವರು ಉಲ್ಟಾ ಹೊಡೆದಿದ್ದಾರೆ.
ನಾನು ಕಾಂಗ್ರೆಸ್ ಸದಸ್ಯೆ ಅಲ್ಲ ಎಂದು ಶಾಸಕಿ ಎಂ.ಪಿ.ಲತಾ ಸ್ಪಷ್ಟನೆ ಕೊಟ್ಟಿದ್ದಾರೆ. ಹರಪನಹಳ್ಳಿಯಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಶಾಸಕ ಎಂ.ಪಿ.ಲತಾ ನಾನು ಕಾಂಗ್ರೆಸ್ ಸದಸ್ಯೆ ಅಲ್ಲ. ನಾನು ಯಾವುದೇ ಪಕ್ಷಕ್ಕೆ ಸೇರಿಲ್ಲ ಎಂದಿದ್ದಾರೆ. ಅಂದಹಾಗೆ, ಅವರು ಈ ರೀತಿ ಹೇಳಿಕೆ ನೀಡಿದ ಕಾರ್ಯಕ್ರಮದಲ್ಲಿ ಬಿಜೆಪಿ ಸಂಸದ ಜಿ.ಎಂ.ಸಿದ್ದೇಶ್ವರ್ ಕೂಡಾ ಉಪಸ್ಥಿತರಿದ್ದರು. ಹೀಗಾಗಿ ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಎಂ.ಪಿ.ಲತಾ ಅವರು ಬಿಜೆಪಿಗೆ ಸಪೋರ್ಟ್ ಮಾಡಬಹುದು ಎಂಬ ಮಾತುಗಳು ಕೇಳಿಬರುತ್ತಿವೆ.