ಗೃಹಲಕ್ಷ್ಮೀ ಯೋಜನೆಗೆ ಅದ್ದೂರಿ ಚಾಲನೆ; 1.11 ಕೋಟಿ ಮಹಿಳೆಯರಿಗೆ ಸಂದಾಯವಾಗಲಿದೆ ಹಣ
ಮೈಸೂರು; ಕರ್ನಾಟಕ ಸರ್ಕಾರದ ನಾಲ್ಕನೇ ಗ್ಯಾರೆಂಟಿ ಗೃಹಲಕ್ಷ್ಮೀ ಯೋಜನೆಗೆ ಇಂದು ಮೈಸೂರಿನಲ್ಲಿ ಅದ್ದೂರಿ ಚಾಲನೆ ಸಿಕ್ಕಿದೆ. ಸಾಂಕೇತಿಕವಾಗಿ ಹತ್ತು ಗೃಹಿಣಿಯರಿಗೆ ತಲಾ ಎರಡು ಸಾವಿರ ರೂಪಾಯಿ ಸಂದಾಯ ಮಾಡುವುದರ ಮೂಲಕ ಗೃಹಲಕ್ಷ್ಮೀ ಯೋಜನೆಗೆ ಚಾಲನೆ ನೀಡಲಾಗಿದೆ. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಯವರು ಮಹಿಳೆಯರ ಖಾತೆಗೆ ಹಣ ವರ್ಗಾಯಿಸುವ ಮೂಲಕ ಯೋಜನೆಗೆ ಚಾಲನೆ ಕೊಟ್ಟರು.
ಸುಮಾರು 1 ಕೋಟಿ 11 ಲಕ್ಷ ಗೃಹಿಣಿಯರು ಈ ಯೋಜನೆಯಲ್ಲಿ ನೋಂದಾಯಿಸಿಕೊಂಡಿದ್ದಾರೆ. ಅವರೆಲ್ಲರ ಖಾತೆಗಳಿಗೂ ಇಂದು ತಲಾ ಎರಡು ಸಾವಿರ ರೂಪಾಯಿ ವರ್ಗಾವಣೆಯಾಗಲಿದೆ. ಇಂದಿನಿಂದ ಪ್ರತಿ ತಿಂಗಳೂ ಗೃಹಿಣಿಯರ ಖಾತೆಗಳಿಗೆ ತಲಾ ಎರಡು ಸಾವಿರ ರೂಪಾಯಿ ವರ್ಗಾವಣೆಯಾಗಲಿದೆ.
ಮೈಸೂರಿನಲ್ಲಿ ನಡೆಯುತ್ತಿರುವ ಕಾರ್ಯಕ್ರಮದಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ.ಶಿವಕುಮಾರ್ ಸೇರಿದಂತೆ ಹಲವು ಗಣ್ಯರು ಪಾಲ್ಗೊಂಡಿದ್ದಾರೆ. ಎಲ್ಲಾ ಮಂತ್ರಿಗಳು, ಅಧಿಕಾರಿಗಳು ಕೂಡಾ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದಾರೆ. ಲಕ್ಷಾಂತರ ಮಹಿಳೆಯರು ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದಾರೆ.