ನಾವು ತಮಿಳುನಾಡಿಗೆ ನೀರು ಬಿಡುವ ಸ್ಥಿತಿಯಲ್ಲಿಲ್ಲ; ಸಿಎಂ ಸಿದ್ದರಾಮಯ್ಯ
ಬೆಂಗಳೂರು; ಸದ್ಯ ನಾವು ತಮಿಳುನಾಡಿಗೆ ನೀರು ಹರಿಸುವ ಪರಿಸ್ಥಿತಿಯಲ್ಲಿ ಇಲ್ಲ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ. ವಿಧಾನಸೌಧದಲ್ಲಿ ನಡೆದ ಸರ್ವಪಕ್ಷ ಸಭೆ ಬಳಿಕ ಮಾತನಾಡಿದ ಅವರು, ತಮಿಳುನಾಡಿಗೆ ನೀರು ಬಿಡಲು ಆಗಲ್ಲ ಎಂದು ಅರ್ಜಿ ಹಾಕುತ್ತೇವೆ ಎಂದು ಹೇಳಿದ್ದಾರೆ.
123 ವರ್ಷಗಳಲ್ಲಿ ಯಾವತ್ತೂ ಇಲ್ಲದಷ್ಟು ಮಳೆ ಕೊರತೆ ರಾಜ್ಯದಲ್ಲಾಗಿದೆ. ಹೀಗಾಗಿ, ನಮ್ಮಲ್ಲಿ ಕುಡಿಯುವ ನೀರಿಗೂ ತೊಂದರೆಯಾಗಿದೆ. ಇಂತಹ ಪರಿಸ್ಥಿತಿಯಲ್ಲಿ ತಮಿಳುನಾಡಿಗೆ ನೀರು ಬಿಡುವುದಕ್ಕೆ ಸಾಧ್ಯವಾಗುವುದಿಲ್ಲ. ಹೀಗಾಗಿ ಕಾವೇರಿ ನೀರು ನಿರ್ವಹಣಾ ಸಮಿತಿಗೆ ಮತ್ತೊಂದು ಸರ್ಜಿಯನ್ನು ಹಾಕುತ್ತೇವೆ. ಜೊತೆಗೆ ಕಾನೂನು ತಜ್ಞರು ಜೊತೆ ಚರ್ಚೆ ಮಾಡಿ, ಸುಪ್ರೀಂಕೋರ್ಟ್‌ಗೆ ರಾಜ್ಯದ ಪರಿಸ್ಥಿತಿಯ ಬಗ್ಗೆ ಮನವರಿಕೆ ಮಾಡಿಕೊಡುತ್ತೇವೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು.
ಕಾವೇರಿ ವಿಚಾರದ ಬಗ್ಗೆ ರಾಜ್ಯದ ಎಲ್ಲಾ ಸಂಸದರನ್ನು ಭೇಟಿಯಾಗಿ ಮಾತುಕತೆ ನಡೆಸುತ್ತೇನೆ. ಸರ್ವ ಪಕ್ಷ ನಿಯೋಗವನ್ನು ಪ್ರಧಾನಿ ಮೋದಿ ಬಳಿಗೆ ಕರೆದುಕೊಂಡು ಹೋಗುತ್ತೇವೆ. ಅವರಿಗೂ ಪರಿಸ್ಥಿತಿಯನ್ನು ತಿಳಿಸುತ್ತೇವೆ. ಆದ್ರೆ ಇನ್ನೂ ಮೋದಿಯವರು ಭೇಟಿಗೆ ಡೇಟ್ ಕೊಟ್ಟಿಲ್ಲ. 18ರಿಂದ ವಿಶೇಷ ಅಧಿವೇಶನ ಶುರುವಾಗಲಿದ್ದು, ಅಷ್ಟೊರಳಗೆ ದಿನಾಂಕ ನಿಗದಿ ಮಾಡಿದರೆ ಭೇಟಿಯಾಗಬಹುದು ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು.
ನಮ್ಮ ಬೆಳೆ ಉಳಿಸಿಕೊಳ್ಳಲು ಸುಮಾರು 70 ಟಿಎಂಸಿ ನೀರು ಬೇಕು. ಇದರ ಜೊತೆಗೆ ಕುಡಿಯುವುದಕ್ಕೂ ನೀರು ಬೇಕು. ಆದ್ರೆ ಕೆಆರ್‌ಎಸ್, ಕಬಿನಿ ಸೇರಿ ಮೂರು ಡ್ಯಾಮ್‌ಗಳಲ್ಲಿ ಈಗ ಇರೋದು ಕೇವಲ 53 ಟಿಎಂಸಿ ನೀರು ಎಂದು ಸಿಎಂ ಹೇಳಿದ್ದಾರೆ. ಜೊತೆಗೆ ನೀರು ಬಿಡುವ ಬಗ್ಗೆ ಮರು ಆದೇಶ ಹೊರಡಿಸುವಂತೆ ಕಾವೇರಿ ನೀರು ನಿರ್ವಹಣಾ ಸಮಿತಿ ಮುಂದೆ ಮತ್ತೊಂದು ಅರ್ಜಿಸಲು ತೀರ್ಮಾನಿಸಿದ್ದೇವೆ ಎಂದು ಸಿದ್ದರಾಮಯ್ಯ ಹೇಳಿದರು.