Bengaluru

ಸ್ವಾತಂತ್ರ್ಯದ ಬೆಲೆ ಗೊತ್ತಾಗೋದು ಅದಕ್ಕಾಗಿ ಹೋರಾಡಿದವರಿಗೆ ಮಾತ್ರ; ಡಿ.ಕೆ.ಶಿವಕುಮಾರ್‌

ಬೆಂಗಳೂರು; ಸ್ವಾತಂತ್ರ್ಯದ ಬೆಲೆ ಗೊತ್ತಾಗೋದು ಅದಕ್ಕಾಗಿ ಹೋರಾಡಿದವರಿಗೆ ಮಾತ್ರ ಎಂದು ಡಿಸಿಎಂ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಹೇಳಿದ್ದಾರೆ. ಕೆಪಿಸಿಸಿ ಕಚೇರಿಯಲ್ಲಿ ಧ್ವಜಾರೋಹಣ ನೆರವೇರಿಸಿ ಅವರು ಮಾತನಾಡಿದರು.

ಸ್ವಾತಂತ್ರ್ಯ ಎಂದರೆ ಬೆಲೆ ಕಟ್ಟಿ ಪಡೆಯುವ ವಸ್ತುವಲ್ಲ. ಅದು ಬದುಕಿನ ಉಸಿರು. ಹೀಗಾಗಿ ಸ್ವಾತಂತ್ರ್ಯಕ್ಕೆ ನಾವು ಬೆಲೆ ಕಟ್ಟಲು ಸಾಧ್ಯವೇ? ಎಂದು ಗಾಂಧಿ ಹೇಳಿಕೆ ಉಲ್ಲೇಖಿಸಿ ಡಿ.ಕೆ.ಶಿವಕುಮಾರ್‌ ಪ್ರಶ್ನೆ ಮಾಡಿದರು. ಈ ಜಗತ್ತಿನಲ್ಲಿ ಯಾವುದಕ್ಕೆ ಬೇಕಾದರೂ ಬೆಲೆ ಕಟ್ಟಬಹುದು. ಆದರೆ ಸ್ವಾತಂತ್ರ್ಯಕ್ಕೆ ಬೆಲೆ ಕಟ್ಟಲು ಸಾಧ್ಯವಿಲ್ಲ. ಆದರೆ ಸ್ವಾತಂತ್ರ್ಯದ ಬೆಲೆ ಗೊತ್ತಾಗುವುದು ಅದಕ್ಕಾಗಿ ಹೋರಾಡಿದವರಿಗೆ ಮಾತ್ರ. ಅದಕ್ಕಾಗಿ ರಕ್ತ ಸುರಿಸಿದವರಿಗೆ ಮಾತ್ರ,
ಅದಕ್ಕಾಗಿ ಪ್ರಾಣ ತೆತ್ತವರಿಗೆ ಮಾತ್ರ ಅದರ ಬೆಲೆ ಗೊತ್ತಾಗೋದು ಎಂದು ಹೇಳಿದರು.

ಈ ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಡಿದ್ದು ಕಾಂಗ್ರೆಸ್ ಪಕ್ಷ ಎಂಬುದೇ ನಮ್ಮ ನಿಮ್ಮೆಲ್ಲರ ಹೆಮ್ಮೆ. ಮಹಾತ್ಮಾ ಗಾಂಧಿ, ಜವಹರಲಾಲ್ ನೆಹರೂ, ಮೌಲಾನ ಅಜಾದ್, ಭಗತ್ ಸಿಂಗ್, ವಲ್ಲಭಬಾಯ್ ಪಟೇಲ್, ಡಾ ಬಿ ಆರ್ ಅಂಬೇಡ್ಕರ್, ಸರೋಜಿನಿ ನಾಯ್ಡು ಅವರ ಹೋರಾಟದ ಫಲವಾಗಿ ನಾವು ಸ್ವತಂತ್ರ ಭಾರತದ ಫಲಾನುಭವಿಗಳಾಗಿದ್ದೇವೆ ಎಂದು ಡಿ.ಕೆ.ಶಿವಕುಮಾರ್‌ ಹೇಳಿದರು.

ಸ್ವಾತಂತ್ರ್ಯ ಎಂದರೆ ಅದು ಕೇವಲ ರಾಜಕೀಯ ನಿರ್ಧಾರವೂ ಅಲ್ಲ ಅಥವಾ ಹೊಸ ಸಂವಿಧಾನವಲ್ಲ. ಇದು ಮನಸ್ಸು ಹಾಗೂ ಹೃದಯಕ್ಕೆ ಸಂಬಂಧಿಸಿದ್ದು. ಒಂದು ವೇಳೆ ಮನಸ್ಸು ಸಂಕುಚಿತವಾಗಿದ್ದರೆ ಅಥವಾ ಗೊಂದಲದಲ್ಲಿದ್ದರೆ, ಹೃದಯ ಅಸೂಯೆ ಅಥವಾ ದ್ವೇಷದಿಂದ ತುಂಬಿದ್ದರೆ ಅಲ್ಲಿ ಸ್ವಾತಂತ್ರ್ಯ ಎಂಬುದು ಅಸ್ಥಿತ್ವದಲ್ಲಿರುವುದಿಲ್ಲ ಎಂದರು. ಸ್ವಾತಂತ್ರ್ಯ ದಿನ ಎಂದರೆ ನಮ್ಮ ಸಾಧನೆಯ ಇತಿಹಾಸ ನೆನಪಿಸಿಕೊಳ್ಳುವ ದಿನ. ವರ್ತಮಾನದಲ್ಲಿ ನಾವು ಹೇಗಿದ್ದೇವೆ ಎಂದು ಅವಲೋಕನ ಮಾಡಿಕೊಳ್ಳುವ ದಿನ. ಇಂದು ನಾವು ಬರೀ ಧ್ವಜ ಹಾರಿಸಿ ರಾಷ್ಟ್ರಗೀತೆ ಹಾಡಿದರೆ ಸಾಲದು. ನಮ್ಮ ದೇಶದ ಸ್ವಾತಂತ್ರ್ಯ ಏನಾಗಿದೆ ಎಂದು ಅರಿಯಬೇಕಿದೆ ಎಂದರು.

Share Post