ಮಾಜಿ ಪ್ರಧಾನಿ ದೇವೇಗೌಡರ ಎದುರು ಮಂಡಿಯೂರಿದ ಸಂಸದ ಪ್ರತಾಪ ಸಿಂಹ
ಬೆಂಗಳೂರು; ಲೋಕಸಭಾ ಚುನಾವಣೆಯಲ್ಲಿ ರಾಜ್ಯದಲ್ಲಿ ಬಿಜೆಪಿ ಹಾಗೂ ಜೆಡಿಎಸ್ ಮೈತ್ರಿ ಮಾಡಿಕೊಳ್ಳುತ್ತಿವೆ. ಈ ಬೆನ್ನಲ್ಲೇ ರಾಜ್ಯದಲ್ಲಿ ರಾಜಕೀಯ ಚಟುವಟಿಕೆ ಗರಿಗೆದರಿದೆ. ಮೈಸೂರು-ಕೊಡಗು ಕ್ಷೇತ್ರದ ಸಂಸದ ಪ್ರತಾಪ ಸಿಂಹ ಅವರು ಮಾಜಿ ಪ್ರಧಾನಿ ದೇವೇಗೌಡರಿಗೆ ತಲೆಬಾಗಿದ್ದಾರೆ. ದೇವೇಗೌಡರ ಮುಂದೆಯೂರಿ ನಮಿಸಿದ್ದಾರೆ.
ಆದಿಚುಂಚನಗಿರಿ ಮಠಕ್ಕೆ ದೇವೇಗೌಡರು ಹಾಗೂ ಜಿ.ಟಿ.ದೇವೇಗೌಡರು ಭೇಟಿ ಕೊಟ್ಟಿದ್ದರು. ಇದೇ ವೇಳೆ ಅಲ್ಲಿಗೆ ಆಗಮಿಸಿದ್ದ ಸಂಸದ ಪ್ರತಾಪ ಸಿಂಹ ಅವರು ಮಾಜಿ ಪ್ರಧಾನಿ ದೇವೇಗೌಡರಿಗೆ ಮಂಡಿಯೂರಿ ನಮಸ್ಕಾರ ಮಾಡಿದ್ದಾರೆ. ಎರಡು ಬಾರಿ ಸಂಸದರಾಗಿರುವ ಪ್ರತಾಪ ಸಿಂಹ ಅವರಿಗೆ ಈ ಬಾರಿ ಟಿಕೆಟ್ ನೀಡಿದರೆ ಸೋಲುತ್ತಾರೆ ಎಂಬ ಮಾತುಗಳು ಕೇಳಿಬರುತ್ತಿದ್ದವು. ಇದೀಗ ಜೆಡಿಎಸ್ ಬೆಂಬಲ ಕೂಡಾ ಸಿಗುವುದರಿಂದ ಪ್ರತಾಪ ಸಿಂಹಗೆ ಈ ಬಾರಿಯೂ ಅನುಕೂಲವಾಗುವ ಸಾಧ್ಯತೆ ಹೆಚ್ಚಿದೆ. ಈ ಹಿನ್ನೆಲೆಯಲ್ಲೇ ಪ್ರತಾಪ ಸಿಂಹ ಅವರು ದೇವೇಗೌಡರ ಆಶೀರ್ವಾದ ಪಡೆದಿದ್ದಾರೆ.
ಅಂದಹಾಗೆ, 2014ರ ಲೋಕಸಭಾ ಚುನಾವಣೆಯಲ್ಲಿ ಪ್ರಥಮ ಬಾರಿಗೆ ಪ್ರತಾಪ ಸಿಂಹ ಅವರು ಮೈಸೂರು-ಕೊಡಗು ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದರು. ಈ ವೇಳೆ ಜೆಡಿಎಸ್ ಪ್ರಬಲ ಅಭ್ಯರ್ಥಿಯನ್ನು ಕಣಕ್ಕಿಸದೆ ಪರೋಕ್ಷವಾಗಿ ಪ್ರತಾಪ ಸಿಂಹ ಅವರಿಗೆ ಅನಕೂಲವಾಗುವಂತೆ ಮಾಡಿತ್ತು. ಈ ಕಾರಣದಿಂದ ಪ್ರತಾಪ ಸಿಂಹ ಅವರಿಗೆ ಮೊದಲ ಬಾರಿಗೆ ಗೆಲ್ಲಲು ಸಾಧ್ಯವಾಗಿತ್ತು.