CrimeNational

ನಿಂತಿದ್ದ ಬಸ್‌ಗೆ ವೇಗವಾಗಿ ಬಂದ ಟ್ರಕ್‌ ಡಿಕ್ಕಿ; 11 ಮಂದಿ ದಾರುಣ ಸಾವು..!

ಜೈಪುರ; ಡೀಸೆಲ್‌ ಖಾಲಿಯಾಗಿದ್ದರಿಂದ ರಸ್ತೆ ಬದಿ ನಿಂತಿದ್ದ ಬಸ್‌ಗೆ ಹಿಂದಿನಿಂದ ವೇಗವಾಗಿ ಬಂದ ಟ್ರಕ್‌ ಒಂದು ಡಿಕ್ಕಿ ಹೊಡೆದಿದ್ದು, ಈ ಭೀಕರ ಅಪಘಾತದಲ್ಲಿ 11 ಮಂದಿ ಸಾವನ್ನಪ್ಪಿದ್ದಾರೆ. ರಾಜಸ್ಥಾನದ ಭರತ್‍ಪುರದ ರಾಷ್ಟ್ರೀಯ ಹೆದ್ದಾರಿಯಲ್ಲಿ ಕಳೆದ ಮಧ್ಯರಾತ್ರಿ ಈ ದುರಂತ ಸಂಭವಿಸಿದೆ.

ಖಾಸಗಿ ಬಸ್‌ ರಾಜಸ್ಥಾನದ ಪುಷ್ಕರ್‌ನಿಂದ ಹೊರಟಿತ್ತು. ಅದು ಉತ್ತರ ಪ್ರದೇಶದ ವೃಂದಾವನಕ್ಕೆ ಹೋಗುತ್ತಿತ್ತು. ಆದ್ರೆ ಲಖನ್‌ಪುರದ ಅಂಟ್ರಾ ಫ್ಲೈಓವರ್‌ ಮಧ್ಯೆ ಬರುವಷ್ಟರಲ್ಲಿ ಡೀಸೆಲ್‌ ಖಾಲಿಯಾಗಿ ನಿಂತಿದೆ. ಹೀಗಾಗಿ ಬಸ್‌ ಸಿಬ್ಬಂದಿ ಡೀಸೆಲ್‌ ತರಲು ಹೋಗಿದ್ದರು. ಇದೇ ವೇಳೆ ವೇಗವಾಗಿ ಬಂದ ಟ್ರಕ್‌ ಒಂದು ಬಸ್‌ಗೆ ಹಿಂದಿನಿಂದ ಡಿಕ್ಕಿ ಹೊಡೆದಿದೆ. ಮಧ್ಯರಾತ್ರಿಯಾಗಿದ್ದರಿಂದ ಬಸ್‌ನಲ್ಲಿ ಎಲ್ಲರೂ ಮಲಗಿದ್ದರು. ಟ್ರಕ್‌ ಡಿಕ್ಕಿ ಹೊಡೆದ ರಭಸಕ್ಕೆ 11 ಮಂದಿ ನಿದ್ದೆಯಲ್ಲಿ ಇಹಲೋಕ ತ್ಯಜಿಸಿದ್ದಾರೆ.

ದುರಂತದಲ್ಲಿ ಇನ್ನೂ 12 ಮಂದಿ ತೀವ್ರವಾಗಿ ಗಾಯಗೊಂಡಿದ್ದಾರೆ. ಕೆಲವರಿಗೆ ಕೈಕಾಲು ಊನವಾಗಿದೆ. ಅವರನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಮೃತರಲ್ಲಿ ಐವರು ಪುರುಷರು ಹಾಗೂ ಆರು ಜನ ಮಹಿಳೆಯರು ಸೇರಿದ್ದಾರೆ.

 

Share Post