ಎರಡು ದಿನದೊಳಗೆ ಸ್ಫೋಟಕ್ಕೆ ಸಂಚು; ಸೂಸೈಡ್ ಬಾಂಬರ್ ಕೂಡಾ ರೆಡಿಯಾಗಿದ್ದ..!
ಬೆಂಗಳೂರು; ಸಿಸಿಬಿ ಪೊಲೀಸರು ಸ್ವಲ್ಪ ಯಾಮಾರಿದ್ದರೂ ಬೆಂಗಳೂರಿನಲ್ಲಿ ದೊಡ್ಡ ವಿಧ್ವಂಸಕ ಕೃತ್ಯ ನಡೆದುಹೋಗುವ ಸಂಭವವಿತ್ತು. ಮಾಹಿತಿ ಪ್ರಕಾರ, ಶಂಕಿತ ಉಗ್ರರು ಇನ್ನೆರಡು ದಿನಗಳೊಳಗೆ ಬೆಂಗಳೂರಿನಲ್ಲಿ ಭಾರಿ ಸ್ಫೋಟಕ್ಕೆ ಸಂಚು ರೂಪಿಸಿದ್ದರು ಎನ್ನಲಾಗಿದೆ. ಈ ಕಾರಣಕ್ಕಾಗಿ ಅಂತಿಮ ಹಂತದ ಕಸರತ್ತು ನಡೆಸಿದ್ದರು. ಇದಕ್ಕಾಗಿ ಮನೆಯಲ್ಲಿ ಮೀಟಿಂಗ್ ನಡೆಸಿದ್ದರು. ಇದೇ ವೇಳೆ ಪೊಲೀಸರು ದಾಳೆ ನಡೆಸಿ, ಶಂಕಿತ ಉಗ್ರರನ್ನು ಬಂಧಿಸಿದ್ದಾರೆ.
ಸಿಕ್ಕಿಬಿದ್ದಿರುವ ಆರೋಪಿಗಳಲ್ಲೊಬ್ಬರು ಸೂಸೈಡ್ ಬಾಂಬರ್ ಆಗಿದ್ದ. ಮೆಜೆಸ್ಟಿಕ್ ನಂತಹ ಜನನಿಬಿಡ ಸ್ಥಳದಲ್ಲಿ ತನ್ನನ್ನು ತಾನು ಸ್ಫೋಟಿಸಿಕೊಂಡು ಭಾರಿ ಪ್ರಾಣಹಾನಿಗೆ ಆತ ಸಜ್ಜಾಗಿದ್ದ ಎನ್ನಲಾಗಿದೆ. ಜೊತೆಗೆ ಗ್ರನೇಡ್ ದಾಳಿಗೂ ಕೂಡಾ ಶಂಕಿತ ಉಗರು ತಯಾರಿ ನಡೆಸಿದ್ದರು ಎಂದು ಹೇಳಲಾಗುತ್ತಿದೆ. ಹೀಗಾಗಿ, ಪೊಲೀಸರು ಖಚಿತ ಮಾಹಿತಿಯೊಂದಿಗೆ ಸೂಕ್ತ ಸಮಯದಲ್ಲಿ ದಾಳಿ ನಡೆಸಿ, ಆಗಬಹುದಾಗಿದ್ದ ದೊಡ್ಡ ಅನಾಹುತವನ್ನು ತಪ್ಪಿಸಿದ್ದಾರೆ.
ಬಂಧಿತರಿಂದ 7 ಕಂಟ್ರಿ ಮೇಡ್ ಪಿಸ್ತೂಲ್, 45 ಗಡುಗಳು, ಎರಡು ವಾಕಿಟಾಕಿ ವಶಪಡಿಸಿಕೊಂಡಿದ್ದಾರೆ. 2008ರಲ್ಲಿ ನಡೆದ ಸರಣಿ ಸ್ಫೋಟ ಪ್ರಕರಣದ ಆರೋಪಿ ಟಿ.ನಜೀರ್ ಎಂಬಾತನೇ ಇವರನ್ನು ಸಜ್ಜು ಮಾಡಿದ್ದ ಎಂದು ತಿಳಿದುಬಂದಿದೆ. ಸದ್ಯ ಆತ ಜೈಲಿನಲ್ಲಿದ್ದು, ಅಲ್ಲಿಂದಲೇ ಎಲ್ಲವನ್ನೂ ನಿಭಾಯಿಸುತ್ತಿದ್ದ ಎನ್ನಲಾಗಿದೆ. ಮತ್ತೊಬ್ಬ ಉಗ್ರ ತಲೆಮೆರೆಸಿಕೊಂಡು ವಿದೇಶದಲ್ಲಿದ್ದಾನೆ. ಅವರ ಸಂಪರ್ಕ ಕೂಡಾ ಹೊಂದಿದ್ದು, ಆತನೇ ಹಣ ಹಾಗೂ ಸ್ಫೋಟಕಗಳನ್ನು ಸಪ್ಲೈ ಮಾಡಿದ್ದಾನೆ ಎಂದು ತಿಳಿದುಬಂದಿದೆ. ಆರ್ ಟಿ ನಗರ ಕೇಸಲ್ಲಿ ಎ1 ಆರೋಪಿಯಾಗಿದ್ದ ಶಂಕಿತ ಉಗ್ರ ಜುನೈದ್ ಅಹಮದ್, ವಿದೇಶದಲ್ಲಿ ತಲೆ ಮರೆಸಿಕೊಂಡಿದ್ದಾನೆ. ಜುನೈದ್ ಅಹಮದ್ ಹಾಗೂ ಟಿ ನಾಜಿರ್ ಸೂಚನೆಯಂತೆ ಶಂಕಿತ ಉಗ್ರರು ತಯಾರಿ ಮಾಡಿಕೊಳ್ಳುತ್ತಿದ್ದರು ಎನ್ನಲಾಗಿದೆ.