ನಾಳೆ ರಾಜ್ಯ ಸರ್ಕಾರದ ವಿರುದ್ಧ ರಾಜ್ಯಾದ್ಯಂತ ಬಿಜೆಪಿ ಪ್ರತಿಭಟನೆ; ಯಡಿಯೂರಪ್ಪ
ಬೆಂಗಳೂರು; ಲೋಕಸಭಾ ಚುನಾವಣೆ ಹತ್ತಿರವಾಗುತ್ತಿದ್ದಂತೆ ರಾಜಕೀಯ ನಾಯಕರು ವಾಗ್ಯುದ್ಧಗಳು ಜೋರಾಗುತ್ತಿವೆ. ಕರ್ನಾಟಕದಲ್ಲಿ ಕಾಂಗ್ರೆಸ್ ನಿಂದ ಆಪರೇಷನ್ ಹಸ್ತ ಶುರುವಾಗಿದೆ. ಇತ್ತ ಇಷ್ಟೆಲ್ಲಾ ನಡೆಯುತ್ತಿದ್ದರೂ ಬಿಜೆಪಿಯ ಹಿರಿಯ ನಾಯಕ ಮಾಜಿ ಸಿಎಂ ಯಡಿಯೂರಪ್ಪ ಸುಮ್ಮನಿದ್ದರು. ಆದ್ರೆ ಇದೀಗ ಅವರು ಮತ್ತೆ ರಾಜಕೀಯ ಅಖಾಡಕ್ಕೆ ಧುಮುಕಿದ್ದಾರೆ. ಇಷ್ಟು ದಿನ ಮೌನವಾಗಿದ್ದ ಯಡಿಯೂರಪ್ಪ ಇಂದು ರಾಜ್ಯ ರಾಜಕೀಯದ ಬಗ್ಗೆ ಮಾತನಾಡಿದ್ದಾರೆ. ನಾನು ಸುಮ್ಮನೆ ಮನೆಯಲ್ಲಿ ಕುಳಿತುಕೊಳ್ಳುವುದಿಲ್ಲ. ರಾಜ್ಯಾದ್ಯಂತ ಪ್ರವಾಸ ಮಾಡಿ ಪಕ್ಷ ಸಂಘಟನೆ ಮಾಡುತ್ತೇನೆ ಎಂದು ಹೇಳುವ ಮೂಲಕ ಕಾಂಗ್ರೆಸ್ ವಿರುದ್ಧ ಗುಡುಗಿದ್ದಾರೆ.
ಕೆಆರ್‌ಎಸ್‌ನಿಂದ ತಮಿಳುನಾಡಿಗೆ ನೀರು ಬಿಡುತ್ತಿರುವುದು, ರಾಜ್ಯದಲ್ಲಿ ಬರಗಾಲ ಎದುರಾದರೂ, ಬರಗಾಲ ಘೋಷಣೆ ಮಾಡದಿರುವುದು ಕೂಡಾ ಬಿಜೆಪಿ ಅಸ್ತ್ರವಾಗಿದೆ. ನಾಳೆ ರಾಜ್ಯಾದ್ಯಂತ ಬಿಜೆಪಿ ಪ್ರತಿಭಟನೆ ಮಾಡಲು ಮುಂದಾಗಿದೆ. ರಾಜ್ಯದ ಎಲ್ಲಾ ಜಿಲ್ಲಾ ಹಾಗೂ ತಾಲ್ಲೂಕು ಕೇಂದ್ರಗಳಲ್ಲಿ ರಾಜ್ಯ ಸರ್ಕಾರದ ವಿರುದ್ಧ ಬಿಜೆಪಿ ಪ್ರತಿಭಟನೆ ನಡೆಸುತ್ತದೆ ಎಂದು ಮಾಜಿ ಸಿಎಂ ಯಡಿಯೂರಪ್ಪ ಹೇಳಿದ್ದಾರೆ. ಈ ಮೂಲಕ ಕಾಂಗ್ರೆಸ್‌ಗೆ ಎಚ್ಚರಿಕೆ ಸಂದೇಶವನ್ನು ರವಾನಿಸಿದ್ದಾರೆ. ಯಡಿಯೂರಪ್ಪ ಅವರ ಆಪ್ತ ರೇಣುಕಾಚಾರ್ಯ ಅವರು, ಯಡಿಯೂರಪ್ಪರನ್ನು ಕಡೆಗಣಿಸಲಾಗಿದೆ ಎಂದು ಹೇಳುತ್ತಾ ಬಂದಿದ್ದರು. ಇದರ ನಡುವೆ ಯಡಿಯೂರಪ್ಪ ಮತ್ತೆ ಸಕ್ರಿಯವಾದರೆ ಮಾತ್ರ ರಾಜ್ಯದಲ್ಲಿ ಬಿಜೆಪಿ ಕಟ್ಟಬಹುದು ಎಂಬ ಮಾತುಗಳು ಕೇಳಿಬರುತ್ತಿದ್ದವು. ಈ ಬೆನ್ನಲ್ಲೇ ಯಡಿಯೂರಪ್ಪ ಇಂದು ಮಾಧ್ಯಮಗಳ ಮುಂದೆ ಬಂದು ಮಾತನಾಡಿದ್ದಾರೆ.
ಇತ್ತೀಚೆಗೆ ಬಿ.ಎಲ್.ಸಂತೋಷ್ ಅವರು ಬಿಜೆಪಿ ಕಚೇರಿಯಲ್ಲಿ ಸಭೆಯೊಂದನ್ನು ನಡೆಸಿದ್ದರು. ಈ ಸಭೆಗೆ ಯಡಿಯೂರಪ್ಪ ಹೋಗಿರಲಿಲ್ಲ. ಯಡಿಯೂರಪ್ಪ ಅವರನ್ನು ದೂರ ಇಟ್ಟು ಸಭೆ ನಡೆಸಲಾಗಿದೆ ಎಂಬ ಆರೋಪಗಳು ಕೇಳಿಬಂದಿದ್ದವು. ಯಡಿಯೂರಪ್ಪ ಅವರ ಆಪ್ತರು, ಯಡಿಯೂರಪ್ಪ ಅವರು ಮತ್ತೆ ಪಕ್ಷ ಸಂಘಟನೆಗೆ ಬರಬೇಕು ಎಂದು ಮನವಿ ಮಾಡಿದ್ದರು. ಇಷ್ಟೆಲ್ಲಾ ನಡೆಯುತ್ತಿದ್ದಾಗಲೇ ಯಡಿಯೂರಪ್ಪ ಮಾಧ್ಯಮಗಳ ಮುಂದೆ ಬಂದು ಅಬ್ಬರಿಸಿದ್ದಾರೆ. ನಾನು ಶೀಘ್ರದಲ್ಲೇ ರಾಜ್ಯ ಪ್ರವಾಸ ಮಾಡುತ್ತೇನೆ. ನಮ್ಮಲ್ಲಿ ಯಾರೂ ಪಕ್ಷ ಬಿಟ್ಟು ಹೋಗಲ್ಲ. ಲೋಕಸಭಾ ಚುನಾವಣೆಯಲ್ಲಿ 22-23 ಸೀಟು ಗೆಲ್ಲಿಸುವ ವಿಶ್ವಾಸ ನನಗಿದೆ ಎಂದು ಯಡಿಯೂರಪ್ಪ ಹೇಳಿದ್ದಾರೆ.
ರಾಜ್ಯ ಕಾಂಗ್ರೆಸ್ ಸರ್ಕಾರದ ವೈಫಲ್ಯ ವಿರುದ್ಧ ನಾಳೆ ರಾಜ್ಯಾದ್ಯಂತ ಪ್ರತಿಭಟನೆ ನಡೆಸಲಾಗುವುದು ಎಂದು ಯಡಿಯೂರಪ್ಪ, ಸರ್ಕಾರ ಭ್ರಷ್ಟಾಚಾರದಲ್ಲಿ ಮುಳುಗಿ ಅಭಿವೃದ್ಧಿಯನ್ನು ಕಡೆಗಣಿಸಿದೆ. ಬರಗಾಲ ಘೋಷಣೆಗೆ ಹಿಂದೆ ಮುಂದೆ ನೋಡುತ್ತಿದ್ದಾರೆ. ಹಿಂದೆ ಮಾಡಿರುವ ಕೆಲಸಗಳಿಗೂ ಕೂಡ ಕಮಿಷನ್ ಕೇಳುತ್ತಿದ್ದಾರೆ. ಶಾಸಕರಿಗೆ ಅನುದಾನ ಕೊಡುತ್ತಿಲ್ಲ. ಕಾರ್ಯಕರ್ತರ ಮೇಲೆ ಅನಗತ್ಯ ಕೇಸ್ ಹಾಕಿ ದ್ವೇಷ ಸಾಧಿಸ್ತಿದ್ದಾರೆ. ನಾಳೆ 15-20 ಸಾವಿರ ಜನರನ್ನು ಸೇರಿಸಿ ಪ್ರತಿಭಟನೆ ಮಾಡುತ್ತೇವೆ. ಕಾನೂನು ಸುವ್ಯವಸ್ಥೆ ಹದಗೆಟ್ಟರೆ ಅದಕ್ಕೆ ರಾಜ್ಯ ಸರ್ಕಾರವೇ ಹೊಣೆ. ಈ ಎಚ್ಚರಿಕೆಯನ್ನು ಸರ್ಕಾರಕ್ಕೆ ಕೊಡುತ್ತಿದ್ದೇನೆ ಎಂದು ಯಡಿಯೂರಪ್ಪ ಹೇಳಿದರು.