Bengaluru

ಸೆ.29ಕ್ಕೆ ಕರ್ನಾಟಕ ಬಂದ್‌; ಸಂಪೂರ್ಣ ಸ್ತಬ್ಧವಾಗುತ್ತಾ ಕರ್ನಾಟಕ..?

ಬೆಂಗಳೂರು; ಸೆಪ್ಟೆಂಬರ್‌ 29ರಂದು ಕಾವೇರಿಗಾಗಿ ಕರ್ನಾಟಕ ಬಂದ್‌ಗೆ ಕರೆ ನೀಡಲಾಗಿದೆ. ವಾಟಾಳ್‌ ನಾಗರಾಜ್‌ ನೇತೃತ್ವದಲ್ಲಿ ಕನ್ನಡಪರ ಸಂಘಟನೆಗಳು ಕರ್ನಾಟಕ ಬಂದ್‌ಗೆ ಕರೆ ನೀಡಲಾಗಿದ್ದು, ನೂರಾರು ಸಂಘಟನೆಗಳು ಇದಕ್ಕೆ ಬೆಂಬಲ ಕೊಟ್ಟಿವೆ. ಸುಮಾರು 104 ಸಂಘಟನೆಗಳು ಬಂದ್‌ಗೆ ಬೆಂಬಲ ಸೂಚಿಸಿದ್ದು, ಸೆಪ್ಟೆಂಬರ್‌ 29ರಂದು ಕರ್ನಾಟಕ ಸಂಪೂರ್ಣ ಬಂದ್‌ ಆಗುವ ಸಾಧ್ಯತೆ ಇದೆ. ಕಾವೇರಿ ಹೋರಾಟಕ್ಕೆ ಕನ್ನಡ ಚಿತ್ರೋದ್ಯಮ ಕೂಡಾ ಸಾಥ್‌ ನೀಡುತ್ತಿದೆ. ಬಂದ್‌ ದಿನದಂದು ಚಿತ್ರೀಕರಣ ನಿಲ್ಲಿಸಿ, ಚಿತ್ರರಂಗದವರೆಲ್ಲಾ ಪ್ರತಿಭಟನೆಯಲ್ಲಿ ಪಾಲ್ಗೊಳ್ಳಲಿದ್ದಾರೆ. ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಗಿದೆ.

ಶುಕ್ರವಾರದ ಕರ್ನಾಟಕ ಬಂದ್‌ಗೆ ಚಲನಚಿತ್ರ ವಾಣಿಜ್ಯ ಮಂಡಳಿ ಸಂಪೂರ್ಣ ಬೆಂಬಲ ಕೊಟ್ಟಿದೆ. ಪ್ರತಿಭಟನೆಯಲ್ಲಿ ನಟ-ನಟಿಯರೆಲ್ಲಾ ಪಾಲ್ಗಳ್ಳಲಿದ್ದಾರೆ ಎಂದು ವಾಣಿಜ್ಯ ಮಂಡಳಿ ಅಧ್ಯಕ್ಷ ಎನ್‌.ಎಂ.ಸುರೇಶ್‌ ಮಾಹಿತಿ ನೀಡಿದ್ದಾರೆ. ನೆಲ, ಜಲ, ನಾಡಿನ ವಿಚಾರದಲ್ಲಿ ಚಿತ್ರೋದ್ಯಮ ಯಾವತ್ತಿಗೂ ಕನ್ನಡಿಗರ ಪರವಾಗಿದೆ. ಈ ಹಿಂದಿನ ಹೋರಾಟಗಳಲ್ಲೂ ಸಾಥ್‌ ಕೊಟ್ಟಿದೆ. ಈಗಲೂ ಹೋರಾಟಕ್ಕೆ ಸಾಥ್‌ ನೀಡಲಿದೆ ಎಂದು ವಾಣಿಜ್ಯ ಮಂಡಳಿ ಅಧ್ಯಕ್ಷರು ಹೇಳಿದ್ದಾರೆ. ಶುಕ್ರವಾರದ ದಿನ ಚಿತ್ರೋದ್ಯಮದ ಎಲ್ಲಾ ಚಟುವಟಿಕೆಗಳನ್ನು ಬಂದ್ ಮಾಡಿ ಎಲ್ಲರೂ ಬಂದ್ ಗೆ ಬೆಂಬಲ ವ್ಯಕ್ತಪಡಿಸಲಿದ್ದಾರೆ.

ಗಡಿಗಳಲ್ಲಿ, ರಾಷ್ಟ್ರೀಯ ಹೆದ್ದಾರಿಗಳನ್ನು ಕೂಡಾ ಬಂದ್‌ ಮಾಡೋದಕ್ಕೆ ಸಿದ್ಧತೆ ನಡೆಸಲಾಗಿದೆ. ಇಂದು ಕನ್ನಡ ಪರ ಸಂಘಟನೆಗಳ ನಾಯಕರು ಸಭೆ ನಡೆಸಿ, ಹೋರಾಟದ ರೂಪುರೇಷೆ ಸಿದ್ಧಪಡಿಸಿದ್ದಾರೆ. ಇನ್ನು ರೈಲು ಸಂಚಾರ ಹಾಗೂ ವಿಮಾನಗಳ ಹಾರಾಟಕ್ಕೂ ಅವಕಾಶ ನೀಡುವುದಿಲ್ಲ ಅಂತ ಕನ್ನಡ ಚಳವಳಿ ವಾಟಾಳ್‌ ಪಕ್ಷದ ನಾಯಕ ವಾಟಾಳ್‌ ನಾಗರಾಜ್‌ ಹೇಳಿದ್ದಾರೆ. ಶುಕ್ರವಾರದ ಬಂದ್‌ಗೆ ಓಲಾ, ಉಬರ್ ಚಾಲಕರ ಸಂಘ, ಆದರ್ಶ ಆಟೋ ಯೂನಿಯನ್, ಕರ್ನಾಟಕ ಕೈಗಾರಿಕೆಗಳ ಸಂಘ, ಕರ್ನಾಟಕ ರಸ್ತೆ ಸಾರಿಗೆ ಕ್ರಿಯಾ ಸಮಿತಿ, ವಿದ್ಯಾರ್ಥಿ ಸಂಘಟನೆಗಳು, ಮಾರುಕಟ್ಟೆ ಸಂಘ, ಚಲನಚಿತ್ರ ವಾಣಿಜ್ಯ ಮಂಡಳಿ, ಜಲಮಂಡಳಿ ನೌಕರರ ಸಂಘ, ಲಾರಿ ಮಾಲೀಕರ ಸಂಘ, ಹೋಟೆಲ್ ಅಸೋಸಿಯೇಷನ್, ಎಲ್ಲಾ ಕನ್ನಡಪರ ಸಂಘಟನೆಗಳು ಬೆಂಬಲ ಸೂಚಿಸಿವೆ. ಹೀಗಾಗಿ ಶುಕ್ರವಾರ ಇಡೀ ಕರ್ನಾಟಕ ಸ್ತಬ್ಧವಾಗುವುದು ನಿಶ್ಚಿತವಾಗಿದೆ.

ಇನ್ನು ಕಾವೇರಿ ವಿಚಾರದಲ್ಲಿ ರಾಜಕೀಯ ಕೆಸರೆರಚಾಟ ಜೋರಾಗಿಯೇ ನಡೆಯುತ್ತಿದೆ. ಒಂದು ಕಡೆ ಬಿಜೆಪಿ ಹಾಗೂ ಜೆಡಿಎಸ್‌ ಪಕ್ಷಗಳು ರಾಜ್ಯ ಸರ್ಕಾರದ ವಿರುದ್ಧ ಕಿಡಿ ಕಾರುತ್ತಿವೆ. ಈಗಿನ ಪರಿಸ್ಥಿತಿಗೆ ರಾಜ್ಯ ಸರ್ಕಾರವೇ ಕಾರಣ ಎಂದು ಆರೋಪಿಸುತ್ತಿವೆ. ಇಂದು ವಿಧಾನಸೌಧದ ಆವರಣದಲ್ಲಿರುವ ಗಾಂಧಿ ಪ್ರತಿಮೆ ಬಳಿ ಜೆಡಿಎಸ್‌ ಹಾಗೂ ಬಿಜೆಪಿ ನಾಯಕರು ಜಂಟಿಯಾಗಿ ಪ್ರತಿಭಟನೆ ನಡೆಸಿದವು. ಈ ವೇಳೆ ಮಾತನಾಡಿದ ಮಾಜಿ ಸಿಎಂ ಯಡಿಯೂರಪ್ಪ ಅವರು, ರಾಜ್ಯ ಕಾಂಗ್ರೆಸ್‌ ನಾಯಕರ ಜೊತೆ ತಮಿಳುನಾಡು ಸಿಎಂ ಚೆನ್ನಾಗಿದ್ದಾರೆ. ತಮಿಳುನಾಡು ಸಿಎಂ ಜೊತೆ ಮಾತುಕತೆ ನಡೆಸಲಿ ಎಂದರು. ಇದಕ್ಕೆ ಡಿಸಿಎಂ ಡಿ.ಕೆ.ಶಿವಕುಮಾರ್‌ ತಿರುಗೇಟು ನೀಡಿದ್ದಾರೆ. ಎರಡೂ ಪಕ್ಷಗಳೂ ಒಂದಾಗಿವೆ. ಮೈತ್ರಿ ಮಾಡಿಕೊಂಡಿವೆ. ಜೆಡಿಎಸ್‌-ಬಿಜೆಪಿ ನಾಯಕರಿಬ್ಬರೂ ಸೇರಿ ಕೇಂದ್ರ ಸರ್ಕಾರವನ್ನು ಭೇಟಿ ಮಾಡಿ, ಮಧ್ಯಸ್ಥಿಕೆ ವಹಿಸುವಂತೆ ಆಗ್ರಹ ಮಾಡಲಿ ಎಂದಿದ್ದಾರೆ.

ನೂರಾರು ಸಂಘಟನೆಗಳು ಬಂದ್‌ಗೆ ಬೆಂಬಲ ನೀಡಿವೆ. ಜನ ಕೂಡಾ ಸ್ವಯಂ ಪ್ರೇರಣೆಯಿಂದ ಬಂದ್‌ಗೆ ಬೆಂಬಲ ಸೂಚಿಸುವ ಸಾಧ್ಯತೆ ಇದೆ. ಈ ಹಿನ್ನೆಲೆಯಲ್ಲಿ ಸರ್ಕಾರ ಕೂಡಾ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಮುನ್ನೆಚ್ಚರಿಕೆ ವಹಿಸಿದೆ. ಸಾವಿರಾರು ಭದ್ರತಾ ಸಿಬ್ಬಂದಿಯನ್ನು ಭದ್ರತೆಗೆ ನಿಯೋಜಿಸಲಾಗುತ್ತಿದೆ. ಯಾವುದೇ ಅಹಿಕರ ಘಟನೆ ನಡೆಯದಂತೆ ತಡೆಯಲು ರಾಜ್ಯ ಸರ್ಕಾರ ಸೂಕ್ತ ಕ್ರಮ ಕೈಗೊಳ್ಳುತ್ತಿದೆ.

ಇತ್ತ ಬಂದ್‌ ದಿನವೇ ದೆಹಲಿಯಲ್ಲಿ ಸಭೆ ಇದೆ. ಕಾವೇರಿ ನದಿ ನೀರು ಹಂಚಿಕೆ ವಿಚಾರಕ್ಕೆ ಸಂಬಂಧಿಸಿದಂತೆ ಚರ್ಚಿಸಲು ಸೆಪ್ಟೆಂಬರ್ 29 ರಂದು ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ (CWMA) ಸಭೆ ಕರೆಯಲಾಗಿದೆ. ಪ್ರಾಧಿಕಾರದ ಅಧ್ಯಕ್ಷ ಎಸ್‌ಕೆ ಹಲ್ದಾರ್ ನೇತೃತ್ವದಲ್ಲಿ ದೆಹಲಿಯ ಎಂಟಿಎನ್‌ಎಲ್ ಕಟ್ಟಡದಲ್ಲಿರುವ ಕಚೇರಿಯಲ್ಲಿ ಸಭೆ ನಡೆಯಲಿದೆ. ಕರ್ನಾಟಕ, ತಮಿಳುನಾಡು, ಕೇರಳ ಹಾಗೂ ಪುದುಚೇರಿ ರಾಜ್ಯಗಳ ಅಧಿಕಾರಿಗಳು ಈ ಸಭೆಯಲ್ಲಿ ಭಾಗಿಯಾಗಲಿದ್ದಾರೆ.

ಇನ್ನು ಮಂಡ್ಯ ಭಾಗದಲ್ಲಿ ರೈತರ ಹೋರಾಟ ಜೋರಾಗಿ ನಡೆಯುತ್ತಿದೆ. ನಿತ್ಯವೂ ರೈತರು ಬೀದಿಗಿಳಿದು ಹೋರಾಟ ಮಾಡುತ್ತಿದ್ದಾರೆ. ಇಂದು ರೈತರೊಬ್ಬರು ಸಗಣಿ ನೀರನ್ನು ಮೈಮೇಲೆ ಸುರಿದುಕೊಳ್ಳುವ ಮೂಲಕ ಪ್ರತಿಭಟನೆ ಮಾಡಿ ಗಮನ ಸೆಳೆದಿದ್ದಾರೆ.

Share Post