ಮೃತ ಸನ್ಯಾಸಿ ಮನೆಯಲ್ಲಿ ಸಿಕ್ತು ಕಂತೆ ಕಂತೆ ಹಣ; ಭಕ್ತರಿಗೆ ಅಚ್ಚರಿ!
ಚಿತ್ರದುರ್ಗ; ಸನ್ಯಾಸಿಯೊಬ್ಬರು ಇತ್ತೀಚೆಗೆ ಮೃತಪಟ್ಟಿದ್ದರು. ಇದೀಗ ಅವರ ಮನೆಯಲ್ಲಿ ಭಾರಿ ಮೊತ್ತದ ಹಣ ಸಿಕ್ಕಿದ್ದು ಭಕ್ತರ ಅಚ್ಚರಿಗೆ ಕಾರಣವಾಗಿದೆ. ಚಿತ್ರದುರ್ಗ ಜಿಲ್ಲೆ ಹೊಳಲ್ಕೆರೆಯಲ್ಲಿ ವಾಸವಿದ್ದ ಗಂಗಾಧರ ಶಾಸ್ತ್ರಿ ಎಂಬ ಸನ್ಯಾಸಿ ಇತ್ತೀಚೆಗೆ ಮೃತಪಟ್ಟಿದ್ದರು. ಅವರ ಮನೆಯಲ್ಲಿ ಭಕ್ತರು ಪರಿಶೀಲನೆ ನಡೆಸಿದಾಗ 30 ಲಕ್ಷ ರೂಪಾಯಿಗೂ ಅಧಿಕ ಹಣ ಸಿಕ್ಕಿದೆ.
ಗಂಗಾಧರ ಶಾಸ್ತ್ರಿಗಳು ಶಾಸ್ತ್ರ ಹೇಳುತ್ತಿದ್ದರು, ಜೊತೆಗೆ ಶುಭಕಾರ್ಯಗಳಿಗೆ ಪೂಜೆ ಮಾಡಿಸುತ್ತಿದ್ದರು. ಇದರ ಜೊತೆಗೆ ಅವರಿಗೆ 16 ಎಕರೆ ಜಮೀನು ಕೂಡಾ ಇದೆ. ಇದರಲ್ಲಿ 4 ಎಕರೆಯಲ್ಲಿ ತೆಂಗಿನ ತೋಟ, ಇದ್ದರೆ ಉಳಿದದ್ದು ಗದ್ದೆ ಕೂಡಾ ಇದೆ. ಕೃಷಿ ಮತ್ತಿತರ ಆದಾಯದಿಂದ ಅವರು ಇಷ್ಟೊಂದು ಹಣ ಸಂಪಾದಿಸಿರಬಹುದು ಎಂದು ತಿಳಿದುಬಂದಿದೆ. ಅವರು ಹಣವನ್ನು ಬ್ಯಾಂಕ್ ಮತ್ತಿತರೆ ಕಡೆ ಇಡದೆ ಮನೆಯಲ್ಲಿ ಅಲ್ಲಲ್ಲಿ ಅವಿತಿಟ್ಟಿದ್ದರು. ಅವರು ಒಬ್ಬರೇ ವಾಸಿಸುತ್ತಿದ್ದರಿಂದ ಯಾರಿಗೂ ಈ ವಿಚಾರ ಗೊತ್ತಿರಲಿಲ್ಲ.
ಇನ್ನು ಭಕ್ತರು ಕೊಟ್ಟಿದ್ದ ಕಾಣಿಕೆ ಹಣವೇ 46 ಸಾವಿರ ರೂಪಾಯಿಗೂ ಅಧಿಕವಿದೆ ಎಂದು ತಿಳಿದುಬಂದಿದೆ. ಸದ್ಯ ಅವರ ಭಕ್ತರು ಒಂದು ಸಮಿತಿಯನ್ನು ರಚನೆ ಮಾಡಿದಲು ನಿರ್ಧರಿಸಿದ್ದಾರೆ. ಅದಕ್ಕಾಗಿ ಜುಲೈ 7 ರಂದು ಭಕ್ತರ ಸಭೆ ಕೂಡಾ ನಡೆಸಲು ತೀರ್ಮಾನ ಮಾಡಿದ್ದಾರೆ. ಇನ್ನು ಗಂಗಾಧರ ಶಾಸ್ತ್ರಿಗಳ ಗದ್ದುಗೆ ನಿರ್ಮಾಣಕ್ಕೂ ಸಿದ್ಧತೆಗಳು ನಡೆದಿವೆ.