DistrictsPolitics

ಬಿಜೆಪಿಗೆ ಯಾವ ನೈತಿಕ ಹಕ್ಕಿದೆ; ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಶ್ನೆ

ಮೈಸೂರು; ಸರ್ಕಾರದ ಬಗ್ಗೆ ಚಾರ್ಜ್ ಶೀಟ್ ತರಲು ಬಿಜೆಪಿ ಪಕ್ಷಕ್ಕೆ ನೈತಿಕ ಹಕ್ಕಿಲ್ಲ ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದರು. ಅವರು ಇಂದು ಮೈಸೂರಿನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದರು. ರಾಜ್ಯ ಸರ್ಕಾರ 100 ದಿನ ಪೂರೈಸಿದ್ದು, ಈ ವೇಳೆ ತಪ್ಪುಗಳು ನಡೆದಿವೆ ಎಂದು ಚಾರ್ಜ್ ಶೀಟ್ ಮಾದರಿಯಲ್ಲಿ ಹೊರತರುವುದಾಗಿ ಬಿಜೆಪಿ ಹೇಳಿದೆ. ಇದಕ್ಕೆ ಪ್ರತಿಕ್ರಿಯಿಸಿದ ಸಿಎಂ, ಅವರು 4 ವರ್ಷದ ಸರ್ಕಾರದಲ್ಲಿ ಏನು ಕೆಲಸ ಮಾಡಿದರು ಎಂದು ಪ್ರಶ್ನೆ ಮಾಡಿದ್ದಾರೆ.

ಬಿಜೆಪಿ ಸರ್ಕಾರದ ಅವಧಿಯಲ್ಲಿನ ಹಗರಣಗಳ ತನಿಖೆ ಆರಂಭವಾಗುತ್ತಿವೆ. ತನಿಖೆ ಕೈಗೊಂಡಿರುವ ಬಗ್ಗೆ ಮೊದಲು ಉತ್ತರಿಸಲಿ ಎಂದು ಸಿಎಂ ಇದೇ ವೇಳೆ ಹೇಳಿದರು. ಬಿಜೆಪಿಯವರನ್ನು ಟಾರ್ಗೆಟ್ ಮಾಡಿದ್ದಾರೆ ಎಂಬ ಆರೋಪಕ್ಕೆ ಉತ್ತರಿಸಿದ ಮುಖ್ಯಮಂತ್ರಿ, ಈ ಬಗ್ಗೆ ನಾವು ಮೊದಲೇ ಹೇಳಿದ್ದೆವು. ಅಧಿಕಾರಕ್ಕೆ ಬರುವ ಮುನ್ನವೇ ಅವರ ಎಲ್ಲಾ ಹಗರಣಗಳ ಬಗ್ಗೆ ತನಿಖೆ ಮಾಡಿಸುವುದಾಗಿ ಹೇಳಿದ್ದೆವು. ಪಿ.ಎಸ್.ಐ ಹಗರಣವನ್ನು ನಿವೃತ್ತ ನ್ಯಾ. ಬಿ.ವೀರಪ್ಪ ಅವರು, 40% ಹಗರಣವನ್ನು ನಿವೃತ್ತ ನ್ಯಾ. ನಾಗಮೋಹನ್ ದಾಸ್ ಅವರ ನೇತೃತ್ವದ ಆಯೋಗ ತನಿಖೆ ಮಾಡಲಿದೆ. ಕೋವಿಡ್ ಕಾಲದ ಹಗರಣವನ್ನು ನಿವೃತ್ತ ನ್ಯಾ. ಕುನ್ಹಾ ಅವರ ಅಧ್ಯಕ್ಷತೆಯಲ್ಲಿ ತನಿಖೆ ನಡೆಯುತ್ತಿದೆ. ಇದರಲ್ಲಿ ದ್ವೇಷ ಎಲ್ಲಿದೆ? ರಾಜ್ಯದ ಜನರ ಹಿತಾಸಕ್ತಿ ಇದರಲ್ಲಿದೆ ಎಂದರು. ಬಿಜೆಪಿಯವರು ಅಧಿಕಾರದಲ್ಲಿದ್ದಾಗಲೇ ಈ ಎಲ್ಲದರ ಬಗ್ಗೆ ತನಿಖೆ ಮಾಡಿಸಿ ಎಂದು ನಾವು ಒತ್ತಾಯ ಮಾಡಿದ್ದೆವು ಎಂದು ಸಿಎಂ ನೆನಪಿಸಿದರು.

Share Post