ಚಿತ್ರ ಸಾಹಿತಿ ಕವಿರಾಜ್ ಕೂಡಾ ಲೈಂಗಿಕ ದೌರ್ಜನ್ಯಕ್ಕೆ ಒಳಗಾಗಿದ್ದರಂತೆ..!; ಹೇಗೆ ಗೊತ್ತಾ..?
ಬೆಂಗಳೂರು; ನಾನು ಕೂಡಾ ಲೈಂಗಿಕ ದೌರ್ಜನ್ಯ ಒಳಗಾಗಿದ್ದೆನಾ ಎಂದು ಚಿತ್ರ ಸಾಹಿತಿ ಕವಿರಾಜ್ ತಮ್ಮನ್ನು ತಾವು ಪ್ರಶ್ನೆ ಮಾಡಿಕೊಂಡಿದ್ದಾರೆ. ಇದಕ್ಕೆ ಕಾರಣ ಕೋರ್ಟ್ ಒಂದರ ತೀರ್ಪು. ಬರ್ತೀಯಾ ಎಂದು ಕೇಳಿದರೆ ಅದು ಲೈಂಗಿಕ ದೌರ್ಜನ್ಯವಾಗುತ್ತದೆ ಎಂದು ಕೋರ್ಟ್ ತೀರ್ಪು ನೀಡಿದೆ. ಈ ಹಿನ್ನೆಲೆಯಲ್ಲಿ ಅವರಿಗೆ ಈ ಪ್ರಶ್ನೆ ಎದ್ದಿದೆ.
ಈ ಬಗ್ಗೆ ಕವಿರಾಜ್ ಅವರು ತಮ್ಮ ಫೇಸ್ ಬುಕ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ. ನಾನು ಆಗಿನ್ನು ನಮ್ಮ ಹಳ್ಳಿಯಿಂದ ಕೆಂಪು ಬಸ್ಸು ಹತ್ತಿ ಬೆಂಗಳೂರಿಗೆ ಬಂದಿದ್ದೆ. ಮೆಜೆಸ್ಟಿಕ್ ಒಂದು ಬಿಟ್ಟರೆ ಬೇರೇನು ಗೊತ್ತಿರಲಿಲ್ಲ. ಒಂದಷ್ಟು ದಿನ ರಾಜಾಜಿನಗರದಿಂದ ಬಸ್ ಹತ್ತಿ ಮೆಜೆಸ್ಟಿಕ್ ಹೋಗೋದು. ಅದೇ ಪ್ಲಾಟ್ ಫಾರ್ಮ್ ಅಲ್ಲಿ ಸ್ವಲ್ಪ ಹೊತ್ತು ಕುಳಿತು ಮತ್ತೆ ರಾಜಾಜಿನಗರ ಬಸ್ ಹತ್ತಿ ವಾಪಾಸು ಹೋಗೋದು ನನ್ನ ಟೈಂ ಪಾಸ್ ಹವ್ಯಾಸವಾಗಿತ್ತು. ಒಂದು ದಿನ ಹಾಗೇ ಕುಳಿತಿದ್ದಾಗ ಎದುರಿನ ಪ್ಲಾಟ್ ಫಾರಂನಿಂದ ಒಬ್ಬ ಹೆಂಗಸು ನನ್ನನ್ನೇ ಗುರಾಯಿಸುತ್ತಿದ್ದಳು. ಅವಳ್ಯಾಕೆ ಹಾಗೇ ನನ್ನನ್ನೇ ನೋಡುತ್ತಿದ್ದಾಳೆ ಎಂದು ನಾನು ಒಂದೆರಡು ಸಲ ಓರೆಗಣ್ಣಲ್ಲಿ ನೋಡಿದೆ. ಸ್ವಲ್ಪ ಭಯವೂ ಆಗತೊಡಗಿತು. ಸ್ವಲ್ಪ ಹೊತ್ತಿಗೆ ಆ ಹೆಂಗಸು ನನ್ನ ಬಳಿಗೆ ಬಂದು ನಿಂತು ಬಿಟ್ಟಳು. ಭಯ ಜಾಸ್ತಿಯೇ ಆಯಿತು. ಹೆಂಗಸು ಮೆಲುದನಿಯಲ್ಲಿ ‘ಬರ್ತಿಯಾ?’ ಎಂದಳು. ನಾನು ಅಮಾಯಕವಾಗಿ ಉಗುಳು ನುಂಗಿ ‘ಎಲ್ಲಿಗೆ?’ ಎಂದೆ. ಹೆಂಗಸು ಕೋಪದಿಂದ ನನ್ನನ್ನೇ ದಿಟ್ಟಿಸಿ ‘ಥೂ’ ಎಂದು ಉಗಿದು ಹೊರಟೇ ಬಿಟ್ಟಳು. ನನಗೇ ಏನೆಂದರೇ ಏನೂ ಅರ್ಥವಾಗದೆ ಗೊಂದಲದ ಜೊತೆಗೆ ಒಂಥರಾ ಅವಮಾನವಾಯಿತು.
ಹೀಗಂತ ಕವಿರಾಜ್ ಬರೆದುಕೊಂಡಿದ್ದಾರೆ. ಬರ್ತೀಯಾ ಎಂಬ ಪದ ಲೈಂಗಿಕ ದೌರ್ಜನ್ಯಕ್ಕೆ ಸಂಬಂಧಿಸಿದ್ದಾ..? ಈ ಪದ ಯಾವಾಗ ಬಳಸಿದರೆ ದೌರ್ಜನ್ಯವಾಗುತ್ತದೆ..? ಈ ಪ್ರಶ್ನೆಗಳು ಎದ್ದಿವೆ. ಕವಿರಾಜ್ ಅವರ ಈ ಬರಹ ಚರ್ಚೆಗೆ ಕಾರಣವಾಗಿದೆ.