Karnataka Bandh; ರಾಜ್ಯದ್ಯಂತ ವಿನೂತನ ಪ್ರತಿಭಟನೆ, ಪೊರಕೆ ಚಳವಳಿ, ಕಿವಿಗೆ ಚೆಂಡು ಹೂ..!
ಬೆಂಗಳೂರು; ರಾಜ್ಯಾದ್ಯಂತ ಕರ್ನಾಟಕ ಬಂದ್‌ಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಎಲ್ಲೆಡೆ ಬೆಳಗ್ಗೆಯಿಂದಲೇ ಪ್ರತಿಭಟನೆಗಳು ನಡೆದಿವೆ. ಗದಗ ಜಿಲ್ಲೆಯಲ್ಲೂ ಹೋರಾಟ ಜೋರಾಗಿದೆ. ಇಲ್ಲಿ ಪ್ರತಿಭಟನಾಕಾರರು, ರಾಜ್ಯದ 28 ಸಂಸದರಿಗೆ ಶ್ರದ್ಧಾಂಜಲಿ ಅರ್ಪಿಸಿದ್ದಾರೆ. ಜಯಕರ್ನಾಟಕ ಸಂಘಟನೆ ಕಾರ್ಯಕರ್ತರು ಸಂಸದರಿಗೆ ಶ್ರದ್ಧಾಂಜಲಿ ಸಲ್ಲಿಸಿ ಬಾಯಿ ಬಡಿದುಕೊಂಡು ವಿನೂತನ ಪ್ರತಿಭಟನೆ ನಡೆಸಿದ್ದಾರೆ.
ಇನ್ನು ಬೆಂಗಳೂರಿನ ರಾಜಾಜಿನಗರದ ಲಿಂಕ್ ರೋಡ್ ಸರ್ಕಲ್ನಲ್ಲಿ ಪ್ರತಿಭಟನೆ ಜೋರಾಗಿದೆ. ಹೋರಾಟಗಾರರು ಪೊರಕೆ ಚಳವಳಿ ನಡೆಸಿದ್ದಾರೆ. ತಮಿಳುನಾಡು ಸಿಎಂ ಸ್ಟಾಲಿನ್ ಅವರ ಫೋಟೋಗೆ ಚಪ್ಪಲಿ ಸೇವೆ ಮಾಡಿ ಆಕ್ರೋಶ ಹೊರಹಾಕಿದ್ದಾರೆ. ಇನ್ನೊಂದೆಡೆ ಕೆಆರ್ ಮಾರುಕಟ್ಟೆಯಲ್ಲಿ ಕರುನಾಡ ಕಾರ್ಮಿಕ ಸಂಘಟನೆ ವಿಭಿನ್ನವಾಗಿ ಪ್ರತಿಭಟನೆ ಮಾಡಿದೆ. ಪ್ರತಿಭಟನಾಕಾರರು ಕಿವಿಗೆ ಚೆಂಡು ಇಟ್ಟುಕೊಂಡು, ಕಣ್ಣಿಗೆ ಬಟ್ಟೆ ಕಟ್ಟಿಕೊಂಡು ವಿಭಿನ್ನ ರೀತಿಯಲ್ಲಿ ಪ್ರತಿಭಟಿಸಿದ್ದಾರೆ.
ಇತ್ತ ತುಮಕೂರಿನಲ್ಲೂ ಪ್ರತಿಭಟನೆ ಜೋರಾಗಿದೆ. ಇಲ್ಲಿನ ಟೌನ್ ಹಾಲ್ ಬಳಿ ವಿವಿಧ ಸಂಘಟನೆಗಳು ಪ್ರತಿಭಟನೆ ಮಾಡುತ್ತಿವೆ. ಪ್ರತಿಭಟನಾಕಾರರು ತಮಿಳುನಾಡು ಸಿಎಂ ಸ್ಟಾಲಿನ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದು, ಎಂ.ಕೆ ಸ್ಟಾಲಿನ್ ಭಾವಚಿತ್ರ ತುಳಿದು, ಅದಕ್ಕೆ ಬೆಂಕಿ ಹಚ್ಚಿದ್ದಾರೆ. ಚಿಕ್ಕಮಗಳೂರು ನಗರದಲ್ಲಿ ನಡೆದ ಪ್ರತಿಭಟನೆಯಲ್ಲಿ ತಂದೆಯೊಂದಿಗೆ 9 ವರ್ಷದ ಬಾಲಕ ಚಂದನ್ ಹೋರಾಟಕ್ಕಿಳಿದಿದ್ದಾನೆ. ಬಾಲಕ ಮೂರನೇ ತರಗತಿಯಲ್ಲಿ ಓದುತ್ತಿದ್ದು, ಬೆಳಗ್ಗೆಯಿಂದಲೇ ಹೋರಾಟದಲ್ಲಿ ಭಾಗವಹಿಸಿ ಘೋಷಣೆಗಳನ್ನು ಕೂಗುತ್ತಿದ್ದಾನೆ.
ಇನ್ನು ಮಂಡ್ಯದಲ್ಲಿ ಇವತ್ತೂ ಪ್ರತಿಭಟನೆಗಳು ಮುಂದುವರೆದಿವೆ. ಕಸ್ತೂರಿ ಕರ್ನಾಟಕ ಜನಪರ ವೇದಿಕೆ ಕಾರ್ಯಕರ್ತನೊಬ್ಬ ಕೈ ಕುಯ್ದುಕೊಂಡು ಆಕ್ರೋಶ ಹೊರಹಾಕಿದ್ದಾನೆ. ಸದ್ಯಹೋರಾಟಗಾರನಿಗೆ ಪ್ರಾಥಮಿಕ ಚಿಕಿತ್ಸೆ ನೀಡಿ ಆಸ್ಪತ್ರೆಗೆ ಕರೆದೊಯ್ಯಲಾಯಿತು.