ಮೈಸೂರು ಜೈಲಲ್ಲಿ ಅಧಿಕಾರಿಗಳಿಗೆ ತಲೆನೋವಾದ ಸ್ಯಾಂಟ್ರೋ ರವಿ
ಮೈಸೂರು; ಸ್ಯಾಂಟ್ರೋ ರವಿ ವರ್ಗಾವಣೆ ದಂಧೆ ಜೊತೆ ವೇಶ್ಯಾವಾಟಿಕೆ, ಮದುವೆಯಾಗಿ ವಂಚನೆ ಸೇರಿ ಹಲವು ಆರೋಪ ಎದುರಿಸುತ್ತಿರುವ ಸ್ಯಾಂಟ್ರೋ ರವಿ ಕಳೆದ ಆರು ತಿಂಗಳಿಂದ ಮೈಸೂರು ಜೈಲಿನಲ್ಲಿರುವುದು ಎಲ್ಲರಿಗೂ ಗೊತ್ತಿರುವ ವಿಚಾರ. ಈತ ಜೈಲಿನಲ್ಲಿ ಅಧಿಕಾರಿಗಳನ್ನು ಹಾಗೂ ಸಹ ವಿಚಾರಣಾಧೀನ ಕೈದಿಗಳನ್ನು ಇನ್ನಿಲ್ಲದಂತೆ ಕಾಡುತ್ತಿದ್ದಾನಂತೆ. ಯಾರ ಮಾತೂ ಕೇಳುತ್ತಿಲ್ಲವಂತೆ. ಅಧಿಕಾರಿಗಳನ್ನು ಬಾಯಿಗೆ ಬಂದಂತೆ ಬೈಯ್ಯುತ್ತಾನಂತೆ. ಇದರಿಂದಾಗಿ ಜೈಲಿನ ಅಧಿಕಾರಿಗಳು ರೋಸಿಹೋಗಿದ್ದಾರೆ. ಸ್ಯಾಂಟ್ರೋ ರವಿಯನ್ನು ಬೆಂಗಳೂರು ಜೈಲಿಗೆ ಶಿಫ್ಟ್ ಮಾಡಿಸುವಂತೆ ಮನವಿ ಮಾಡುತ್ತಿದ್ದಾರೆ.
ಈ ಬಗ್ಗೆ ಮೈಸೂರು ಜಿಲ್ಲಾ ಜೈಲು ಅಧಿಕಾರಿ ದಿವ್ಯಶ್ರೀ ಅವರು ಜಿಲ್ಲಾ ನ್ಯಾಯಾಧೀಶರಿಗೆ ಪತ್ರ ಕೂಡಾ ಬರೆದಿದ್ದಾರೆ. ಪತ್ರದಲ್ಲಿ ಸ್ಯಾಂಟೋ ರವಿ ನಮಗೆ ಗೌರವವೇ ನೀಡುವುದಿಲ್ಲ. ಕಾರಾಗೃಹದ ನಿಯಮಗಳನ್ನು ಕೂಡಾ ಪಾಲನೆ ಮಾಡುತ್ತಿಲ್ಲ. ಏನಾದರೂ ಕೇಳಿದರೆ ಅವಾಚ್ಯ ಶಬ್ದಗಳಿಂದ ಬೈಯ್ಯುತ್ತಾನೆ. ಸಹ ಕೈದಿಗಳು ಜೊತೆಗೂ ವಿನಾಕಾರಣ ಜಗಳ ಕಾಯುತ್ತಾನೆ. ಆತನನ್ನು ನಿಯಂತ್ರಿಸೋದಕ್ಕೆ ಆಗುತ್ತಿಲ್ಲ. ಹೀಗಾಗಿ ಸ್ಯಾಂಟ್ರೋ ರವಿಯನ್ನು ಬೆಂಗಳೂರಿಗೆ ಶಿಫ್ಟ್ ಮಾಡಿಸಿ ಎಂದು ಪತ್ರದಲ್ಲಿ ಮನವಿ ಮಾಡಲಾಗಿದೆ.