SSLC ಫೇಲಾದ ವಿದ್ಯಾರ್ಥಿಗಳಿಗೆ ನೆರವಾದ SI; ಪೂರಕ ಪರೀಕ್ಷೆಗೆ ತರಬೇತಿ, ಬಹುತೇಕರು ಪಾಸ್
ಬೆಂಗಳೂರು; ಪೊಲೀಸ್ ಅಧಿಕಾರಿಗಳೆಂದರೆ ಬೇರೆಯದೇ ಭಾವನೆ ಜನರ ಮನಸ್ಸಿನಲ್ಲಿದೆ. ಆದ್ರೆ ಇಲ್ಲೊಬ್ಬರು ಪೊಲೀಸ್ ಅಧಿಕಾರಿ ತನ್ನ ಕರ್ತವ್ಯವನ್ನು ನಿಷ್ಠೆಯಿಂದ ಮಾಡುವುದಲ್ಲದೆ, ಸಮಾಜಮುಖಿ ಕಾರ್ಯದಲ್ಲೂ ತೊಡಗಿಕೊಂಡಿದ್ದಾರೆ. ಬೆಂಗಳೂರಿನ ಬಂಡೆಪಾಳ್ಯ ಪೊಲೀಸ್ ಠಾಣೆಯ ಇನ್ಸ್‌ಪೆಕ್ಟರ್ ಎಲ್.ವೈ.ರಾಜೇಶ್ ಅವರು ಎಸ್‌ಎಸ್‌ಎಲ್‌ಸಿಯಲ್ಲಿ ಫೇಲಾದ ವಿದ್ಯಾರ್ಥಿಗಳಿಗೆ ನೆರವಾಗಿದ್ದಾರೆ. ಅವರಿಗೆ ಕೋಚಿಂಗ್ ಕೊಡಿಸಿ, ಅವರ ಬಾಳಲ್ಲಿ ಬೆಳಕಾಗಿದ್ದಾರೆ.
ಅವರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಒಂದಷ್ಟು ಹುಡುಗರು ಅಡ್ಡದಾರಿ ಹಿಡಿಯುತ್ತಿದ್ದುದನ್ನು ಎಸ್‌ಐ ರಾಜೇಶ್ ಅವರು ಗಮನಿಸಿದ್ದರು. ಕಾರಣ ನೋಡಿದಾಗ ಅವರೆಲ್ಲಾ ಎಸ್‌ಎಸ್‌ಎಲ್‌ಸಿ ಫೇಲಾಗಿದ್ದರು. ಹೀಗೆ ಬಂಡೆಪಾಳ್ಯ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ 70 ವಿದ್ಯಾರ್ಥಿಗಳು ಎಸ್‌ಎಸ್‌ಎಲ್‌ಸಿ ಫೇಲಾಗಿರುವುದು ಕಂಡುಬಂತು. ಅವರೆಲ್ಲರನ್ನೂ ಓದುವುದಕ್ಕೆ ಪ್ರೇರೇಪಿಸಿದ ಎಸ್‌ಐ ರಾಜೇಶ್ ಅವರು, ಅವರಿಗೆ ಕೋಚಿಂಗ್ ಕೂಡಾ ಕೊಡಿಸಿದ್ದಾರೆ. ಸ್ಥಳೀಯ ಶಿಕ್ಷಕರನ್ನು ಮಾತಾಡಿ, ಅವರಿಂದ ಕೋಚಿಂಗ್ ಕೊಡಿಸಿದ್ದಾರೆ. ಸುಮಾರು ಒಂದು ತಿಂಗಳ ಕಾಲ 70 ವಿದ್ಯಾರ್ಥಿಗಳಿಗೆ ಕೋಚಿಂಗ್ ಕೊಡಿಸಿದ್ದು, ಊಟದ ವ್ಯವಸ್ಥೆಯನ್ನೂ ಮಾಡಿಸಿದ್ದಾರೆ. ಇದರಿಂದಾಗಿ ಪೂರಕ ಪರೀಕ್ಷೆಯಲ್ಲಿ ಬಹುತೇಕ ವಿದ್ಯಾರ್ಥಿಗಳು ಪಾಸಾಗಿದ್ದಾರೆ. ಎಲ್ಲಾ ವಿಷಯಗಳಲ್ಲೂ ಫೇಲಾಗಿದ್ದ ವಿದ್ಯಾರ್ಥಿಯೊಬ್ಬ ಪೂರಕ ಪರೀಕ್ಷೆಯಲ್ಲಿ ಎಲ್ಲವನ್ನೂ ಪಾಸ್ ಮಾಡಿರುವುದು ವಿಶೇಷ.
ಈ ಮಾಹಿತಿ ಅರಿತು ರಾಜಾಜಿನಗರದ ಶಾಸಕ ಸುರೇಶ್ ಕುಮಾರ್ ಅವರು ಬಂಡೇಪಾಳ್ಯ ಪೊಲೀಸ್ ಠಾಣೆಗೆ ಭೇಟಿ ನೀಡಿದ, ಎಸ್‌ಐ ರಾಜೇಶ್ ಅವರನ್ನು ಅಭಿನಂದಿಸಿದ್ದಾರೆ.