ವಿದ್ಯುತ್ ಬಿಲ್ ಕಟ್ಟಿ ಎಂದಿದ್ದಕ್ಕೆ ವೈರ್ ಕಿತ್ತುಕೊಂಡು ಕಳುಹಿಸಿದ ಗ್ರಾಮಸ್ಥರು
ಯಾದಗಿರಿ; ಕಾಂಗ್ರೆಸ್ ಕೊಟ್ಟ ಗ್ಯಾರೆಂಟಿಗಳು ಇನ್ನೂ ಜಾರಿಗೆ ಬರದ ಹಿನ್ನೆಲೆಯಲ್ಲಿ ವಿದ್ಯುತ್ ಇಲಾಖೆ ಸಿಬ್ಬಂದಿ ಹೆಚ್ಚು ಸಂಕಷ್ಟ ಅನುಭವಿಸುವಂತಾಗಿದೆ. ಬಿಲ್ ಕಟ್ಟಿಸಿಕೊಳ್ಳಲು ಹಳ್ಳಿಗಳಿಗೆ ಹೋದಾಗ ಅಧಿಕಾರಿಗಳಿಗೆ ಸಾರ್ವಜನಿಕರಿಂದ ವಿರೋಧ ವ್ಯಕ್ತವಾಗುತ್ತಿದೆ. ಬಿಲ್ ಕಟ್ಟೋದಿಲ್ಲ ಎಂದು ಜಗಳ ಮಾಡಲು ಶುರು ಮಾಡಿದ್ದಾರೆ. ಇವತ್ತು ಕೂಡಾ ಅಂತಹದ್ದೇ ಒಂದು ಘಟನೆ ನಡೆದಿದೆ.
ವಿದ್ಯುತ್ ಬಿಲ್ ಕಟ್ಟದಿದ್ದಕ್ಕೆ ಯಾದಗಿರಿ ಜಿಲ್ಲೆ ಅಬ್ಬೆತುಮಕೂರು ಗ್ರಾಮದಲ್ಲಿ ಜೆಸ್ಕಾಂ ಸಿಬ್ಬಂದಿ ಕನೆಕ್ಷನ್ ಕಟ್ ಮಾಡಿದ್ದಾರೆ. ಇದರಿಂದ ರೊಚ್ಚಿಗೆದ್ದ ಗ್ರಾಮಸ್ಥರು ಜೆಸ್ಕಾಂ ಸಿಬ್ಬಂದಿಯನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಗ್ರಾಮದಲ್ಲಿ ಐದಾರು ಕುಟುಂಬಗಳು ಐದರಿಂದ ಹತ್ತು ಸಾವಿರದಷ್ಟು ಬಿಲ್ ಬಾಕಿ ಉಳಿಸಿಕೊಂಡಿದ್ದು, ಕಟ್ಟಿ ಎಂದಿದ್ದಕ್ಕೆ ಗಲಾಟೆ ಮಾಡಿದ್ದಾರೆ. ಸಾಲದೆಂಬಂತೆ ಕಾಂಗ್ರೆಸ್‌ನವರು ಕಟ್ಟಬೇಡಿ ಎಂದಿದ್ದಾರೆ ಎಂದು ಜಗಳ ಮಾಡಿದ್ದಾರೆ.
ಇನ್ನು ಇದೇ ವೇಳೆ ಜೆಸ್ಕಾಂ ಸಿಬ್ಬಂದಿ ಬಂದಿದ್ದ ವಾಹನದಲ್ಲಿದ್ದ ವೈರ್‌ಗಳನ್ನು ಕೂಡಾ ಗ್ರಾಮಸ್ಥರು ಕಿತ್ತುಕೊಂಡಿದ್ದಾರೆ ಎಂದು ಹೇಳಲಾಗುತ್ತಿದೆ.