ಈಶ್ವರಪ್ಪ ಪ್ರೀತಿಯಿಂದ ಹಾಗೆ ಹೇಳಿದ್ದಾರೆ; ಮುರುಗೇಶ್ ನಿರಾಣಿ ಪ್ರತಿಕ್ರಿಯೆ
ಬಾಗಲಕೋಟೆ: ಸಚಿವ ಈಶ್ವರಪ್ಪ ಅವರು ನನ್ನ ಮೇಲಿನ ಪ್ರೀತಿಯಿಂದ ಮುಂದೆ ನೀವು ಸಿಎಂ ಆಗುತ್ತೀರಿ ಎಂದು ಹೇಳಿದ್ದಾರೆ. ಆದರೆ ಸದ್ಯ ಬಸವರಾಜ ಬೊಮ್ಮಾಯಿಯವರು ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದ್ದಾರೆ ಎಂದು ಸಚಿವ ಮುರುಗೇಶ್ ನಿರಾಣಿ ಪ್ರತಿಕ್ರಿಯೆ ನೀಡಿದ್ದಾರೆ.
ನಿನ್ನೆ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ್ದ ಸಚಿವ ಈಶ್ವರಪ್ಪ, ಮುರುಗೇಶ್ ನಿರಾಣಿ ಮುಂದೆ ಸಿಎಂ ಆಗುತ್ತಾರೆ. ಆ ಅರ್ಹತೆ ಅವರಿಗಿದೆ ಎಂದು ಹೇಳಿದ್ದರು. ಇದಕ್ಕೆ ಪ್ರತಿಕ್ರಿಯೆ ನೀಡಿದ ಮುರುಗೇಶ್ ನಿರಾಣಿ, ನಿನ್ನೆ ನನ್ನ ತವರು ಕ್ಷೇತ್ರವಾದ ಬೀಳಗಿಯಲ್ಲಿ ಬಿಜೆಪಿಯ ಹಿಂದುಳಿದ ವರ್ಗಗಳ ಮೊರ್ಚಾ ಸಭೆಯನ್ನು ಆಯೋಜಿಸಲಾಗಿತ್ತು . ಆ ವೇಳೆ ಮಾತನಾಡುವಾಗ ಈಶ್ವರಪ್ಪನವರು ನಾನು ಮುಂದಿನ ಸಿಎಂ ಎಂದು ಹೇಳಿದ್ದರು. ಇದು ಮಾಧ್ಯಮಗಳಲ್ಲಿ ವರದಿಯಾಗಿರುವುದನ್ನು ಗಮನಿಸಿದ್ದೇನೆ. ಆದರೆ ಈಗ ಬಸವರಾಜ ಬೊಮ್ಮಾಯಿಯವರು ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಈಶ್ವರಪ್ಪ ಅವರು ನನ್ನ ಮೇಲಿನ ಅಭಿಮಾನದಿಂದ ಹಾಗೆ ಹೇಳಿರಬಹುದು ಎಂದು ಸ್ಪಷ್ಟನೆ ನೀಡಿದ್ದಾರೆ.
ಕಳೆದ 5 ದಶಕಗಳಿಂದ ರಾಜ್ಯದಲ್ಲಿ ಮಾಜಿ ಸಿಎಂ ಹಾಗೂ ನಮ್ಮ ನಾಯಕರಾದ ಯಡಿಯೂರಪ್ಪ, ಕೇಂದ್ರ ಮಾಜಿ ಸಚಿವ ದಿವಂಗತ ಅನಂತಕುಮಾರ್ ಅವರ ಜೊತೆ ಈಶ್ವರಪ್ಪನವರು ರಾಜ್ಯದಲ್ಲಿ ಪಕ್ಷವನ್ನು ಕಟ್ಟಿ ಬೆಳೆಸಿದ್ದಾರೆ. ಅವರೊಬ್ಬ ಹಿರಿಯ ನಾಯಕರು. ನನ್ನ ಮೇಲಿನ ಅಭಿಮಾನಕ್ಕೆ ನಾನು ಅವರಿಗೆ ಚಿರರುಣಿ ಎಂದು ನಿರಾಣಿ ಅವರು ಭಾವುಕರಾಗಿ ಹೇಳಿದರು.
ನನಗೆ ಹಿಂದಿನ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಗಣಿ ಖಾತೆಯನ್ನು ನೀಡಿದ್ದರು. ಈಗ ಬಸವರಾಜ ಬೊಮ್ಮಾಯಿ ಅವರು ಕೈಗಾರಿಕೆ ಖಾತೆಯನ್ನು ನೀಡಿದ್ದಾರೆ. ಯಾವುದೇ ಖಾತೆ ನೀಡಿದರೂ ನಾನು ತೃಪ್ತಿಯಿಂದ ಕೆಲಸ ಮಾಡುತ್ತೇನೆ. ಈಗಲೂ ಅತ್ಯಂತ ಸಂತೋಷದಿಂದ ಇಲಾಖೆಯನ್ನು ನಿರ್ವಹಣೆ ಮಾಡುತ್ತಿದ್ದೇನೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಮುಂಬರುವ 2023ರ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿಯನ್ನು ಸ್ವಂತ ಬಲದ ಮೇಲೆ ಅಧಿಕಾರಕ್ಕೆ ತರುವುದೇ ನಮ್ಮ ಮುಂದಿನ ಗುರಿ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಮುರುಗೇಶ್ ನಿರಾಣಿ ಇಂದಿಲ್ಲಿ ಹೇಳಿದರು.