ದುಡ್ಡು ಹಂಚದವರು ವಾಪಸ್ ಕೊಡಿ; ಕಾರ್ಯಕರ್ತರಿಗೆ ನಾರಾಯಣಗೌಡ ಒತ್ತಡ
ಮಂಡ್ಯ; ಚುನಾವಣೆಯಲ್ಲಿ ಮತದಾರರಿಗೆ ಹಣ ಹಂಚೋದು, ಈ ಮೂಲಕ ಮತ ಪಡೆಯಲು ಪ್ರಭಾವ ಬಳಸೋದು ಎಲ್ಲರಿಗೂ ಗೊತ್ತೇ ಇದೆ. ಇದು ಕಾನೂನಿನ ಪ್ರಕಾರ ಅಪರಾಧ ಎಂದು ಗೊತ್ತಿದ್ದರೂ ಈ ಕೆಲಸ ಎಲ್ಲಾ ನಡೆಯುತ್ತೆ. ಹಾಗೆ ಮತದಾರರಿಗೆ ಹಂಚಲು ಕೊಟ್ಟ ಹಣ ನೀವು ಹಂಚಿಲ್ಲ, ಅದನ್ನು ವಾಪಸ್ ಕೊಡಿ ಎಂದು ಸೋತ ಅಭ್ಯರ್ಥಿಯೊಬ್ಬರು ಕಾರ್ಯಕರ್ತರ ಬಳಿ ಪರಿಪರಿ ಬೇಡಿಕೊಂಡಿದ್ದಾರೆ ಎನ್ನಲಾಗಿದೆ.
ಮಾಜಿ ಸಚಿವ ಕೆ.ಸಿ.ನಾರಾಯಣಗೌಡರು ಈ ಬಾರಿ ಬಿಜೆಪಿ ಅಭ್ಯರ್ಥಿಯಾಗಿ ಕೆಆರ್ ಪೇಟೆಯಿಂದ ಸ್ಪರ್ಧೆ ಮಾಡಿದ್ದರು. ಆದ್ರೆ ಮತದಾರ ಅವರ ಕೈ ಹಿಡಿದಿಲ್ಲ. ಅವರು ಮೂರನೇ ಸ್ಥಾನಕ್ಕೆ ತಳ್ಳಲ್ಪಟ್ಟಿದ್ದಾರೆ. ಆದರೂ, ಮಂಡ್ಯದಲ್ಲಿ ಅವರು ಇಂದು ಕೃತಜ್ಞತಾ ಸಭೆ ನಡೆಸಿದರು. ಈ ಸಭೆಯಲ್ಲಿ ಮಾತನಾಡಿರುವ ನಾರಾಯಣಗೌಡರು, ಮತದಾರರಿಗೆ ಹಂಚಲು ನಾನು ಮುಖಂಡರಿಗೆ ಹಣ ಕೊಟ್ಟಿದ್ದೆ. ಆದ್ರೆ ನನ್ನ ಆಪ್ತರೇ ಹಣ ಹಂಚದೇ ನನಗೆ ಮೋಸ ಮಾಡಿದ್ದಾರೆ ಎಂದು ಅಸಮಧಾನ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ.
ಯಾರಾದರೂ ಹಣ ಹಂಚದೇ ಹಾಗೆ ಇಟ್ಟುಕೊಂಡಿದ್ದರೆ ಅದನ್ನು ವಾಪಸ್ ಕೊಡಿ. ಆ ಹಣದಿಂದ ನಾನು ಟ್ರಸ್ಟ್ ರಚನೆ ಮಾಡಿ ಬಡವರ ಸೇವೆ ಮಾಡುತ್ತೇನೆ ಎಂದು ನಾರಾಯಣಗೌಡರು ಹೇಳಿದ್ದಾರೆ ಎಂದು ಹೇಳಲಾಗುತ್ತಿದೆ.
ಈ ಬಾರಿ ಕೆಆರ್ ಪೇಟೆಯಲ್ಲಿ ಜೆಡಿಎಸ್ ಅಭ್ಯರ್ಥಿ ಹೆಚ್.ಟಿ.ಮಂಜು 79 ಸಾವಿರ ಮತ ಪಡೆದು ಗೆಲುವು ಸಾಧಿಸಿದ್ದಾರೆ. ನಾರಾಯಣಗೌಡರು 37 ಸಾವಿರ ಮತಗಳನ್ನು ಗಳಿಸಿ ಮೂರನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿದ್ದಾರೆ.