ನಗರದಲ್ಲಿ ಫ್ಲೆಕ್ಸ್‌ಗಳ ಹೆಚ್ಚಳ; ಸರ್ಕಾರವನ್ನು ತರಾಟೆಗೆ ತೆಗೆದುಕೊಂಡ ಕೋರ್ಟ್
ಬೆಂಗಳೂರು; ಬೆಂಗಳೂರಿನಲ್ಲಿ ಅನಧಿಕೃತ ಫ್ಲೆಕ್ಸ್, ಬ್ಯಾನರ್‌ಗಳು ಹೆಚ್ಚಾಗಿವೆ. ಈ ಬಗ್ಗೆ ಬಿಬಿಎಂಪಿಗೆ ಹಲವು ಬಾರಿ ಸೂಚನೆ ಕೊಟ್ಟರೂ ಕ್ರಮ ಕೈಗೊಂಡಿಲ್ಲ. ಈ ಹಿನ್ನೆಲೆಯಲ್ಲಿ ಹೈಕೋರ್ಟ್ ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಿದೆ. ಕ್ರಮ ಕೈಗೊಳ್ಳದಿದ್ದಕ್ಕೆ ಹೈಕೋರ್ಟ್ ರಾಜ್ಯ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದೆ. ಚುನಾವಣೆ ವೇಳೆ 60 ಸಾವಿರಕ್ಕೂ ಹೆಚ್ಚು ಫ್ಲೆಕ್ಸ್, ಬ್ಯಾನರ್‌ಗಳನ್ನು ಅಳವಡಿಸಲಾಗಿತ್ತು. ಆದ್ರೆ 140 ಎಫ್‌ಐಆರ್ ಮಾತ್ರ ದಾಖಲು ಮಾಡಲಾಗಿದೆ. ಫ್ಲೆಕ್ಸ್ ತೆರವಿಗೆ ಶುಭ ಮುಹೂರ್ತ ಕಾಯುತ್ತಿದ್ದೀರಾ ಎಂದು ಕೋರ್ಟ್ ಪ್ರಶ್ನೆ ಮಾಡಿದೆ.
ಬೆಂಗಳೂರಿನ ತುಂಬೆಲ್ಲಾ ಫ್ಲೆಕ್ಸ್, ಬ್ಯಾನರ್‌ಗಳಿಂದ ನಗರಕ್ಕೆ ಕಳಂಕ ತಂದಂತಾಗಿದೆ. ಹೀಗಾದರೆ ಹೂಡಿಕೆದಾರರು ಹೇಗೆ ಬೆಂಗಳೂರಿಗೆ ಬರುತ್ತಾರೆ ಎಂದು ಕೋರ್ಟ್ ಪ್ರಶ್ನಿಸಿದೆ. ಅಷ್ಟೇ ಅಲ್ಲ, ಒಂದು ಅನಧಿಕೃತ ಫ್ಲೆಕ್ಸ್ ಕಂಡರೂ ಬಿಬಿಎಂಪಿ ಹಾಗೂ ರಾಜ್ಯ ಸರ್ಕಾರ ತಲಾ 50 ಸಾವಿರ ರೂಪಾಯಿ ದಂಡ ವಿಧಿಸಬೇಕು ಎಂದು ಸೂಚಿಸಿದೆ. ಮೂರು ವಾರಗಳಲ್ಲಿ ಕ್ರಮ ಕೈಗೊಂಡ ಬಗ್ಗೆ ವರದಿ ನೀಡಬೇಕು ಎಂದೂ ನ್ಯಾಯಮೂರ್ತಿಗಳು ಸೂಚಿಸಿದ್ದಾರೆ.