ಅಭಿಷೇಕ್-ಅವಿವಾ ವಿವಾಹ; ಗಣ್ಯರಿಂದ ಶುಭ ಹಾರೈಕೆ
ಬೆಂಗಳೂರು; ನಟ ಅಭಿಷೇಕ್ ಅಂಬರೀಶ್ ಹಾಗೂ ಅವಿವಾ ಬಿಡಪ್ಪ ಮದುವೆ ಇಂದು ಅದ್ದೂರಿಯಾಗಿ ನೆರವೇರಿತು. ರಜನಿಕಾಂತ್ ಸೇರಿದಂತೆ ದಕ್ಷಿಣ ಭಾರತದ ಹಲವಾರು ಚಿತ್ರರಂಗ ಗಣ್ಯರು ಈ ಕ್ಷಣಕ್ಕೆ ಸಾಕ್ಷಿಯಾದರು.
ಗೌಡರ ಸಂಪ್ರದಾಯದಂತೆ ಮದುವೆ ಕಾರ್ಯ ನೆರವೇರಿತು. ಅವಿವಾಗೆ ಮಾಂಗಲ್ಯ ಧಾರಣೆ ಮಾಡುವ ಅಭಿಷೇಕ್ ಅವರು ವಿವಾಹ ಬಂಧನಕ್ಕೆ ಒಳಗಾದರು. ಈ ಸಂದರ್ಭದಲ್ಲಿ ಸ್ಯಾಂಡಲ್ ವುಡ್ ಸೇರಿದಂತೆ ದಕ್ಷಿಣ ಭಾರತದ ಎಲ್ಲಾ ಚಿತ್ರರಂಗಗಳ ಅನೇಕ ಗಣ್ಯರು ಹಾಜರಿದ್ದರು. ಹಲವು ವರ್ಷಗಳಿಂದ ಅವಿವಾ ಹಾಗೂ ಅಭಿಷೇಕ್ ಪ್ರೀತಿಸುತ್ತಿದ್ದರು. ಕಳೆದ ವರ್ಷ ಇವರ ವಿವಾಹ ನಿಶ್ಚಿತಾರ್ಥವಾಗಿತ್ತು.
ಜೂನ್ 7ರಂದು ಬೆಂಗಳೂರಿನ ಪ್ಯಾಲೇಸ್ ಗ್ರೌಂಡ್‌ನ ತ್ರಿಪುರ ವಾಸಿನಿಯಲ್ಲಿ ಅದ್ದೂರಿಯಾಗಿ ಆರತಕ್ಷತೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಇದೇ ಜೂನ್ 16ರಂದು ಮಂಡ್ಯದಲ್ಲಿ ಬೀಗರ ಊಟ ಕಾರ್ಯಕ್ರಮ ಏರ್ಪಡಿಸಲಾಗಿದ್ದು, 1 ಲಕ್ಷ ಜನ ಭಾಗವಹಿಸುವ ಸಾಧ್ಯತೆ ಇದೆ.