ಕೆಜಿ ಹಳ್ಳಿ-ಡಿಜೆ ಹಳ್ಳಿ ಕೇಸ್ ವಾಪಸ್ ವಿಚಾರ; ಗೃಹ ಸಚಿವ ಪರಮೇಶ್ವರ್ ಕೊಟ್ಟ ಉತ್ತರವೇನು..?
ಬೆಂಗಳೂರು; ಕೆಜಿಹಳ್ಳಿ-ಡಿಜೆ ಹಳ್ಳಿ ಪ್ರಕರಣ ಸೇರಿ ಹಲವು ಪ್ರಕರಣಗಳಲ್ಲಿ ಹಲವರ ವಿರುದ್ಧ ದಾಖಲಾಗಿರುವ ಪ್ರಕರಣಗಳನ್ನು ಮರುಪರಿಶೀಲಿಸಿ ನಿಯಮಾನುಸಾರ ಹಿಂಪಡೆಯುವಂತೆ ಮೈಸೂರಿನ ಎನ್.ಆರ್. ಶಾಸಕ ತನ್ವೀರ್ ಸೇಠ್ ಅವರು ಗೃಹ ಸಚಿವ ಪರಮೇಶ್ವರ್‌ಗೆ ಪತ್ರ ಬರೆದಿದ್ದರು. ಇದಕ್ಕೆ ಸ್ಪಂದಿಸಿರುವ ಪರಮೇಶ್ವರ್ ಅಗತ್ಯ ಕ್ರಮ ಕೈಗೊಳ್ಳುವಂತೆ ಸರ್ಕಾರದ ಪ್ರಧಾನ ಕಾರ್ಯದರ್ಶಿಗೆ ಪತ್ರ ಬರೆದಿದ್ದಾರೆ. ಈ ವಿಚಾರ ವಿವಾದಕ್ಕೆ ಕಾರಣವಾಗಿದೆ. ಇದು ವಿವಾದವಾಗುತ್ತಿದ್ದಂತೆ, ಗೃಹ ಸಚಿವ ಪರಮೇಶ್ವರ್ ಅವರು ಸ್ಪಷ್ಟನೆ ಕೊಟ್ಟಿದ್ದಾರೆ.
ಬೆಂಗಳೂರಿನಲ್ಲಿ ಈ ಮಾತನಾಡಿರುವ ಪರಮೇಶ್ವರ್ ಅವರು, ಪ್ರಕರಣದಲ್ಲಿ ಸತ್ಯಾಂಶ ಹಾಗೂ ಕಾನೂನಾತ್ಮಕ ಅಂಶಗಳಿದ್ದ ಮಾತ್ರ ಪರಿಗಣಿಸಲಾಗುತ್ತದೆ. ಹಾಗಂತ ಗಲಭೆ ಆರೋಪಿಗಳ ಕೇಸ್‌ನ್ನು ದಿಢೀರ್ ಅಂತ ವಾಪಸ್ ಪಡೆಯೋದಕ್ಕೆ ಆಗೋದಿಲ್ಲ. ನಾನು ಯಾವುದೇ ಆದೇಶ ನೀಡಿಲ್ಲ. ಟಿಪ್ಪಣಿ ಮಾಡಿದ್ದೇನೆ ಅಷ್ಟೇ. ಪರಿಶೀಲಿಸಿ ಎಂದಷ್ಟೇ ಹೇಳಿದ್ದೇನೆ. ಯಾವುದೇ ಕೇಸ್ ವಾಪಸ್ ಪಡೆಯಬೇಕಾದರೆ ನಾನೊಬ್ಬನೇ ತೀರ್ಮಾನ ಮಾಡಲು ಆಗುವುದಿಲ್ಲ. ಈ ಬಗ್ಗೆ ಸಂಪುಟ ಉಪಸಮಿತಿ ವರದಿ ನೀಡಬೇಕು, ಸಂಪುಟದಲ್ಲಿ ಚರ್ಚೆಯಾಗಬೇಕು. ಅನಂತರವೇ ತೀರ್ಮಾನವಾಗಬೇಕು. ಆದ್ರೆ ಬಿಜೆಪಿಯವರು ಯಾಕೆ ಹೀಗೆಲ್ಲಾ ಮಾತನಾಡುತ್ತಿದ್ದಾರೋ ಗೊತ್ತಿಲ್ಲ ಎಂದು ಪರಮೇಶ್ವರ್ ಹೇಳಿದ್ದಾರೆ.