DistrictsPolitics

ಪ್ರವೀಣ್‌ ನೆಟ್ಟಾರು ಪತ್ನಿ ನೂತನಾ ಕೆಲಸದಿಂದ ಬಿಡುಗಡೆ; ಶುರುವಾಯ್ತು ರಾಜಕೀಯ ಕೆಸರೆರಚಾಟ

ಬೆಂಗಳೂರು; ಕೆಲ ತಿಂಗಳ ಹಿಂದೆ ಕೊಲೆಯಾದ ಹಿಂದೂ ಪರ ಸಂಘಟನೆ ಕಾರ್ಯಕರ್ತ ಪ್ರವೀಣ್‌ ನೆಟ್ಟಾರು ಅವರ ಪತ್ನಿ ನೂತನಾ ಕುಮಾರಿಗೆ ಮಂಗಳೂರಿನ ಜಿಲ್ಲಾಧಿಕಾರಿ ಕಚೇರಿಯಲ್ಲಿ ತಾತ್ಕಾಲಿಕ ಕೆಲಸ ನೀಡಲಾಗಿತ್ತು. ಆದ್ರೆ ಈಗ ಹೊಸ ಸರ್ಕಾರ ಬಂದಿರುವುದರಿಂದ ನೂತನಾ ಕುಮಾರಿ ಸೇರಿದಂತೆ ಹಳೆಯ ಸರ್ಕಾರದಲ್ಲಿ ತಾತ್ಕಾಲಿಕವಾಗಿ ನೇಮಕವಾದವರನ್ನು ಕೆಲಸದಿಂದ ಬಿಡುಗಡೆ ಮಾಡಲಾಗಿದೆ. ಇದು ಸ್ವಾಭಾವಿಕ ಪ್ರಕ್ರಿಯೆ. ನೂತನಾ ಕುಮಾರಿಯವರನ್ನು ಕೆಲಸದಿಂದ ತೆಗೆದಿದ್ದರೆ ಬಿಜೆಪಿಯವರಿಂದ ಆಕ್ರೋಶಗಳು ವ್ಯಕ್ತವಾಗುತ್ತಿವೆ. ಇನ್ನೊಂದೆಡೆ ಕಾಂಗ್ರೆಸ್‌ ನಾಯಕರು ಕೂಡಾ ಹಿಂದಿನ ಬಿಜೆಪಿ ಸರ್ಕಾರ ತಾತ್ಕಾಲಿಕ ಕೆಲಸ ನೀಡಿ ಕೊಣ್ಣೊರಿಸಿತ್ತು. ನಿಜವಾಗಿಯೂ ಕಾಳಜಿ ಇದ್ದಿದ್ದರೆ ಪರ್ಮನೆಂಟ್‌ ಕೆಲಸ ಕೊಡಬಹುದಾಗಿತ್ತು ಎಂದು ಹೇಳುತ್ತಿದ್ದಾರೆ.

ಈ ಬಗ್ಗೆ ಕರ್ನಾಟಕ ಕಾಂಗ್ರೆಸ್ ಟ್ವೀಟ್‌ ಮಾಡಿದೆ. ಭ್ರಷ್ಟಾಚಾರವೇ ಕುಲದೈವ ಎಂದು ನಂಬಿರೋ ಬಿಜೆಪಿಗೆ ನೀತಿ ನಿಯಮಗಳನ್ನು ಅಧ್ಯಯನ ಮಾಡಲು ಆಸಕ್ತಿ ಮತ್ತು ಸಮಯ ಇರಲು ಸಾಧ್ಯವೇ? ನಿಯಮದ ಪ್ರಕಾರ ಸರ್ಕಾರ ಬದಲಾದಾಗ ತಾತ್ಕಾಲಿಕ ನೇಮಕಾತಿಗಳು ಸಹಜವಾಗಿ ರದ್ದಾಗುತ್ತವೆ. ಬದುಕಿಗೆ ಶಾಶ್ವತ ದಾರಿ ತೋರಿಸದೆ ಇಂತಹ ಪೇಪರ್ ಚಾಕ್ಲೆಟ್ ನೀಡುವ ಮೂಲಕ ಬಿಜೆಪಿ ಪ್ರವೀಣ್ ಪತ್ನಿಗೆ ದ್ರೋಹವೆಸಗಿದೆ. ಎಂದು ಟ್ವೀಟ್‌ನಲ್ಲಿ ಬರೆದುಕೊಳ್ಳಲಾಗಿದೆ.

ಇನ್ನು ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ರವಿಕುಮಾರ್ ಕೂಡಾ ಈ ಬಗ್ಗೆ ಸ್ಪಷ್ಟನೆ ಕೊಟ್ಟಿದ್ದಾರೆ. ಸರ್ಕಾರ ಬದಲಾದಾಗ ಹಿಂದಿನ ಎಲ್ಲ ತಾತ್ಕಾಲಿಕ ನೇಮಕಾತಿಗಳು ಸ್ವಾಭಾವಿಕವಾಗಿ ರದ್ದಾಗುತ್ತವೆ. ಕೆಲಸದಿಂದ ಬಿಡುಗಡೆ ಮಾಡುವ ವಿಚಾರವನ್ನು ನೂತನಾ ಕುಮಾರಿ ಗಮನಕ್ಕೆ ತಂದಿದ್ದೇವೆ. ಅವರು ಕೆಲಸದಲ್ಲಿ ಮುಂದುವರೆಸುವಂತೆ ಪತ್ರ ಸಲ್ಲಿಸಿದರೆ ಸರ್ಕಾರದ ಗಮನಕ್ಕೆ ತರಲಾಗುತ್ತದೆ ಎಂದು ಹೇಳಿದ್ದಾರೆ.

ಸೆಪ್ಟೆಂಬರ್ 29, 2022ರಂದು ಅಂದಿನ ರಾಜ್ಯ ಬಿಜೆಪಿ ಸರ್ಕಾರ ಅಧಿಸೂಚನೆ ಹೊರಡಿಸಿತ್ತು. ಅದರಲ್ಲಿ ಪ್ರವೀಣ್ ಅವರ ಪತ್ನಿ ನೂತನ್ ಕುಮಾರಿ ಎಂ ಅವರನ್ನು ಮುಖ್ಯಮಂತ್ರಿ ಕಚೇರಿಯಲ್ಲಿ ‘ಗ್ರೂಪ್ ಸಿ’ ಹುದ್ದೆಗೆ ಗುತ್ತಿಗೆ ಆಧಾರದ ಮೇಲೆ ನೇಮಿಸಲಾಗಿತ್ತು. ಅವರ ನೇಮಕಾತಿಯ ಅಧಿಸೂಚನೆಯಲ್ಲಿ ಬಸವರಾಜ ಬೊಮ್ಮಾಯಿ ಅವರು ಮುಖ್ಯಮಂತ್ರಿಯಾಗಿ ಮುಂದುವರಿಯುವವರೆಗೆ ಅಥವಾ ಅವರ ಕೆಲಸಕ್ಕೆ ಸಂಬಂಧಿಸಿದ ಯಾವುದೇ ಹೊಸ ಆದೇಶ ಹೊರಡಿಸುವವರೆಗೆ ಅವರು ಸೇವೆಯಲ್ಲಿರುತ್ತಾರೆ ಎಂದು ತಿಳಿಸಲಾಗಿತ್ತು.

Share Post