BengaluruInternational

ಒಕ್ಕಲಿಗರ ಪರಿಷತ್‌ ಆಫ್‌ ಅಮೆರಿಕ ಸಮ್ಮೇಳನ; ಡಿಸಿಎಂ ಡಿಕೆಶಿ ಹೇಳಿದ್ದೇನು..?

ಬೆಂಗಳೂರು; ಒಕ್ಕಲಿಗ ಪರಿಷತ್ ಆಫ್ ಅಮೆರಿಕದ 17ನೇ ಸಮ್ಮೇಳನದಲ್ಲಿ ವರ್ಚುವಲ್ ಮೂಲಕ ಡಿಸಿಎಂ ಡಿ.ಕೆ. ಶಿವಕುಮಾರ್ ಭಾಗವಹಿಸಿದ್ದರು. ವರ್ಚುಯಲ್‌ ಮೂಲಕ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಡಿ.ಕೆ.ಶಿವಕುಮಾರ್‌, ಇದೊಂದು ಐತಿಹಾಸಿಕ ದಿನ. ಜತೆಗೂಡುವುದು ಆರಂಭ, ಜತೆಗೂಡಿ ಆಲೋಚಿಸುವುದು ಪ್ರಗತಿ, ಜತೆಗೂಡಿ ಕೆಲಸ ಮಾಡುವುದು ಪ್ರಗತಿ ಎಂಬ ಮಾತನ್ನು ಆಗಾಗ್ಗೆ ಹೇಳುತ್ತಿರುತ್ತೇನೆ. ಆದೇ ರೀತಿ ನೀವು 1991ರಿಂದ ಒಕ್ಕಲಿಗ ಸಮುದಾಯದ ಜನ ಅಮೆರಿಕದಲ್ಲಿ ಸಂಘಟನೆ ಮಾಡಿಕೊಂಡು ಕೆಲಸ ಮಾಡುತ್ತಿದ್ದೀರಿ ಎಂದರು.

ಈ ವಿಶಿಷ್ಟ ಪ್ರಯತ್ನಕ್ಕೆ ಮುಂದಾದವರಿಗೆ ನಾನು ಅಭಿನಂದಿಸುತ್ತೇನೆ. ನೀವು ನಮ್ಮ ರಾಯಭಾರಿಗಳು ಎಂದ ಡಿಕೆಶಿ, ನೀರು, ಗಾಳಿ, ಅಗ್ನಿ, ಸೂರ್ಯ, ಗಿಡ ಮರಗಳಿಗೆ ಜಾತಿ ಇಲ್ಲ. ನಾವು ಹುಟ್ಟು ಹಾಕಿಕೊಂಡಿದ್ದೇವೆ ಎಂದರು.

ಕುವೆಂಪು ಅವರು ಹೇಳಿದ ವಿಶ್ವ ಮಾನವ ತತ್ವವನ್ನು ನಾವು ಎಷ್ಟೇ ಅನುಸರಿಸಿದರು, blood is thicker than water ಎಂಬಂತೆ ಜಾತಿ, ಸಮುದಾಯ ಎಂಬುದು ನಮ್ಮ ವ್ಯವಸ್ಥೆಯಲ್ಲಿ ಸೇರಿಕೊಂಡಿದೆ. ಮನುಷ್ಯನಿಗೆ ನಂಬಿಕೆ ಬಹಳ ಮುಖ್ಯ. ನಮ್ಮ ಸಮಾಜ, ಮಠ, ಭಾಷೆ, ನೆಲ ಜಲ ಕಾಪಾಡಲು ನಾವು ಶ್ರಮಿಸಿ, ಹೊರ ದೇಶದಲ್ಲಿ ನಮಗೆ ಹೆಸರು ತಂದಿದ್ದೀರಿ. ಕೆಲ ದಿನಗಳಲ್ಲಿ ಅಧಿವೇಶನ ನಡೆಯಲಿದ್ದು, ಬಜೆಟ್ ಮಂಡನೆ ಆಗಲಿದೆ. ಹೀಗಾಗಿ ನಾನು ಈ ಕಾರ್ಯಕ್ರಮಕ್ಕೆ ನೇರವಾಗಿ ಭಾಗವಹಿಸಲು ಆಗಿಲ್ಲ. ಜನ ನಮ್ಮ ಮೇಲೆ ವಿಶ್ವಾಸ ಇಟ್ಟು, ಅಧಿಕಾರ ಕೊಟ್ಟಿದ್ದಾರೆ. ಅವರ ನಂಬಿಕೆ ಉಳಿಸಿಕೊಂಡು ಕೆಲಸ ಮಾಡಬೇಕು. ನನಗೆ ನೀರಾವರಿ, ಬೆಂಗಳೂರು ನಗರಾಭಿವೃದ್ಧಿ ಇಲಾಖೆ ಜವಾಬ್ದಾರಿ ನೀಡಲಾಗಿದೆ. ಚೆಲುವರಾಯಸ್ವಾಮಿ ಅವರಿಗೆ ಕೃಷಿ ಇಲಾಖೆ ಜವಾಬ್ದಾರಿ ನೀಡಲಾಗಿದೆ ಎಂದು ಹೇಳಿದರು.

ಬೆಂಗಳೂರು ನಗರವನ್ನು ಇಡೀ ವಿಶ್ವ ಗಮನಿಸುತ್ತಿದೆ.  ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಶಂಕುಸ್ಥಾಪನೆ ಸಮಯದಲ್ಲಿ ಅಟಲ್ ಬಿಹಾರಿ ವಾಜಪೇಯಿ ಅವರು ಬೆಂಗಳೂರಿನ ಬಗ್ಗೆ ಮಾತನಾಡುತ್ತಾ, ವಿಶ್ವದ ನಾಯಕರು ಮೊದಲು ದೆಹಲಿಗೆ ಬಂದು ನಂತರ ದೇಶದ ಬೇರೆ ಪ್ರದೇಶಗಳಿಗೆ ಹೋಗುತ್ತಿದ್ದರು. ಈಗ ಮೊದಲು ಬೆಂಗಳೂರಿಗೆ ಬಂದು ನಂತರ ದೇಶದ ಬೇರೆ ನಗರಗಳಿಗೆ ಹೋಗುತ್ತಿದ್ದಾರೆ. ಬೇರೆ ದೇಶಗಳು ಬೆಂಗಳೂರಿನ ಮೂಲಕ ಭಾರತವನ್ನು ನೋಡುತ್ತಿವೆ ಎಂದು ಬಣ್ಣಿಸಿದ್ದರು.

ಬೆಂಗಳೂರು ನಗರವನ್ನು ಗ್ಲೋಬಲ್ ಬೆಂಗಳೂರು ಆಗಿ ಪರಿವರ್ತಿಸಲು, ಕರ್ನಾಟಕ ರಾಜ್ಯ ಹಾಗೂ ಬೆಂಗಳೂರು ಹಿರಿಮೆ ಮರುಸ್ಥಾಪಿಸಬೇಕು. ಇದಕ್ಕಾಗಿ ನಾವು ಸಾರ್ವಜನಿಕರ ಸಲಹೆ ಕೇಳುತ್ತಿದ್ದ, ನೀವುಗಳು ಕೂಡ ನಿಮ್ಮ ಸಲಹೆಗಳನ್ನು ನೀಡಬೇಕು. ನಮ್ಮ ಇತಿಹಾಸ ಮರೆಯಬಾರದು. ನಾವು ಬೆಂಗಳೂರಿನ ವಿಚಾರದಲ್ಲಿ ಮೂರು K ಗಳನ್ನ ಮರೆಯಬಾರದು. ಬೆಂಗಳೂರು ಕಟ್ಟಿದ ಕೆಂಪೇಗೌಡ, ವಿಧಾನಸೌಧ ಕಟ್ಟಿದ ಕೆಂಗಲ್ ಹನುಮಂತಯ್ಯ ಹಾಗೂ ಐಟಿ ಬಿಟಿ ನಗರ ಮಾಡಿದ ಎಸ್.ಎಂ ಕೃಷ್ಣ ಅವರನ್ನು ಸದಾ ಸ್ಮರಿಸಬೇಕು ಎಂದರು.

 

Share Post