ಹತ್ತನೇ ತರಗತಿ ವಿದ್ಯಾರ್ಥಿನಿ ಅಪಾರ್ಟ್‌ಮೆಂಟ್ ಮೇಲಿಂದ ಬಿದ್ದು ಸಾವು..!
ಬೆಂಗಳೂರು; ಹತ್ತನೇ ತರಗತಿ ವಿದ್ಯಾರ್ಥಿನಿಯೊಬ್ಬಳು ಅಪಾರ್ಟ್‌ಮೆಂಟ್‌ನ 12ನೇ ಮಹಡಿಯಿಂದ ಬಿದ್ದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಬೆಳ್ಳಂದೂರಿನ ಕ್ಲಾಸಿಕ್ ಅಪಾರ್ಟ್‌ಮೆಂಟ್‌ನಲ್ಲಿ ಈ ಘಟನೆ ನಡೆದಿದ್ದು, ಹದಿನೈದು ವರ್ಷದ ಜೆಸ್ಸಿಕಾ ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿನಿ ಎಂದು ಗುರುತಿಸಲಾಗಿದೆ.
ಇಂದು ಬೆಳಗ್ಗೆ ಹತ್ತೂವರೆ ಸುಮಾರಿಗೆ ಈ ಘಟನೆ ನಡೆದಿದೆ. ಎರಡು ವರ್ಷಗಳಿಂದ ಜೆಸ್ಸಿಕಾ ಕುಟುಂಬ ಅಪಾರ್ಟ್‌ಮೆಂಟ್‌ನ 11ನೇ ಮಹಡಿಯಲ್ಲಿ ವಾಸವಿದೆ. ಜೆಸ್ಸಿಕಾ ತಂದೆ ಖಾಸಗಿ ಕಂಪನಿಯಲ್ಲಿ ಎಂಜಿನಿಯರ್ ಆಗಿದ್ದರೆ, ತಾಯಿ ಖಾಸಗಿ ಶಾಲೆಯಲ್ಲಿ ಶಿಕ್ಷಕಿಯಾಗಿ ಕೆಲಸ ಮಾಡುತ್ತಾರೆ. ಜೆಸ್ಸಿಕಾ ಕಳೆದ ಮೂರು ತಿಂಗಳಲ್ಲಿ ಕೇಲವ ಆರು ದಿನ ಮಾತ್ರ ಶಾಲೆಗೆ ಹಾಜರಾಗಿದ್ದಳು. ಇವತ್ತೂ ಕೂಡಾ ಶಾಲೆಗೆ ಹೋದವಳು ನಂತರ ವಾಪಸ್ ಬಂದಿದ್ದಾಳೆ. ಇದರಿಂದಾಗಿ ಶಾಲೆಯ ಟೀಚರ್ ಜೆಸ್ಸಿಕಾ ತಾಯಿಗೆ ಕರೆ ಮಾಡಿ ಹೇಳಿದ್ದಾಳೆ. ಜೆಸ್ಸಿಕಾ ತಾಯಿ ಅಪಾರ್ಟ್‌ಮೆಂಟ್ ಬಳಿ ಬಂದು ನೋಡಿದಾಗ ಆಕೆ ಆತ್ಮಹತ್ಯೆ ಮಾಡಿಕೊಂಡಿರುವುದು ಗೊತ್ತಾಗಿದೆ.
ಜೆಸ್ಸಿಕಾ ಕುಟುಂಬ ವಾಸವಿದ್ದ ಫ್ಲೋರ್‌ನ ಮೇಲಿನ ಫ್ಲೋರ್‌ಗೆ ತೆರಳಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಮನೆಯಲ್ಲಿ, ಅಕ್ಕ-ಪಕ್ಕದಲ್ಲಿ ಯಾರೂ ಇಲ್ಲದ ಸಂದರ್ಭ 12ನೇ ಫ್ಲೋರ್‌ನಿಂದ ಬಿದ್ದು ಸಾವನ್ನಪ್ಪಿದ್ದಾಳೆ. ಜೆಸ್ಸಿಕಾ ಮಾನಸಿಕವಾಗಿ ನೊಂದಿದ್ದು, ಒತ್ತಡದಲ್ಲಿದ್ದಳು ಎಂದು ಹೇಳಲಾಗುತ್ತಿದೆ. ಜಿಗುಪ್ಸೆಗೊಂಡು ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಹೇಳಲಾಗುತ್ತಿದೆ.