ಬಿಜೆಪಿ ಮುಕ್ತ ಭಾರತಕ್ಕೆ ಸಜ್ಜಾಗಿ; ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಕರೆ
ಬೆಂಗಳೂರು; ಮಹಾತ್ಮ ಗಾಂಧಿ ಅವರು ಬ್ರಿಟೀಷರನ್ನ ಭಾರತ ಬಿಟ್ಟು ತೊಲಗಿ ಎನ್ನುವ ಹೋರಾಟಕ್ಕೆ 81 ವರ್ಷ ಆಗಿದೆ. ಈಗ ಮತ್ತೆ 8 ದಶಕಗಳ ನಂತರ “ಭಾರತ ಬಿಟ್ಟು ತೊಲಗಿ ಎನ್ನುವ ಹೋರಾಟ” ಮತ್ತೆ ಆರಂಭವಾಗಿದೆ. ಅಂದು ಬ್ರಿಟೀಷರ ವಿರುದ್ದ ಹೋರಾಟ ಮಾಡಿದ್ದೆವು. ಇಂದು ಕೋಮುವಾದಿ, ಸರ್ವಾದಿಕಾರಿ ಸರ್ಕಾರ ತೊಲಗಿಸಲು ಹೋರಾಟ ಮಾಡಬೇಕಾಗಿದೆ. ಕಾಂಗ್ರೆಸ್ ಮುಕ್ತ ಭಾರತ ಮಾಡುತ್ತೇವೆ ಎಂದು ಬಿಜೆಪಿ ಅವರು ಹೇಳುತ್ತಿದ್ದರು. ಈಗ ನೀವೆಲ್ಲಾ ಬಿಜೆಪಿ ಮುಕ್ತ ಭಾರತಕ್ಕೆ ಸಜ್ಜಾಗಬೇಕು ಎಂದು ಉಪಮುಖ್ಯಮಂತ್ರಿಗಳಾದ ಡಿ.ಕೆ.ಶಿವಕುಮಾರ್ ಅವರು ಕರೆ ನೀಡಿದರು.
ಕ್ವೀನ್ಸ್ ರಸ್ತೆಯ ಕೆಪಿಸಿಸಿ ಕಚೇರಿಯಲ್ಲಿ ಹಮ್ಮಿಕೊಂಡಿದ್ದ “ಕ್ವಿಟ್ ಇಂಡಿಯಾ ಚಳವಳಿ” ದಿನಾಚರಣೆಯಲ್ಲಿ ಮಾತನಾಡುತ್ತಾ, ಅವರು ಹೇಳಿದ್ದಿಷ್ಟು, “ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರ ಬಂದ ನಂತರ ಭಾರತದ ಎಲ್ಲಾ ರಾಜ್ಯಗಳ ಪ್ರಮುಖ ವಿರೋಧ ಪಕ್ಷಗಳ ನಾಯಕರು, ಮುಖ್ಯಮಂತ್ರಿಗಳು “ಇಂಡಿಯಾ ರಕ್ಷಿಸಿ” ಅಭಿಯಾನಕ್ಕೆ ಬೆಂಗಳೂರು ಸಾಕ್ಷಿಯಾಯಿತು. ಇಡೀ “ಇಂಡಿಯಾ”ಕ್ಕೆ ಕರ್ನಾಟಕ ಆತ್ಮವಿಶ್ವಾಸ ನೀಡಿದೆ.
“ಇಂಡಿಯಾ” ಸಭೆಯ ನಂತರ ನಮ್ಮ ಪಕ್ಷದ ಎಲ್ಲಾ ರಾಜ್ಯಗಳ ನಾಯಕರನ್ನು ಕರೆದ ಉನ್ನತ ನಾಯಕರುಗಳು ಕರ್ನಾಟಕ ಮಾದರಿಯನ್ನು ಅನುಕರಿಸಿ ಎಂದು ಹೇಳಿದರು. ಕರ್ನಾಟಕ ಮಾದರಿ ಎಂದರೆ ಏನು? “ಎಲ್ಲಾ ವೈಮನಸ್ಸು , ವ್ಯಕ್ತಿ ಪ್ರತಿಷ್ಠೆ ಬಿಟ್ಟು, ವ್ಯಕ್ತಿ ಮುಖ್ಯವಲ್ಲ, ಪಕ್ಷ ಮುಖ್ಯ ಎಂದು ದುಡಿಯುವುದೇ” ಕರ್ನಾಟಕ ಮಾದರಿ ಎಂದು ಕಿವಿ ಮಾತು ಹೇಳಿದ್ದಾರೆ, ಇದು ನಮ್ಮ ಹೆಗ್ಗಳಿಕೆ ಎಂದರು.