ಮೊದಲ ಬಾರಿ ಆಯ್ಕೆಯಾದ ಶಾಸಕರಿಗೆ ತರಬೇತಿ; ಡಿಸಿಎಂ ಡಿ.ಕೆ.ಶಿವಕುಮಾರ್
ಬೆಂಗಳೂರು; ಇಂದು ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆ ನಡೆಯಿತು. ಈ ಸಭೆಯ ಬಳಿಕ ಮಾತನಾಡಿದ ಕೆಪಿಸಿಸಿ ಅಧ್ಯಕ್ಷ ಹಾಗೂ ಡಿಸಿಎಂ ಡಿ.ಕೆ.ಶಿವಕುಮಾರ್, ಎಲ್ಲಾ ಶಾಸಕರು ತಮ್ಮ ಕ್ಷೇತ್ರಗಳಲ್ಲಿ ಪ್ರವಾಸ ಮಾಡಿ ಮತದಾರರಿಗೆ ಅಭಿನಂದನೆ ತಿಳಿಸಬೇಕು, ನಾವು ಕೊಟ್ಟಿರುವ ಐದು ಗ್ಯಾರಂಟಿ ಯೋಜನೆಗಳು ಜಾರಿ ಆಗಬೇಕು. ಅರ್ಹ ಫಲಾನುಭವಿಗಳಿಗೆ ಇದರ ಪ್ರಯೋಜನ ಸಿಗುವಂತೆ ನೋಡಿಕೊಳ್ಳಬೇಕು ಎಂದು ಸೂಚಿಸಿದ್ದೇವೆ ಎಂದು ಹೇಳಿದರು.
ಅಧಿಕಾರ ಕೊಟ್ಟಿರುವ ಜನರಿಗೆ ನೀವು ಸರಿಯಾಗಿ ಸ್ಪಂದಿಸುವುದು ಹಾಗೂ ಉತ್ತಮ ಆಡಳಿತ ನೀಡುವುದು ನಮ್ಮ ಪ್ರಥಮ ಆದ್ಯತೆಯಾಗಿದೆ. ಶಾಸಕರು ಜನರ ಮನಸ್ಸು ಗೆಲ್ಲಬೇಕು, ಲೋಕಸಭೆ ಚುನಾವಣೆ ಪ್ರಮುಖವಾಗಿದ್ದು, ದ್ವೇಷ ಅಸೂಯೆ ಎಲ್ಲವನ್ನೂ ಮರೆತು ಎಲ್ಲರೂ ವಿಶ್ವಾಸಕ್ಕೆ ತೆಗೆದುಕೊಳ್ಳಬೇಕು. ಅಧಿಕಾರ ಬಂದಾಗ ಎಲ್ಲಾ ಅಧಿಕಾರಿಗಳು, ಗುತ್ತಿಗೆದಾರರು ನಿಮ್ಮನ್ನು ಸಂಪರ್ಕಿಸುತ್ತಾರೆ, ನೀವು ಯಾವುದರಲ್ಲೂ ಸಿಲುಕಿಕೊಳ್ಳಬೇಡಿ ಎಂಬ ಸಲಹೆ ನೀಡಿದ್ದೇವೆ. ಮತ್ತೆ ಶಾಸಕಾಂಗ ಸಭೆ ಕರೆದು ಮೊದಲ ಬಾರಿ ಶಾಸಕರಾಗಿ ಆಯ್ಕೆಯಾದವರಿಗೆ ತರಬೇತಿ ನೀಡಲಾಗುವುದು ಎಂದು ಹೇಳಿದರು.
ಪೊಲೀಸ್ ಇಲಾಖೆ ಕೇಸರಿಕರಣ ಎಂದರೆ ಯಾವ ರೀತಿ ಎಂಬ ಪ್ರಶ್ನೆಗೆ ಉತ್ತರಿಸಿದ ಡಿ.ಕೆ.ಶಿವಕುಮಾರ್, ‘ಮಾಜಿ ಮುಖ್ಯಮಂತ್ರಿಗಳು ಪೊಲೀಸ್ ಇಲಾಖೆ ಕೇಸರಿಕರಣ ಹಾಗೂ ನೈತಿಕ ಪೊಲೀಸ್ ಗಿರಿಗೆ ಬೆಂಬಲ ನೀಡಿದ್ದರು. ಯಾರೊಬ್ಬರೂ ಕಾನೂನನ್ನು ಕೈಗೆತ್ತಿಕೊಳ್ಳಲು ನಾವು ಅವಕಾಶ ನೀಡುವುದಿಲ್ಲ. ಅದು ಕಾಂಗ್ರೆಸಿಗರಾಗಲಿ, ಬೇರೆ ಪಕ್ಷದವರಾಗಲಿ. ಕಾನೂನು ಪೊಲೀಸರಿಂದ ಮಾತ್ರ ರಕ್ಷಣೆ ಆಗಬೇಕು. ಅದನ್ನು ಎಲ್ಲರೂ ಪಾಲಿಸಬೇಕು. ರಾಜ್ಯದ ಮೂರ್ನಾಲ್ಕು ಕಡೆಗಳಲ್ಲಿ ಪೊಲೀಸ್ ಅಧಿಕಾರಿಗಳು ತಮ್ಮ ಸಮವಸ್ತ್ರ ಕಳಚಿ ರಾಜಕೀಯ ಸಂಘಟನೆಗಳ ರೀತಿಯಲ್ಲಿ ವಸ್ತ್ರ ಧರಿಸಿದ್ದರು. ಇದು ಸಂವಿಧಾನ ಪಾಲನೆ ಅಲ್ಲ. ಕರ್ನಾಟಕ ಪೊಲೀಸ್ ಇಲಾಖೆಗೆ ಅದರದೇ ಆದ ಘನತೆ ಇದೆ. ಅದನ್ನು ಕಾಪಾಡಿಕೊಳ್ಳಬೇಕು. ಪ್ರಿಯಾಂಕ್ ಖರ್ಗೆ ನಮ್ಮ ಪಕ್ಷದ ಮಾಧ್ಯಮ ವಿಭಾಗದ ಮುಖ್ಯಸ್ಥರಾಗಿ ರಾಜ್ಯದ ಅತ್ಯಂತ ದೊಡ್ಡ ಭ್ರಷ್ಟಾಚಾರದ ಬಗ್ಗೆ ಧ್ವನಿ ಎತ್ತಿದಾಗ ಅವರಿಗೆ ಸಮನ್ಸ್ ನೀಡಲಾಗಿತ್ತು? ಬೇರೆ ಯಾರಿಗೆ ಈ ರೀತಿ ಸಮನ್ಸ್ ನೀಡಿದ್ದರು? ಪೊಲೀಸರು ಕಾನೂನು ರೀತಿಯಲ್ಲಿ ಕೆಲಸ ಮಾಡಬೇಕು’ ಎಂದು ತಿಳಿಸಿದರು.