ರಾಹುಲ್ ಮೇಲ್ಮನವಿ ಅರ್ಜಿ ವಜಾ; ಕಾಂಗ್ರೆಸ್ನಿಂದ ಗಾಂಧಿ ಪ್ರತಿಮೆ ಬಳಿ ಪ್ರತಿಭಟನೆ
ಬೆಂಗಳೂರು; ಮಾನಹಾನಿ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಸಲ್ಲಿಸಿದ್ದ ಮೇಲ್ಮನವಿ ಅರ್ಜಿಯನ್ನು ಗುಜರಾತ್ ಹೈಕೋರ್ಟ್ ವಜಾ ಮಾಡಿದೆ. ಇದರಿಂದಾಗಿ, ರಾಹುಲ್ ಗಾಂಧಿಗೆ ಕಾನೂನು ಸಂಕಷ್ಟ ಎದುರಾಗಿದೆ. ಈ ನಡುವೆ ರಾಜ್ಯ ಕಾಂಗ್ರೆಸ್ ನಾಯಕರು ನಾವು ರಾಹುಲ್ ಗಾಂಧಿ ಪರ ನಿಲ್ಲುತ್ತೇವೆ. ಬಿಜೆಪಿಯವರ ಕುತಂತ್ರದ ವಿರುದ್ಧ ಹೋರಾಟ ಮಾಡುತ್ತೇವೆ ಎಂದು ಹೇಳಿದ್ದಾರೆ.
ಇಂದು ದಿಢೀರ್ ಸುದ್ದಿಗೋಷ್ಠಿ ನಡೆಸಿದ ಕೆಪಿಸಿಸಿ ಅಧ್ಯಕ್ಷ ಹಾಗೂ ಡಿಸಿಎಂ ಡಿ.ಕೆ.ಶಿವಕುಮಾರ್, ದೇಶದ ಐಕ್ಯತೆ, ಸಮಗ್ರತೆ, ದೇಶದಲ್ಲಿ ಶಾಂತಿಯನ್ನು ಮೂಡಿಸಲು ರಾಹುಲ್ ಗಾಂಧಿಯವರು ಭಾರತ್ ಜೋಡೋ ಯಾತ್ರೆ ಮಾಡಿದ್ದರು. ಬೆಲೆ ಏರಿಕೆ, ನಿರುದ್ಯೋಗ ತಡೆಗಟ್ಟಲು ಹೋರಾಟ ಮಾಡುತ್ತಿದ್ದರು. ಆದ್ರೆ ಅವರನ್ನು ರಾಜಕೀಯವಾಗಿ ಕುಗ್ಗಿಸುವ ಪ್ರಯತ್ನ ಮಾಡುತ್ತಿದ್ದಾರೆ. ಜನರು ಇದಕ್ಕೆ ಪೂರಕವಾದ ಉತ್ತರವನ್ನು ಕೊಡುತ್ತಾರೆ ಎಂದು ಹೇಳಿದ್ದಾರೆ.
ಬಿಜೆಪಿಯವರ ದೋರಣೆಯನ್ನು ನಾನು ಖಂಡಿಸುತ್ತೇನೆ. ಬಿಜೆಪಿಯವರು ಅಧಿಕಾರ ದುರುಪಯೋಗಪಡಿಸಿಕೊಳ್ಳುತ್ತಿದ್ದಾರೆ. ಇದರ ವಿರುದ್ಧ ನಾವು ಹೋರಾಟ ಮಾಡುತ್ತೇವೆ. ಎಲ್ಲಾ ಕಾಂಗ್ರೆಸ್ ಶಾಸಕರು ಇಂದು ಮಧ್ಯಾಹ್ನ 3.30ಗಂಟೆಗೆ ಗಾಂಧಿ ಪ್ರತಿಮೆ ಬಳಿ ಪ್ರತಿಭಟನೆ ಮಾಡುತ್ತೇವೆ. ರಾಜ್ಯದ ಪ್ರಮುಖ ಕೇಂದ್ರಗಳಲ್ಲೂ ನಮ್ಮ ಮುಖಂಡರು ಪ್ರತಿಭಟನೆ ಮಾಡಲಿದ್ದಾರೆ ಎಂದು ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.
ಮೋದಿ ಉಪನಾಮದ ಬಗ್ಗೆ ಕಳೆದ ಲೋಕಸಭಾ ಚುನಾವಣೆ ಪ್ರಚಾರದ ವೇಳೆ ಕೋಲಾರದಲ್ಲಿ ಭಾಷಣ ಮಾಡುವಾಗ ರಾಹುಲ್ ಗಾಂಧಿ ಲೇವಡಿ ಮಾಡಿದ್ದರು. ಈ ಹಿನ್ನೆಲೆಯಲ್ಲಿ ಮೋದಿ ಉಪನಾಮವಿರುವ ಬಿಜೆಪಿ ಶಾಸಕರೊಬ್ಬರು ಸೂರತ್ ಕೋರ್ಟ್ನಲ್ಲಿ ಮಾನನಷ್ಟ ಮೊಕದ್ದಮೆ ಹೂಡಿದ್ದರು. ಈ ಸಂಬಂಧ ತೀರ್ಪು ನೀಡಿದ್ದ ಕೋರ್ಟ್, ರಾಹುಲ್ ಗಾಂಧಿಗೆ ಎರಡು ವರ್ಷ ಜೈಲು ಶಿಕ್ಷೆ ವಿಧಿಸಿತ್ತು. ಇದರಿಂದ ಅವರು ಲೋಕಸಭಾ ಸದಸ್ಯತ್ವದಿಂದ ಅನರ್ಹಗೊಂಡಿದ್ದಾರೆ. ಹೀಗಾಗಿ ಅವರು ಹೈಕೋರ್ಟ್ಗೆ ಮೇಲ್ಮನವಿ ಸಲ್ಲಿಸಿದ್ದಾರೆ.